ಬಿ ಫಾರಂ ಇಲ್ಲದೇ ಭಂಡಾರಿ ನಾಮಪತ್ರ
ಶಿವಮೊಗ್ಗ: ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಮಂಜುನಾಥ ಭಂಡಾರಿ ಅವರು ಬುಧವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಆದರೆ, ಅವರಿಗಿನ್ನೂ ಪಕ್ಷದ ಬಿ ಫಾರಂ ಸಿಕ್ಕಿಲ್ಲ. ಹಾಗಾಗಿ ಬಿ ಫಾರಂ ಇಲ್ಲದೆಯೇ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಭಂಡಾರಿ ಅವರ ಪುತ್ರಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಾ ಭಂಡಾರಿ ಹಾಗೂ ವಕೀಲ ಪ್ರವೀಣ್ ಕುಮಾರ್ ಇದ್ದರು. ಸೂಚಕರಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸಹಿ ಮಾಡಿದರು.
ಇದಕ್ಕೂ ಮುನ್ನ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಮುಖಂಡರ ಜತೆ ಮಂಜುನಾಥ ಭಂಡಾರಿ ಅವರು ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಬಿಎಚ್ ರಸ್ತೆ, ನೆಹರೂ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಆಗಮಿಸಿದರು.
ಡಿಸಿ ಕಚೇರಿಯಲ್ಲಿ ಪೌರಾಡಳಿತ ಸಚಿವ ವಿನಯ್ಕುಮಾರ್ ಸೊರಕೆ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಚ್.ಎಸ್. ಸುಂದರೇಶ್, ಎಚ್.ಸಿ. ಯೋಗೀಶ್ ಸಹ ಸೇರಿಕೊಂಡರು.
ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರಿಂದ ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ವಾಹನ ಸಂಚಾರ ತಡೆಯಲಾಗಿತ್ತು. ಮಹಾವೀರ ವೃತ್ತದಿಂದ ಮುಂದಕ್ಕೆ ಮುಖಂಡರನ್ನು ಹೊರತುಪಡಿಸಿ ಬೇರೆಯವರನ್ನು ಬಿಡಲಿಲ್ಲ.
ಭಾರಿ ಭದ್ರತೆ: ಕುಮಾರ್ ಬಂಗಾರಪ್ಪ ಅವರು ಪಕ್ಷದ ಟಿಕೆಟ್ಗೆ ಕೋರಿಕೆ ಸಲ್ಲಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಬುಧವಾರ ಪಕ್ಷದ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಕಚೇರಿ ಎದುರಿನ ರಸ್ತೆಯನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿಯೂ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಇದನ್ನು ಮೀರಿ ಡಿಸಿ ಕಚೇರಿ ಒಳಪ್ರವೇಶಿಸುವ ಹಲವು ಮುಖಂಡರು, ಕಾರ್ಯಕರ್ತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ಮೆರವಣಿಗೆಯಲ್ಲಿ ಆಗಮಿಸಿದ ಕಾರ್ಯಕರ್ತರು ಮಹಾವೀರ ಸರ್ಕಲ್ ನಲ್ಲಿಯೇ ನಿಂತಿದ್ದರಿಂದ ಗಂಟೆಗಳ ಕಾಲ ಬಾಲರಾಜ ಅರಸ್ ರಸ್ತೆ ಹಾಗೂ ಸವಳಂಗ ರಸ್ತೆ ಬಂದ್ ಆಗಿತ್ತು. ಇಲ್ಲಿಯೇ ಅಭ್ಯರ್ಥಿ ಮಂಜುನಾಥ ಭಂಡಾರಿ ಭಂಡಾರಿ, ಸಚಿವರಾದ ಕಿಮ್ಮನೆ ರತ್ನಾಕರ್, ವಿನಯಕುಮಾರ್ ಸೊರಕೆ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಇಸ್ಮಾಯಿಲ್ ಖಾನ್, ಶಾಂತವೀರಪ್ಪಗೌಡ, ಎನ್. ರಮೇಶ್, ಇಸ್ಮಾಯಿಲ್ ಖಾನ್, ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಮುಖಂಡರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬಿ ಫಾರಂ ನನಗೇ ಸಿಗಲಿದೆ: ಇವತ್ತು (ಬುಧವಾರ) ಒಳ್ಳೆಯ ಸಮಯವಿದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಇದು ಮೊದಲೇ ನಿಗದಿಯಾದ ಕಾರ್ಯಕ್ರಮ. ತರಾತುರಿ ಏನಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿ ಫಾರಂಗೆ ಸಹಿ ಆಗುತ್ತಿದೆ. ಇನ್ನೆರಡು ದಿನದಲ್ಲಿ ಕೈಸೇರಬಹುದು. ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೆ ಬಿ ಫಾರಂ ಸಲ್ಲಿಸಲು ಅವಕಾಶವಿದೆ ಎಂದರು.
ಪಕ್ಷದಲ್ಲಿ ಯಾವದೇ ಗೊಂದಲ ಇಲ್ಲ. ಜಿಲ್ಲಾ ಸಚಿವರು, ಜಿಲ್ಲಾಧ್ಯಕ್ಷರೂ ಸೇರಿದಂತೆ ಹಲವರು ತಮ್ಮೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದಾರೆ ಎಂದ ಅವರು, ಕುಮಾರ್ ಬಂಗಾರಪ್ಪ ಅವರನ್ನು ಮನವೊಲಿಸಲು ಹಿರಿಯ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ.
ನಾನೂ ಅವರನ್ನು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರುವಂತೆ ಆಹ್ವಾನ ನೀಡಿದ್ದೆ. ಕಾರ್ಯದೊತ್ತಡದಿಂದ ಬರಲು ಆಗುತ್ತಿಲ್ಲ ಎಂದಿದ್ದರು. ಮುಂದಿನ ದಿನಗಳಲ್ಲಿ ತಮ್ಮ ಪರವಾಗಿ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎದುರಾಳಿ ಯಾರೆಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರ ಬಗ್ಗೆಯೂ ಆರೋಪ ಮಾಡುವುದಿಲ್ಲ. ಮತದಾರರು ಪ್ರಜ್ಞಾವಂತರಿದ್ದು, ಯಾರಿಗೆ ಮತ ನೀಡಬೇಕೆಂಬ ಅರಿವು ಅವರಿಗಿದೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ವಿಶ್ವಾಸ ನನಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

