ನೀತಿ ಸಂಹಿತೆ ಅಡ್ಡಿ: ಸಾಹಿತ್ಯ ಸಮ್ಮೇಳನ ಮುಂದಕ್ಕೆ
ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಯಾಗಿದ್ದು, ಅನಿವಾರ್ಯವಾಗಿ ಸಮ್ಮೇಳನ ಮುಂದೂಡಲ್ಪಟ್ಟಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಖ್ಯಾತ ಸಾಹಿತಿ ಲಕ್ಷ್ಮೀನಾರಾಯಣ ಭಟ್ಟರ ಸರ್ವಾಧ್ಯಕ್ಷತೆಯಲ್ಲಿ ಮಾರ್ಚ್ 8ಮತ್ತು 9ರಂದು 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಉದ್ದೇಶಿಸಲಾಗಿತ್ತು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಜೂನ್ 1ಮತ್ತು 2ರಂದು ನಡೆಸಲಾಗುವುದೆಂದು ಕನ್ನಡ ಸಾಹಿತ್ಯ ಪರಿಷಜ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಯಾವುದೇ ವ್ಯತ್ಯಾಸವಿಲ್ಲ: ವಾರ್ತಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸಮ್ಮೇಳನದ ಅಂಗವಾಗಿ ಈಗಾಗಲೇ ನಿಗದಿಪಡಿಸಲಾಗಿದ್ದ ಗೋಷ್ಠಿಗಳು ಯಥಾವತ್ತಾಗಿ ನಿಗದಿಪಡಿಸಿದ ಸ್ಥಳದಲ್ಲಿ ಬದಲಾದ ದಿನಾಂಕದಂದು ಸಕಾಲಕ್ಕೆ ಸರಿಯಾಗಿ ನಡೆಯಲಿವೆ. ಇದರಲ್ಲಿ ಯಾವುದೇ ವ್ಯತ್ಯಾಸಗಳು ಇರುವುದಿಲ್ಲ ಎಂದವರು ತಿಳಿಸಿದ್ದಾರೆ.
ಸಮ್ಮೇಳನ ನಡೆಸಿ, ಸಾಮೂಹಿಕವಾಗಿ ಊಟ ಹಾಕುವ ಹಾಗಿಲ್ಲ ಎಂದು ಚುನಾವಣಾಧಿಕಾರಿ ನಿರ್ದೇಶನ ನೀಡಿದರು. ಈ ಮಧ್ಯೆ ಊಟದ ವ್ಯವಸ್ಥೆ ಬೇಡ, ಸಮ್ಮೇಳನ ನಡೆಯಲಿ ಎಂಬ ಅಭಿಪ್ರಾಯವೂ ಬಂತು. ಅಂತಿಮವಾಗಿ ತಡ ರಾತ್ರಿವರೆಗೆ ಚರ್ಚೆ ನಡೆಸಿ ಸಮ್ಮೇಳನವನ್ನೇ ಮುಂದೂಡಲು ನಿರ್ಧರಿಸಲಾಯಿತೆಂದರು.
ಸುಮಾರು 2-3 ಸಾವಿರ ಜನರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡದೇ ಹೋದರೆ ಸರಿಯಾಗುವುದಿಲ್ಲ, ಜಿಲ್ಲೆಯ ಬೇರೆ ಕಡೆಗಳಿಂದ ಬಂದವರು ಎಲ್ಲಿಗೆ ಹೋಗಬೇಕು. ಈ ಕಾರಣಕ್ಕೆ ಮುಂದೂಡಲಾಯಿತು. ಅದೇ ರೀತಿ ಸಮ್ಮೇಳನದಲ್ಲಿ ಭೂಮಿ ಇವತ್ತಿನ ಆತಂಕ ವಿಚಾರವಾಗಿ ಒಂದು ಗೋಷ್ಠಿ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ಕಾಗೋಡು ತಿಮ್ಮಪ್ಪನವರು ವಹಿಸಬೇಕಾಗಿತ್ತು. ಜೊತೆಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಎಂ.ಜೆ. ಅಪ್ಪಾಜಿ ಸಹ ಪಾಲ್ಗೊಳ್ಳಬೇಕಾಗಿತ್ತು. ನೀತಿ ಸಂಹಿತೆ ಕಾರಣ ಇವರಿಬ್ಬರೂ ವೇದಿಕೆ ಏರುವ ಹಾಗಿಲ್ಲ. ಹೀಗಾಗಿ ಕಾರ್ಯಕ್ರಮವನ್ನು ಮುಂದೂಡುವುದೇ ಒಳಿತೆಂದು ತೀರ್ಮಾನಿಸಲಾಯಿತೆಂದರು.
ಪತ್ರಿಕಾಗೋಷ್ಠಿಯಲ್ಲಿ ಶೀಲಾ ಸುರೇಶ್, ನವೀನ್ಕುಮಾರ್ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಕಥಾ ಕಮ್ಮಟ
ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಸಾಹಿತ್ಯದ ಕಥಾಪ್ರಕಾರದಲ್ಲಿ ಕೃಷಿ ಮಾಡಲು ಆಸಕ್ತಿ ಹೊಂದಿರುವ ರಾಜ್ಯದ ಉದಯೋನ್ಮುಖ ಬರಹಗಾರರಿಗಾಗಿ ಏಪ್ರಿಲ್ ಮಾಹೆಯ ಎರಡು ಅಥವಾ ಮೂರನೇ ವಾರದಲ್ಲಿ ಸಾಗರ ಸಮೀಪದ ಹೊನ್ನೆಮರಡು ಪರಿಸರದಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಕಥಾಕಮ್ಮಟವನ್ನು ಏರ್ಪಡಿಸಲಾಗಿದೆ. ಈ ಕಥಾಕಮ್ಮಟದಲ್ಲಿ ನಾ. ಡಿಸೋಜ, ಕುಂ. ವೀರಭದ್ರಪ್ಪ, ಬಂಜೆಗೆರೆ ಜಯಪ್ರಕಾಶ್ ಸೇರಿದಂತೆ ನಾಡಿನ ಹೆಸರಾಂತ ಬರಹಗಾರರು ಮಾರ್ಗದರ್ಶನ ಮಾಡಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ ಎಂದ ಅವರು, ಶಿಬಿರದಲ್ಲಿ ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು 200 ಪ್ರತಿನಿಧಿ ಶುಲ್ಕವನ್ನು ಪಾವತಿಸಿ, ಸಂಘಟಕರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

