ಕುಮಾರ ಎದುರಾಳಿಯೇ ಅಲ್ಲ: ಶಾಸಕ ಮಧು
ಹೊಸನಗರ: ಮುಂದಿನ ಲೋಕಸಭೆಚುನಾವಣೆಗೆ ಬಂಗಾರಪ್ಪ ಕುಟುಂಬದ ಸ್ಪರ್ಧೆ ಹೆಚ್ಚಿನ ಒಲವು ಕೇಳಿ ಬರುತ್ತಿದೆ. ನಮ್ಮಕುಟುಂಬ ಎಂದರೆ ನಮ್ಮ ನಾಲ್ವರಲ್ಲಿ ಒಬ್ಬರು ಸ್ಪರ್ಧೆ ನಿಶ್ಚಿತ. ಯಾರು ಸರ್ಧೆ ಮಾಡಬೇಕೆಂದು ಕಾರ್ಯಕರ್ತರೆ ನಿರ್ಧರಿಸುತ್ತಾರೆ. ಕಾಂಗ್ರೆಸ್ನಿಂದ ಕುಮಾರ್ ಬಂಗಾರಪ್ಪ ಸ್ಪರ್ಧೆ ಬಗ್ಗೆ ಕೇಳಿಬರುತ್ತಿದೆ. ಆದರೆ ಕುಮಾರ ಬಂಗಾರಪ್ಪ ನಮಗೆ ಯಾವತ್ತಿಗೂ ಎದುರಾಳಿ ಅಲ್ಲವೇ ಅಲ್ಲ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಗಾರಪ್ಪ ಕುಟುಂಬಕ್ಕೆ ಕುಮಾರ ಬಂಗಾರಪ್ಪ ಸ್ಪರ್ಧೆಯಲ್ಲ. ವಿಧಾನ ಸಬೆ ಚುನಾವಣೆಯಲ್ಲಿ ಕುಮಾರರಿಗೆ ಸೊರಬ ಜನತೆ ಮೂರನೇ ಸ್ಥಾನ ನೀಡಿ ಬದಿಗೆ ಕೂರಿಸಿದ್ದಾರೆ. ಅದು ಸಾಲದೇ ಮತ್ತೆ ನಿಲ್ಲುತ್ತೇನೆ ಎಂದರೆ ಮತ್ತೊಮ್ಮೆ ಬದಿಗೆ ಕೂರಿಸುತ್ತಾರೆ ಎಂದರು. ಜಯರಾಮ್, ಶ್ರೀಪತಿ ರಾವ್, ನಾಗರಾಜ್, ಸುಮತಿ ಪೂಜಾರ್ ಮತ್ತಿತರರು ಹಾಜರಿದ್ದರು.
ಮನುಷ್ಯ ಪರಿಸರದಲ್ಲಿ ಬದುಕು ಕಾಣಬೇಕು: ಜನಾರ್ದನ ರಾವ್
ಹೊಸನಗರ: ಮನುಷ್ಯ ಪರಿಸರದಜೊತೆಜೊತೆಗೆ ಬದುಕಬೇಕು. ಅದನ್ನು ಮರೆತು ಜೀವಿಸುತ್ತೇನೆ ಎಂದರೆ ಅವನಿಗೆ ಹೆಚ್ಚು ದಿನ ಉಳಿವಿಲ್ಲ ಎಂದು ಸಂತೆಕಡೂರು ಪರಿಸರಕೇಂದ್ರ ನಿರ್ದೇಶಕ ಕೆ.ಎಲ್.ಜನಾರ್ದನ ರಾವ್ ಹೇಳಿದರು. ತಾ.ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾಲೂಕಿನ ನಾಗರಕೊಡಿಗೆ ನರಸಿಂಹಮೂರ್ತಿ ಮನೆಯಂಗಳದ ಹಾಡಿಯಲ್ಲಿ ನಡೆದ ದಿ.ಮಂಜಮ್ಮ, ಪಟೇಲ್ ಗರುಡಪ್ಪಗೌಡ ದತ್ತಿ ನಿಧಿ ಪರಿಸರ ಉಳಿಸಿ-ಸಾಹಿತ್ಯ ಬೆಳೆಸಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗ್ರಾ.ಪಂ ಸದಸ್ಯರಾದ ಶಶಿಧರ್ ಪಟೇಲ್, ನಾಗವೇಣಿ, ಭೋಜಯ್ಯ, ರಮಾಗಿರೀಶ್, ಜಯಂತಿರಘುನಾಥ್, ಕೊನೆಗಾರ ರತ್ನಾಕರ್, ವೇಣುಗೋಪಾಲ್, ಸೀನಕುಲಾಲ್ ಮತ್ತಿತರು ಉಪಸ್ಥಿತರಿದ್ದರು. ಕೋಡೂರು ಚಿಣ್ಣರ ಮೇಳ ತಂಡದಿಂದ ತಾಳಮದ್ದಲೆ, ಸನ್ಮತಿ ಸಂಗೀತ ಶಾಲೆಯಿಂದ ಸಂಗಿತ ಕಾರ್ಯಕ್ರಮ ನಡೆಯಿತು. ಸಂತೋಷ್ ನಿರೂಪಿಸಿದರು.ರವಿ ಸ್ವಾಗತಿಸಿದರು. ನಾರವಿ ಹೊಸನಗರ ವಂದಿಸಿದರು.
ಭದ್ರಾ ಜಲಾಶಯದಿಂದ ತುಂಗಭದ್ರಾಕ್ಕೆ ನೀರು
ಶಿವಮೊಗ್ಗ: ಭದ್ರಾ ಜಲಾಶಯದಿಂದ ಫೆಬ್ರವರಿ 28ರ ಸಂಜೆ 6 ಗಂಟೆಯಿಂದ ನೀರನ್ನು ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣವನ್ನು ನಿಯಂತ್ರಿಸಿ ಮಾರ್ಚ್ 9ರ ವರೆಗೆ ಭದ್ರಾ ನದಿಗೆ ಹರಿಯ ಬಿಡಲಾಗುವುದು. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದ ಪ್ರಯುಕ್ತ ರಾಜನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಮತ್ತು 2013-14ನೇ ಸಾಲಿನ ಹಿಂಗಾರು ಹಂಗಾಮಿಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುವ ಕುರಿತು ಹಾಗೂ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ನೀರನ್ನು ಬಿಡಲಾಗುತ್ತಿದೆ. ಈ ಅವಧಿಯಲ್ಲಿ ರೈತ ಬಾಂಧವರು ನದಿದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಮೂಲಭೂತವಾದ ಎಲ್ಲ ಸಮಾಜದಲ್ಲೂ ಇದೆ: ಬೇಗ್
ಶಿವಮೊಗ್ಗ: ಮೂಲಭೂತವಾದ ಸಂಘಪರಿವಾರದಲ್ಲಷ್ಟೇ ಅಲ್ಲ, ಎಲ್ಲ ಸಮಾಜದಲ್ಲೂ ಇದೆ. ಅವರನ್ನು ಮಾತ್ರ ಟೀಕಿಸುವುದು ಸರಿ ಅಲ್ಲ ಎಂದು ವಾರ್ತಾ ಸಚಿವ ರೋಷನ್ ಬೇಗ್ ಹೇಳಿದರು.
ನಗರದಲ್ಲಿ ಶನಿವಾರ ಅವರು “Aeé ಕ BMPÊÅÛ·é’ ಉರ್ದು ಪತ್ರಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮೂಲಭೂತವಾದ ಎಲ್ಲೇ ಇದ್ದರೂ ಅದು ಕೆಟ್ಟದ್ದೇ ಆಗಿದೆ. ಎಲ್ಲಾ ಮೂಲಭೂತವಾದವೂ ಕೆಟ್ಟದ್ದೇ. ಇದನ್ನು ಎಲ್ಲರೂ ಖಂಡಿಸಬೇಕು. ಇಲ್ಲದಿದ್ದರೆ ನಮಗೆ ವಿಶ್ವಾಸಾರ್ಹತೆ ಇರುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಒಳ್ಳೆಯದು- ಕೆಟ್ಟದ್ದು ಎಲ್ಲವೂ ಸಮಾಜದಲ್ಲಿ ಇರುತ್ತದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮಾಧ್ಯಮಗಳು ಗಮನಿಸಬೇಕು ಎಂದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿದ್ಯೆಗೆ ಹೆಚ್ಚು ಮಹತ್ವ ಕೊಡಿ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಹೆಸರು ಕೈಬಿಟ್ಟಿರುವುದಕ್ಕೆ ಖಂಡನೆ
ಸಾಗರ: ಮಾ. 1ರಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಂಬಾರಗೋಡ್ಲು- ಕಳಸವಳ್ಳಿ ಕಡವು ಸೇವೆಗೆ ಸುಮಾರು 4.80 ಕೋಟಿ ವೆಚ್ಚದಲ್ಲಿ 2 ಎಲ್ಸಿಟಿ ನೌಕೆ ಹಾಗೂ ಲ್ಯಾಂಡಿಂಗ್ ರ್ಯಾಂಪ್ ಕಾಮಗಾರಿಗಳ ಶಂಕುಸ್ಥಾಪನೆಯ ಕಲ್ಲಿನಲ್ಲಿ ಬಿಜೆಪಿ ಮುಖಂಡರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವ ಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್.ರಾಮಪ್ಪ ಖಂಡಿಸಿದ್ದಾರೆ. ಶಂಕುಸ್ಥಾಪನೆ ಕಲ್ಲಿನಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಹೆಸರು ಹೊರತುಪಡಿಸಿದರೆ ಉಳಿದೆಲ್ಲಾ ಹೆಸರುಗಳು ಕಾಂಗ್ರೆಸ್ ಪಕ್ಷದವರದ್ದಾಗಿದೆ. ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲೆಯ ಇತರೆ ಬಿಜೆಪಿ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಕಲ್ಲಿನಲ್ಲಿ ಕೆತ್ತಿಸದೆ ಇಲಾಖೆ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ. ಅಂಬಾರಗೋಡ್ಲು- ಕಳಸವಳ್ಳಿಗೆ ಹೆಚ್ಚುವರಿ ಲಾಂಚ್ ಬಿಡುವ ಯೋಜನೆ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿತ್ತು. ಕಾಮಗಾರಿ ವಿಳಂಬವಾಗಿದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಾಂಚ್ ಬಿಡುವುದು ವಿಳಂಬವಾಗಿದೆ. ಸರ್ಕಾರ ಹೆಚ್ಚುವರಿ ಲಾಂಚ್ ಒದಗಿಸುತ್ತಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ, ಜಿಲ್ಲೆಯ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಹೆಸರನ್ನು ಬಿಟ್ಟಿರುವುದು ಸರಿಯಲ್ಲ ಎಂದಿದ್ದಾರೆ.
ಲೋಕಾ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಮಾರ್ಚ್ ಮಾಹೆಯ ನಿಗದಿತ ದಿನಾಂಕಗಳಂದು ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿ ಮತ್ತು ಪ್ರವಾಸಿ ಮಂದಿರಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮಾರ್ಚ್ 6ರಂದು ಬೆಳಗ್ಗೆ 11ರಿಂದ 1ರವರೆಗೆ ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ, ಮಧ್ಯಾಹ್ನ 3ರಿಂದ 5ರವರೆಗೆ ಭದ್ರಾವತಿ ತಾಲೂಕಿನ ಬಿಆರ್ಪಿ ಸಿಂಗನಮನೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ, ಮಾರ್ಚ್ 13ರಂದು ಬೆಳಗ್ಗೆ 11ರಿಂದ 1ರವರೆಗೆ ಸಾಗರ ತಾಲೂಕಿನ ಕಾರ್ಗಲ್ ಪ್ರವಾಸಿ ಮಂದಿರದಲ್ಲಿ, ಮಾರ್ಚ್ 20ರಂದು ಬೆಳಗ್ಗೆ 11ರಿಂದ 1ರವರೆಗೆ ಶಿಕಾರಿಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಾಜರಿರುತ್ತಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಸಮಸ್ಯೆಗಳಿದ್ದಲ್ಲಿ ಖುದ್ದಾಗಿ ಹಾಜರಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಉಪಾಧೀಕ್ಷಕರು ತಿಳಿಸಿದ್ದಾರೆ.
ಬಾಂಗ್ಲಾ ನುಸುಳುಕೋರರು ಭದ್ರತೆಗೆ ಅಪಾಯಕಾರಿ
ಶಿವಮೊಗ್ಗ: ಬಾಂಗ್ಲಾದೇಶಿಯರ ಅಕ್ರಮ ನುಸುಳುವಿಕೆ ಮತ್ತು ಅಲ್ಲಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳ ಸಂಚಾಲಕ ದೀನದಯಾಳು, ಭಾರತಕ್ಕೆ ನುಸುಳುತ್ತಿರುವ ಬಾಂಗ್ಲಾ ನುಸುಳುಕೋರರ ವರ್ತನೆಯು ದೇಶದ ಅರ್ಥ ವ್ಯವಸ್ಥೆ ಹಾಗೂ ಆಂತರಿಕ ಭದ್ರತೆಗೆ ಅಪಾಯ ತರುತ್ತಿದೆ ಎಂದು ಹೇಳಿದರು. ಅಸ್ಸಾಂನಿಂದ ಪ್ರಾರಂಭವಾದ ಅಕ್ರಮ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿತಿ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನುಸುಳುಕೋರರದಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದು ಹೇಳಿದರು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಿರಂತರ ಅತ್ಯಾಚಾರ, ಹಲ್ಲೆಗಳು ನಡೆದಿದೆ. ಕೂಡಲೇ ಭಾರತ ಸರ್ಕಾರ ಮಧ್ಯ ಪ್ರವೇಶಿಸಿ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಧಾವಿಸುವ ಜತೆಗೆ ಭಾರತಕ್ಕೆ ಆಗಮಿಸಿರುವ ಹಿಂದೂಗಳಿಗೂ ಆಶ್ರಯ ಕೊಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಆವಿಷ್ಕಾರ ನಡೆಸಲಿ: ವೆಂಕಟರಾಮಯ್ಯ
ಶಿವಮೊಗ್ಗ: ಸರ್ ಸಿ.ವಿ. ರಾಮನ್ ಅವರು ನೊಬೆಲ್ ಪ್ರಶಸ್ತಿಯ ಬಗ್ಗೆ ಕನಸು ಕಂಡಿದ್ದರು. ಅವರ ಆವಿಷ್ಕಾರದ ನಂತರ ಪ್ರಶಸ್ತಿ ಖಚಿತವಾಗಿ ಬರುತ್ತದೆಂದು ಭಾವಿಸಿದ್ದರು. ಅದರಂತೆಯೇ ಆಯಿತು. ಮೇಧಾವಿಗಳು ಏನನ್ನು ಬಯಸುತ್ತಾರೆಯೋ ಅಂತೆಯೇ ನಡೆಯುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ತಿಳಿಸಿದರು. ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ದಿನಾಚರಣೆ ಪ್ರಯುಕ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ವಯಂಚಾಲಿತ ಹವಾಮಾನ ಕೇಂದ್ರದ ಉದ್ಘಾಟಿಸಿ ಮಾತನಾಡಿದರು. ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ಅವರು ಅಧ್ಯಕ್ಷತೆ ವಹಿಸಿ, ವಿಜ್ಞಾನ ಮತ್ತು ವಿಜ್ಞಾನಿಗಳು ಸಮಾಜಕ್ಕೆ ಅತ್ಯಾವಶ್ಯಕ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಮುಂದಿನ ಸರ್ ಸಿ.ವಿ. ರಾಮನ್ ಅವರಂತಾಗಬೇಕೆಂದು ಹೇಳಿದರು.
ಆಚಾರ್ಯತ್ರಯರ ಭವನ ನಿರ್ಮಾಣಕ್ಕೆ ಆಗ್ರಹ
ಶಿವಮೊಗ್ಗ: ಭಾರತೀಯ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಆಚಾರ್ಯತ್ರಯರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಲ್ಲಿ ಆಚಾರ್ಯತ್ರಯರ ಭವನ ನಿರ್ಮಿಸುವಂತೆ ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಧಾನಸಭೆ ಅಧಿವೇಶನದ ಬಜೆಟ್ ಮೇಲಿನ ಚರ್ಚೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾಗಿ ತಿಳಿಸಿದ ಅವರು, ಸಮಾಜಕ್ಕೆ ಸಂದೇಶ ಸಾರಿದ ಇತಿಹಾಸ ಪುರುಷರ ಹೆಸರಿನಲ್ಲಿ ಭವನ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು. ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಭವನ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯ ಅವರ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಭವನ ನಿರ್ಮಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾಗಿ ವಿವರಿಸಿದರು.
ಚುನಾವಣೆಯಲ್ಲಿ ಜೆಡಿಎಸ್ಗೆ
ಗೆಲವು: ಮಧು ವಿಶ್ವಾಸ
ಸಾಗರ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆಲವು ಶತಸಿದ್ಧವಾಗಿದ್ದು, ರಾಷ್ಟ್ರದಲ್ಲಿ ರಚನೆಯಾಗುವ ತೃತೀಯ ರಂಗ ಸರ್ಕಾರದಲ್ಲಿ ಜೆಡಿಎಸ್ ಪ್ರಮುಖಪಾತ್ರ ವಹಿಸಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಪಟ್ಟಣದಲ್ಲಿ ನಡೆದ ಪಕ್ಷದ ನಗರ ಘಟಕದ ಸಮಾವೇಶದಲ್ಲಿ ಮಾತನಾಡಿ, ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಲು ಯಡಿಯೂರಪ್ಪ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವನ್ನೆಲ್ಲ ಸುರಿದಿದ್ದರು. ಅದಕ್ಕೆ ಪ್ರಾಯಶ್ಚಿತ ಎಂಬಂತೆ ಜೈಲುವಾಸ ಅನುಭವಿಸಬೇಕಾಯಿತು ಎಂದು ಲೇವಡಿ ಮಾಡಿದರು. ಒಂದು ಕಡೆ ರಾಘವೇಂದ್ರ ತಾವು ಸಂಸದರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಒಳ್ಳೆಯ ಕೆಲಸ ಮಾಡಿರುವ ರಾಘವೇಂದ್ರ ಅವರ ಬದಲು ನೀವು ಲೋಕಸಭೆಗೆ ಸ್ಪರ್ಧೆಸಲು ಕಾರಣ ಏನು ಎನ್ನುವ ಕುರಿತು ಯಡಿಯೂರಪ್ಪ ಉತ್ತರ ನೀಡಬೇಕು ಎಂದು ಸವಾಲು ಹಾಕಿದರು.
ಕಾರ್ಗಲ್ ಪ.ಪಂ.ಗೆ 9 ಲಕ್ಷದ ಉಳಿತಾಯದ ಬಜೆಟ್
ಜೋಗ್ಫಾಲ್ಸ್: ಕಾರ್ಗಲ್ ಪ.ಪಂ.ಗೆ 2014-15ನೇ ಸಾಲಿನ ಬಜೆಟ್ ಮಂಡಿಸಲಾಗಿದ್ದು, 9 ಲಕ್ಷದ ಉಳಿತಾಯ ಯೋಜಿಸಲಾಗಿದೆ ಎಂದು ಪ.ಪಂ ಅಧ್ಯಕ್ಷ ಕೆ.ಸಿ. ಹರೀಶ್ಗೌಡ ತಿಳಿಸಿದರು. ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿ, ಬಜೆಟ್ ಗಾತ್ರದಲ್ಲಿರುವ ಬಂಡವಾಳದಲ್ಲಿ ಪಂಚಾಯಿತಿಯ ಬ್ಯಾಂಕ್ ಖಾತೆ, ಖಜಾನೆ ಇತರೆ ಮೂಲಗಳಿಂದ ಆರಂಭಿಕ ಶುಲ್ಕ 10.43 ಕೋಟಿ ಇದ್ದು. ರಾಜಸ್ವ ಸ್ವಿಕೃತಿ, ಬಂಡವಾಳ ಸ್ವಿಕೃತಿ, ಅಸಾಧಾರಣ ಸ್ವಿಕೃತಿಗಳಿಂದ 7.46 ಕೋಟಿ ಆದಾಯ ನಿರೀಕ್ಷೆ ಇದೆ ಎಂದರು. ಸ್ವಿಕೃತಗೋಳ್ಳುವ ಹೆಚ್ಚಿನ ಪಾಲು ಆದಾಯವನ್ನು ಪಟ್ಟಣದ ನೃರ್ಮಲ್ಯ ನಿರ್ವಹಣೆ ಮತ್ತು ಘನ ತ್ಯಾಜ್ಯವಸ್ತುಗಳ ನಿರ್ವಹಣೆಗೆ ಒತ್ತು ನೀಡಲಾಗಿದೆ. ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ, ಚರಂಡಿ ನಿರ್ವಹಣೆ, ಸೇತುವೆಗಳ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೆ.ಸಿ. ಹರೀಶ್ಗೌಡ ತಿಳಿಸಿದರು.
ರೈತ ವಿರೋಧಿ ನೀತಿಗೆ ಆಕ್ರೋಶ; ಎಸಿಗೆ ಮನವಿ
ಸಾಗರ: ಕೃಷಿ ವಿಶ್ವವಿದ್ಯಾನಿಲಯ ನಿರ್ಮಾಣ ಹೆಸರಿನಲ್ಲಿ ನೂರಾರು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವ ಆಡಳಿತದ ರೈತವಿರೋಧಿ ಕ್ರಮ ಪ್ರತಿಭಟಿಸಿ ಶನಿವಾರ ತಾಲೂಕಿನ ಆನಂದಪುರಂ ಹೋಬಳಿಯ ಇರುವಕ್ಕಿ ಗ್ರಾಮದ ರೈತರು ಮಹಾಗಣಪತಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಸಾಮಾಜಿಕ ಚಿಂತನಾ ವೇದಿಕೆ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಮಾತನಾಡಿ, ಇರುವಕ್ಕಿ ಗ್ರಾಮದ ಸರ್ವೆ ನಂ. 13, 30, 31, 45 ಮತ್ತು 88ರಲ್ಲಿ ಕೃಷಿ ವಿಶ್ವವಿದ್ಯಾನಿಲಯಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಜಮೀನಿನಲ್ಲಿ ರೈತರು ನೂರಾರು ವರ್ಷಗಳಿಂದ ಕೃಷಿ ಜಮೀನು ಮಾಡುತ್ತಿದ್ದು, ತಮ್ಮ ಬದುಕಿನ ಆಸರೆಯಾಗಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ವಾಸಿಸುತ್ತಿರುವ ಕೆಲವರಿಗೆ ಹಕ್ಕುಪತ್ರ ಕೊಡಲಾಗಿದೆ. ಇನ್ನು ಕೆಲವರು ಬಗರ್ಹುಕುಂ ಸಕ್ರಮ ಯೋಜನೆಯಡಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗ ಅವರನ್ನು ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದರು.
ಅಡಕೆ ಬೆಳೆಗಾರರ ಕ್ಷಮೆ ಕೋರಲು ಆಗ್ರಹ
ಶಿವಮೊಗ್ಗ: ಎನ್ಡಿಎ ಸರ್ಕಾರದ ಅವಧಿಯಲ್ಲಿ 2002ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ದೆಹಲಿಗೆ ಹೋದ ತಕ್ಷಣ ಅಡಕೆಯನ್ನು ಹಾನಿಕಾರಕ ಪದಾರ್ಥಗಳ ಪಟ್ಟಿಯಿಂದ ಕೈಬಿಡುವುದಾಗಿ ಆಶ್ವಾಸನೆ ನೀಡಿದ ಅದೃಶ್ಯರಾದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಯುಪಿಎ ಸರ್ಕಾರದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ ಟೀಕಿಸಿದ್ದಾರೆ. ವಾಜಪೇಯಿ ನೇತೃತ್ವದ ಸರ್ಕಾರವಿದ್ದಾಗ ಬಹುತೇಕ ಬಿಜೆಪಿ ನಾಯಕರನ್ನೊಳಗೊಂಡು ರಚಿಸಿದ ಬಿಜೆಪಿ ನಾಯಕರ ತಜ್ಞ ಸಮಿತಿಯು ಅಡಕೆ ನಿಷೇಧದ ಬಗ್ಗೆ ನೀಡಿದ ಮಾರಕ ವರದಿ ಮುಚ್ಚಿಡುವ ಪ್ರಯತ್ನವನ್ನು ಈ ನಾಯಕರು ಮಾಡುತ್ತಿದ್ದಾರೆ. ಬದಲಾಗಿ ಹಾಲಿ ಯುಪಿಎ ಸರ್ಕಾರವೇ ಅಡಕೆ ನಿಷೇಧ ಕುರಿತು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಬೇಕು. ಇಲ್ಲವೇ, ಪ್ರಮಾಣಪತ್ರವನ್ನು ಬಹಿರಂಗಪಡಿಸಬೇಕು ಎಂದಿದ್ದಾರೆ.
ಆಧ್ಯಾತ್ಮಿಕತೆಯಿಂದ ಸಾರ್ಥಕ ಬದುಕು: ಜಡೆಮಠ ಶ್ರೀ
ಸೊರಬ: ಜಂಗಮ ಎಂದರೆ ಭಗವಂತ ಎಂಬುದಾಗಿದೆ. ಯಾವುದೇ ಜಾತಿಗೆ ಅಂಟಿರದ ಸರ್ವವ್ಯಾಪಿ ವಿಶಾಲವಾದ ಭಗವಂತನನ್ನು ಮನುಷ್ಯ ತನ್ನ ಸ್ವಾರ್ಥ ಸಾಧನೆ, ಜಾತೀಯತೆಗೆ ಅಂಟಿಸಿಕೊಂಡಿರುವುದು ಖೇದಕರ ಸಂಗತಿ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತಸ್ವಾಮಿಗಳು ಹೇಳಿದರು. ಪಟ್ಟಣದ ಚಾಮರಾಜಪೇಟೆಯ ಪಿತಾಶ್ರೀ ಭವನದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯ ಮತ್ತು ಲಯನ್ಸ್, ಲಯನೆಸ್ ಕ್ಲ್ಲಬ್ ಆಶ್ರಯದಲ್ಲಿ ನಡೆದ ಶಿವರಾತ್ರಿ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ. ಭಟ್ ಅಧ್ಯಕ್ಷತೆ ವಹಿಸಿ, ಕೇವಲ ಆರೋಗ್ಯದತ್ತ ಚಿಂತಿಸುತ್ತಿದ್ದರೆ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ. ದೇಹದ ಆರೋಗ್ಯಕ್ಕಿಂತ ಮನಸ್ಸಿಗಾಗಿ ಆರೋಗ್ಯ ಇರಬೇಕು. ಮನಸ್ಸಿನ ಸಮತೋಲನವೇ ಬುದ್ಧಿಯ ಸ್ಥಿಮಿತಕ್ಕೆ ಕಾರಣ. ಈ ನಿಟ್ಟಿನಲ್ಲಿ ವೈದ್ಯ, ವಿಜ್ಞಾನ, ಆಧ್ಯಾತ್ಮದ ಮೂಲಕ ಮನಸ್ಸಿನ ಹತೋಟಿ ಸಾಧ್ಯ ಎಂದರು.
ದುಂಡಸಿ ವಿರಕ್ತಮಠದ ಕುಮಾರಪ್ರಭು ಸ್ವಾಮೀಜಿ ಇತರರು ಇದ್ದರು.
ಜಿಲ್ಲೆ ಅಭಿವೃದ್ಧಿಗೆ ಕುಮಾರ್ ಬಂಗಾರಪ್ಪ ಗೆಲವು ಅನಿವಾರ್ಯ
ಸೊರಬ: ಶಿವಮೊಗ್ಗ ಕ್ಷೇತ್ರ ಪ್ರಜ್ಞಾವಂತ ಮತದಾರರಿರುವ ಕ್ಷೇತ್ರ. ಇಲ್ಲಿ ಅನುಕಂಪದ ಅಲೆಯಾಗಲಿ ಹಣದ ಹೊಳೆಯಾಗಲಿ ನಡೆಯುವುದಿಲ್ಲ. ಅಭಿವೃದ್ಧಿ ಪರ ಚಿಂತನೆ ಹಾಗೂ ಜನಪರ ಕಾಳಜಿಯ ಯಾವುದೇ ವ್ಯಕ್ತಿ ಸ್ಪರ್ಧಿಸಿದರೂ ಗೆಲುವು ಸುಲಭ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮಂಜುನಾಥ ಭವಿಷ್ಯ ನುಡಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ, ತಾಲೂಕು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ನಿಂದ ಎಸ್. ಬಂಗಾರಪ್ಪ ಅವರ ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ಗೆ ಪೈಪೋಟಿ ನೀಡುವುದಿಲ್ಲ. ಕಳೆದ ವಿಧಾನ ಚುನಾವಣೆಯಲ್ಲಿ ನಡೆದ ಅನುಕಂಪದ ಅಲೆ ಲೋಕಸಭಾ ಚುನಾವಣೆಯಲ್ಲಿ ಬೀಸುವುದಿಲ್ಲ ಎಂದು ಹೇಳಿದರು. ಅಜ್ಜಪ್ಪ, ಜೆ. ಶಿವಾನಂದಪ್ಪ, ಉಮೇಶ್, ಮಂಚಿ ಹನುಮಂತಪ್ಪ, ನಿಟ್ಟಕ್ಕಿ ಜೀವಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

