ಸುದ್ದಿಯಲ್ಲಿರಲೆಂದೇ ವಿವಾದಾತ್ಮಕ ವಿಷಯ ಆಡದಿರಿ
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಮಾ.2
ಕನ್ನಡ ಭಾಷೆ ಬೆಳೆಸಲು ಅಗತ್ಯವಾದ ವಿಷಯ ಬಿಟ್ಟು ವಿವಾದಾತ್ಮಕ ವಿಷಯಗಳನ್ನು ಮಾತನಾಡಿ ಯಾವಾಗಲೂ ಸುದ್ದಿಯಲ್ಲಿರಲು ಕೆಲವು ಸಾಹಿತಿಗಳು ಬಯಸುವುದು ಸರಿಯಲ್ಲ ಎಂದು ಹನಿಗವಿ ಡುಂಡಿರಾಜ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಎಂಪಿಎಂ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಸಮಾರೋಪ ಸಮ್ ಆರೋಪವಾಗಿರದೆ ಸಮ್ಮೇಳನದಲ್ಲಾದ ಕಾರ್ರ್ಯಕ್ರಮಗಳ ಒಟ್ಟಾರೆ ವಿಶ್ಲೇಷಣೆ ಆಗಿರಬೇಕೆಂದು ಅಭಿಪ್ರಾಯಿಸಿದರು.
ಮೆಚ್ಚತಕ್ಕ ವಿಷಯ: ಸಮ್ಮೇಳನದ ಉದ್ಘಾಟನಾ ಭಾಷಣ ಮಾಡಿದ ಕಾಳೇಗೌಡ ನಾಗವಾರ ಅವರ ಉದ್ಘಾಟನಾ ಭಾಷಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರು ತಮ್ಮ ಮಾತಿನಲ್ಲಿ ಭದ್ರಾವತಿಯ ಸಮಗ್ರ ಚಿತ್ರಣವನ್ನು ಸಭಿಕರ ಮುಂದಿಡಲು ಯತ್ನಿಸಿದ್ದು ಶ್ಲಾಘನೀಯ. ಸಮ್ಮೇಳನದಲ್ಲಿ ಅರ್ಥಪೂರ್ಣವಾದ 3 ಗೋಷ್ಠಿಗಳನ್ನು ಮಾತ್ರ ಹಮ್ಮಿಕೊಂಡಿರುವುದು ಸಮಯ ಪಾಲನೆಯ ದೃಷ್ಟಿಯಿಂದ ಮೆಚ್ಚತಕ್ಕ ವಿಷಯ ಎಂದರು.
ಸಮ್ಮೇಳನಾಧ್ಯಕ್ಷರ ಬದುಕು-ಬರಹ ಗೋಷ್ಠಿಯಲ್ಲಿ ಪ್ರೊ. ಎಂ.ಬಿ. ನಟರಾಜ್ ಹಾಗೂ ಡಾ.ನರೇಂದ್ರಬಾಬು ಅವರು ಸಮ್ಮೇಳನಾಧ್ಯಕ್ಷರ ಬದುಕಿನ ಚಿತ್ರಣವನ್ನು ಹಾಗೂ ಅವರ ಸಾಮಾಜಿಕ ಕಳಕಳಿಯನ್ನು ಮನೋಜ್ಞವಾಗಿ ಚಿತ್ರಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದ ಅವರು, ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ವಾಸುದೇವ ನಾಡಿಗ್ ಅವರ ಸ್ವರಚಿತ ಕವನವನ್ನು ಕೇಳಿದಾಗ ಯುವ ಕವಿಗಳಿಗೆ ಇನ್ನೂ ಭವಿಷ್ಯವಿದೆ ಎನ್ನಿಸಿತು ಎಂದು ನುಡಿದರು.
ಮಾತು-ಮಂಥನ ಗೋಷ್ಠಿಯಲ್ಲಿ ಕಾರ್ಖಾನೆ-ಕಾರ್ಮಿಕ-ಬದುಕು-ಈ ಹೊತ್ತಿನ ಆತಂಕ ವಿಷಯ ಬಹಳ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಭದ್ರಾವತಿಯಲ್ಲಿ ಕಾರ್ಖಾನೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿತ್ತು ಎಂದು ಹೇಳಿದರು.
ವಿಷಾದ: ಬೆಂಗಳೂರಿನಲ್ಲಿ ಲೆಟರ್ಹೆಡ್ಗಳಲ್ಲಿ ಜೀವಂತವಾಗಿರುವ ಕನ್ನಡ ಸಂಘಟನೆಗಳಿಗಿಂತ ಇಲ್ಲಿನ ಸಂಘಟನೆಗಳು ಅರ್ಥಪೂರ್ಣವಾಗಿ ಕೆಲಸ ಮಾಡುತ್ತಿವೆ. ಕನ್ನಡಕ್ಕೆ ಇಂದು ಕನ್ನಡಿಗರಿಂದಲೇ ಅಪತ್ತು ಬಂದಿದೆ. ಕನ್ನಡವ ಕಾಪಾಡು ಕನ್ನಡಿಗರಿಂದ ಎಂದು ಮೊರೆ ಹೋಗುವ ಕಾಲ ಸನ್ನಿಹಿತವಾಗಿದೆ. ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಕನ್ನಡ ಕಲಿಸುತ್ತಿಲ್ಲ.
ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಾಗುತ್ತಿದೆ. ಸಾಂಸ್ಕೃತಿಕವಾಗಿ ಮಕ್ಕಳು ಬಡವರಾಗುತ್ತಿದ್ದಾರೆ. ಕುವೆಂಪು ಕೃತಿಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದರೆ ನೊಬೆಲ್ ಪಾರಿತೋಶಕವೇ ದೊರಕುತ್ತಿತ್ತು ಎಂದು ಡುಂಡಿರಾಜ್ ವಿಷಾದಿಸಿದರು. ತಮ್ಮ ಕೆಲವು ಹನಿಗವನಗಳನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಕನ್ನಡಿಗರು ಸಂಘಟಿತರಾಗಿ ಎಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಾರೋ ಆ ಭಾಗದ ಸಮಸ್ಯೆಗಳ ಚರ್ಚೆ ಸಮ್ಮೇಳನದಲ್ಲಾಗಬೇಕೆಂಬುದು ಪರಿಷತ್ತಿನ ಉದ್ದೇಶ ಎಂದರು.
ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, ತಾಲೂಕು ಕ.ಸಾ.ಪ ಕಟ್ಟಬೇಕೆಂದಿರುವ ಕನ್ನಡ ಭವನಕ್ಕೆ ತಾವು ಶಾಸಕರ ನಿಧಿಯಿಂದ 5 ಲಕ್ಷ ಅನುದಾನವನ್ನು ಕೊಡುವ ಆಶ್ವಾಸನೆಯನ್ನು ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಎಂ.ಚಂದ್ರಶೇಖರಯ್ಯ ಭದ್ರಾವತಿಗೆ ಕಲೆ-ಸಾಹಿತ್ಯದಷ್ಟೇ ಮುಖ್ಯ ಕಾರ್ಖಾನೆ ಮತ್ತು ಕಾರ್ಮಿಕ. ಆರ್ಥಿಕತೆಯನ್ನಿಟ್ಟುಕೊಂಡೇ ನಾವು ಕಲಾತ್ಮಕವಾಗಿ ಬದುಕುವುದನ್ನು ಕಲಿಯಬೇಕು. ಈ ಹಿನ್ನೆಲೆಯಲ್ಲಿ ಇಂದು ನಡೆದ ಕಾರ್ಖಾನೆ-ಕಾರ್ಮಿಕ-ಬದುಕು-ಈ ಹೊತ್ತಿನ ಆತಂಕ ಮಾತು-ಮಂಥನ ಬಹು ಮುಖ್ಯ ಚರ್ಚೆಯಾಗಿತ್ತು ಎಂದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಮಂಜುನಾಥ್ ಅಭಿನಂದನಾ ನುಡಿಗಳನ್ನಾಡಿದರು. ಮಾ.8 ಮತ್ತು 9ರಂದು ಶಿವಮೊಗ್ಗದಲ್ಲಿ ಲಕ್ಷ್ಮಿನಾರಾಯಣ ಭಟ್ಟರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. 'ಭೂಮಿ-ಈ ಹೊತ್ತಿನ ಆತಂಕ' ವಿಷಯ ಕುರಿತು ಮಾತು-ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಕುರಿತ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿ.ಪಂ. ಸದಸ್ಯ ಎಚ್.ಎಲ್. ಷಡಾಕ್ಷರಿ, ಜಿ.ಪಂ. ಸದಸ್ಯೆ ಸುಜಾತ, ಎಂಪಿಎಂ ಸಕ್ಕರೆ ಕಾರ್ಖಾನೆ ಉದ್ಯೋಗಿಗಳ ಸಂಘದ ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಭುವನೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ ಮೊದಲಾದವರು ಇದ್ದರು.
ತಾಲೂಕು ಕ.ಸಾ.ಪ. ಮಹಿಳಾ ಸದಸ್ಯೆಯರು ನಾಡಗೀತೆ ಹಾಡಿದರು. ಕಾರ್ಯದರ್ಶಿ ಎಚ್.ತಿಮ್ಮಪ್ಪ ಸ್ವಾಗತಿಸಿದರು. ಮತ್ತೋರ್ವ ಕಾರ್ಯದರ್ಶಿ ಪಿ.ಕೆ.ಸತೀಶ್ ನಿರೂಪಿಸಿ, ಎಂ.ನಾಗಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

