ಸಮಗ್ರ ವಿಶ್ವವಿದ್ಯಾಲಯ ಚಿಂತನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ. 3
ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜು, ಶಿವಮೊಗ್ಗದ ಪಶುವೈದ್ಯ ಕಾಲೇಜು- ಕೃಷಿ ಕಾಲೇಜುಗಳನ್ನು ಸೇರಿಸಿ ಒಂದೇ ವಿಶ್ವವಿದ್ಯಾಲಯ ಮಾಡಿದರೆ ಸಮಗ್ರವಾಗಿರುತ್ತದೆ. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರೂ ಇದೇ ಚಿಂತನೆ ಹೊಂದಿದ್ದಾರೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಮೊದಲ ಕುಲಪತಿ ಡಾ. ಸಿ. ವಾಸುದೇವಪ್ಪ ಹೇಳಿದರು.
ಸೋಮವಾರ ಅವರು ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೈತನ ಬಳಿ ಜಮೀನಿದ್ದರೆ ಅಲ್ಲಿ ರಾಸುಗಳಿರುತ್ತವೆ. ಮೀನಿದ್ದರೆ ಮೀನು ಸಾಕಣೆಯೂ ಮಾಡುತ್ತಿರುತ್ತಾನೆ. ಹಾಗಾಗಿ ಸರ್ಕಾರ ಸಮಗ್ರ ವಿಶ್ವವಿದ್ಯಾಲಯಗಳತ್ತ ಚಿಂತನೆ ಹೊಂದಿದೆ. ನಾನೂ ಕೈಜೋಡಿಸುತ್ತೇನೆ ಎಂದರು.
ವಿಶ್ರಾಂತ ಕುಲಪತಿಗಳ ಅಸೋಸಿಯೇಷನ್ ಈ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಸಭೆಗಳೂ ನಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಉದ್ದೇಶಗಳು: ವಿವಿಧ ಬೆಳೆಗಳ ಅಧ್ಯಯನ ನಡೆದಿದೆ. ಜತೆಗೆ ತರಕಾರಿ ಹಾಗೂ ಆಹಾರ ಧಾನ್ಯಗಳ ಬಗ್ಗೆಯೂ ಸಂಶೋಧನೆ ನಡೆಯಬೇಕು. ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ದಾರಿ ಕಂಡುಕೊಳ್ಳುವ ಇಚ್ಚೆ ಇದೆ ಎಂದು ನೂತನ ಕುಲಪತಿಗಳು ಹೇಳಿದ್ದಾರೆ.
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ಉದ್ದೇಶವಿದೆ ಎಂದ ಅವರು, ಪದವಿ ಕಾಲೇಜುಗಳನ್ನು ಸ್ನಾತಕೋತ್ತರ ಪದವಿ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಬೇಕು ಎಂದರು.
ಸರ್ಕಾರ ಹಾಗೂ ಐಸಿಎಆರ್ ಅನುದಾನವನ್ನು ಬಳಸಿ ವಿಶ್ವವಿದ್ಯಾಲಯವನ್ನು ರೂಪಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿ ಎಲ್ಲಿ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪಿಸಬೇಕು ಎಂಬುದರ ಬಗ್ಗೆ ನಾನು ಮುಕ್ತವಾಗಿದ್ದೇನೆ. ಕನಿಷ್ಠ 50 ಎಕರೆ ಜಾಗ ಬೇಕು. ಯಾವುದೇ ಜಾಗವನ್ನು ಮನಸಿನಲ್ಲಿಟ್ಟುಕೊಂಡು ನಾನು ಬಂದಿಲ್ಲ ಎಂದು ಡಾ. ಸಿ. ವಾಸುದೇವಪ್ಪ ಹೇಳಿದರು.
ಮೊದಲು ನಾನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಜಿ ಚರ್ಚಿಸುತ್ತೇನೆ. ನಂತರ ಮುಂದಿನ ವಿಷಯ ಎಂದ ಅವರು, ಈ ದಿಸೆಯಲ್ಲಿ ಒಂದು ಸಮಿತಿಯನ್ನೂ ರಚಿಸಿ ಅಭಿಪ್ರಾಯ ಪಡೆಯಲಾಗುವುದು ಎಂದರು.
ಬ್ರಹ್ಮಾವರ, ಶಿವಮೊಗ್ಗ, ಹಿರಿಯೂರು ಹಾಗೂ ಮೂಡಿಗೆರೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳನ್ನು ವಿವಿ ಸುಪರ್ದಿಗೆ ಪಡೆಯಲಾಗುವುದು ಎಂದರು.
ನೂತನ ಕುಲಪತಿ ಪರಿಚಯ
ಸಿ. ವಾಸುದೇವಪ್ಪ ಅವರು ಶಿವಮೊಗ್ಗ ಜಿಲ್ಲೆಯವರೇ. ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದವರು. 1970ರಲ್ಲಿ ಮೀನುಗಾರಿಕೆ ಪದವಿ ಪಡೆದ ಇವರು ನಂತರ ರಾಯಚೂರು ವಿಭಾಗದಲ್ಲಿ ವಿಸ್ತರಣಾ ಮುಂದಾಳು ಆಗಿ ಕಾರ್ಯನಿರ್ವಹಿಸಿದರು. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಕೆಲಸ ಮಾಡಿರುವ ಇವರು ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಆಗಿದ್ದ ಇವರನ್ನು ರಾಜ್ಯಪಾಲರು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಮೊದಲ ಕುಲಪತಿಯನ್ನಾಗಿ ನೇಮಕ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

