ರೈತರ ಮೇಲಿನ ಕೇಸ್ ಹಿಂಪಡೆಯಿರಿ
ಕ.ಪ್ರ.ವಾರ್ತೆ, ಭದ್ರಾವತಿ, ಮಾ.10
ರಾಜ್ಯ ಸರ್ಕಾರದ ಸಾಲ ವಸೂಲಾತಿ ನೀತಿ ಮತ್ತು ಸಾಲ ವಸೂಲಾತಿಗೆ ರೈತರನ್ನು ಜೈಲಿಗೆ ಅಟ್ಟುವ ಪಿಎಲ್ಡಿ ಬ್ಯಾಂಕಿನ ದೌರ್ಜನ್ಯ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ಆವರಣದಲ್ಲಿ ಬಹಿರಂಗಸಭೆ ನಡೆಸಲಾಯಿತು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ ಮಾತನಾಡಿ, ಒಂದೆಡೆ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಪರಿತಪಿಸುತ್ತಿದ್ದರೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ಗೊಬ್ಬರ ಮುಂತಾದವಕ್ಕೆ ಹಣ ಒದಗಿಸಲು ಕಷ್ಟಪಡುತ್ತಿರುವಾಗ ಪಿಎಲ್ಡಿ ಬ್ಯಾಂಕಿನವರು ಸಾಲ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ರೈತರ ಜಮೀನು ಜಪ್ತಿ ಮಾಡಿ ರೈತರನ್ನು ಜೈಲಿಗೆ ಹಾಕಲು ಮುಂದಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಅತ್ತ ಬೆಳೆಯೂ ಇಲ್ಲ, ಇತ್ತ ಸಾಲ ಮನ್ನಾ ಪರಿಹಾರವೂ ಇಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಿಎಲ್ಡಿ ಬ್ಯಾಂಕ್ ರೈತರ ಸಾಲ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ರೈತರನ್ನು ಜೈಲಿಗೆ ಕಳಿಸಲು ಮುಂದಾಗಿದೆ. ಕೂಡಲೇ ಸರ್ಕಾರ ವಸೂಲಾತಿ ನಿಲ್ಲಿಸಿ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಾಗಿ ಬಿಟ್ಟಿರುವ 6 ಟಿಎಂಸಿ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಎಚ್ಚರಿಕೆ: ಕೆಲವು ಖಾಸಗಿ ಲೇವಾದೇವಿಗಾರರು ರೈತರಿಗೆ ಸಾಲ ನೀಡಿ ಮುಂಗಡ ಚೆಕ್, ಪ್ರಾಮಿಸರಿ ನೋಟುಗಳು ಮತ್ತು ಮನೆಯ ದಾಖಲೆಗಳನ್ನು ಬರೆಸಿಕೊಂಡು ರೈತರಿಂದ ಹೆಚ್ಚಿನ ದರದ ಬಡ್ಡಿ ಪಡೆಯುತ್ತಿದ್ದಾರೆ. ರೈತರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿ ಅನ್ಯಾಯ ಮಾಡುತ್ತಿದ್ದಾರೆ. ಅಂತಹವರ ಮೇಲೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ರೈತ ಸಂಘವೇ ನೇರವಾಗಿ ಲೇವಾದೇವಿ ಮಾಡುವವರ ಅಂಗಡಿ ಮತ್ತು ಮನೆಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ನ್ಯಾಯ ಕೇಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಕಳೆದ ಬಜೆಟ್ನಲ್ಲಿ ರೈತರ ಪರವಾಗಿ ಯಾವುದೇ ಯೋಜನೆಗಳನ್ನು ನೀಡದೇ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇಂದ್ರ ಸರ್ಕಾರವೇ ರಚಿಸಿದ ಗೋರಖ್ ಸಿಂಗ್ ಸಮಿತಿಯು ಅಡಕೆ ಬೆಳೆಗಾರರ ಪರವಾಗಿ ನೀಡಿದ ವರದಿಯನ್ನು ಅನುಷ್ಠಾನಗೊಳಿಸದೇ ಬೆಳೆಗಾರರನ್ನು ಕಂಗಾಲಾಗಿಸಿದೆ. ಅಡಕೆ ಕೊಳೆರೋಗದಿಂದ ಹಾನಿಯಾಗಿರುವ ರೈತರಿಗೆ ಪರಿಹಾರ ಇನ್ನೂ ದೊರಕಿರುವುದಿಲ್ಲ ಎಂದರು.
ಬೇಡಿಕೆಗಳ ಮನವಿ ಪತ್ರವನ್ನು ನೀಡುವಾಗ ತಹಸೀಲ್ದಾರ್ ಅವರು ಇರಲಿಲ್ಲ. ಇದರಿಂದ ಕಚೇರಿಯ ಅಧಿಕಾರಿಗಳು ಖುದ್ದು ಹಾಜರಿರಲಿಲ್ಲ. ಈ ಸಂದರ್ಭ ರೈತರು ತಾಲೂಕು ಕಚೇರಿಯೊಳಗೆ ಪ್ರವೇಶಿಸಿ, ಧರಣಿ ಆರಂಭಿಸಿದರು. ತಹಸೀಲ್ದಾರರು ಖುದ್ದಾಗಿ ಬಂದು ಮನವಿ ಸ್ವೀಕರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಅವರು ಪಟ್ಟುಹಿಡಿದರು.
ಈ ಸಂದರ್ಭ ಕೆ.ಬೆನಕಪ್ಪ, ಶಿವಮೊಗ್ಗ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ. ವೀರೇಶ್, ತಾಲೂಕು ಅಧ್ಯಕ್ಷ ರಾಮಚಂದ್ರರಾವ್ ಘೋರ್ಪಡೆ, ಜಿ.ಎಸ್. ಬಸವರಾಜಪ್ಪ ಗೌಡರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

