ಶಿವಮೊಗ್ಗ

ಹಣ ಗಳಿಕೆ ಸಾಧನವಾದ ಶಿಕ್ಷಣ

Published On :

ಕ.ಪ್ರ.ವಾರ್ತೆ   ಶಂಕರಘಟ್ಟ   ಮಾ.19
ಇಂದು ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ತಮ್ಮ ಹೀನ ನಡತೆಯ ಬಗ್ಗೆ ನಾಚಿಕೆಪಡುತ್ತಿಲ್ಲ. ದೇಶ ಮತ್ತು ಸಮಾಜ ಇದಕ್ಕಿಂತ ಇನ್ನೂ ಕೆಳಮಟ್ಟಕ್ಕೆ ಬರಲು ಸಾಧ್ಯವೇ ಎಂದು ಚಿಂತಿಸುವಂತೆ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯ 24ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ನ್ಯಾಯಮೂರ್ತಿ, ಸಮಾಜದ ಆತಂಕ, ಅದಕ್ಕಿರುವ ಪರಿಹಾರ, ಶಿಕ್ಷಣ ಕ್ಷೇತ್ರದ ಸವಾಲುಗಳು, ಬದಲಾಗಬೇಕಾದ ದೃಷ್ಟಿಕೋನದ ವಿಚಾರವಾಗಿ ಮಾರ್ಗದರ್ಶನ ಮಾಡಿದರು.
ಎಚ್ಚರಿಕೆ ಮಾತು: ವಿವಿಧ ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷದ ವಿಷಬೀಜ ಮೊಳೆತು ಸಮಾಜದ ನೆಮ್ಮದಿ, ಶಾಂತಿ ಮಾಯವಾಗಿವೆ. ಸಮಾಜ ವಿಘಟನೆಯಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಅದೇ ರೀತಿ ಶಿಕ್ಷಣವು ಮಾರುಕಟ್ಟೆಯಾಗಿದೆ. ವ್ಯಕ್ತಿತ್ವ ವಿಕಸನ ಉಂಟುಮಾಡಬೇಕಾದ ಶಿಕ್ಷಣ ಅದನ್ನು ಬಿಟ್ಟು ಹಣ ಗಳಿಕೆಯ ಸಾಧನವಾಗಿದೆ. ಈ ಮನೋಭಾವ ವಿದ್ಯಾವಂತರೆಂದು ಎನಿಸಿಕೊಂಡವರಲ್ಲೇ ಹೆಚ್ಚು. ದೇಶ, ಸಮಾಜದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.
ಶುಭ ಲಕ್ಷಣವಲ್ಲ: ಇಂದು ಶಿಕ್ಷಕರ ಕೆಲಸವೂ ಒಂದು ವ್ಯಾಪಾರವಾಗಿ ಈ ನೇಮಕದಲ್ಲೂ ಭ್ರಷ್ಟಾಚಾರ, ಜಾತೀಯತೆ, ಪ್ರಾದೇಶಿಕ ಭಾವನೆಗಳು ಮುಖ್ಯವಾಗಿ ಪರಿಗಣಿಸಿ ಉತ್ತಮ ಶಿಕ್ಷಕರ ನೇಮಕ ಆಗುತ್ತಿಲ್ಲ. ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ನಾವು ಕಾಣುತ್ತಿದ್ದೇವೆ. ಅಲ್ಲದೆ, ವಿದ್ಯಾರ್ಥಿಗಳು ಖಾಸಗಿ ಪಾಠಕ್ಕೆ ಮೊರೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಇದು ಶುಭ ಲಕ್ಷಣವಲ್ಲ ಎಂದು ಎಚ್ಚರಿಸಿದರು.
ಆತಂಕದ ಮಾತು: ಈಗ್ಗೆ ಒಂದು ವಾರದ ಹಿಂದೆ ಪ್ರಕಟಗೊಂಡ ಸಮೀಕ್ಷೆಯ ಪ್ರಕಾರ ಪ್ರಪಂಚದ ಉತ್ತಮ 200 ವಿಶ್ವವಿದ್ಯಾಲಯಗಳಲ್ಲಿ ನಮ್ಮ ದೇಶದ ಯಾವುದೇ ಒಂದು ವಿಶ್ವವಿದ್ಯಾಲಯ ಸೇರಿಲ್ಲ ಎನ್ನುವುದು ಬಹಳ ಆತಂಕಕಾರಿ ವಿಷಯ. ಸಂಬಂಧಪಟ್ಟ ಎಲ್ಲರೂ ಇದರ ಬಗ್ಗೆ ಚಿಂತನೆ ಮಾಡಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕ. ಇಲ್ಲದಿದ್ದರೆ ವಿಶ್ವವಿದ್ಯಾಲಯಗಳನ್ನು ಯಾವ ಉದ್ದೇಶದಿಂದ ಸ್ಥಾಪಿಸಲಾಗಿದೆಯೇ ಅದು ಸಫಲವಾಗುವುದಿಲ್ಲ ಎಂದರು.
ಹಣ ಸಂಸ್ಕೃತಿ ವಿಜೃಂಭಣೆ: ಜಾಗತೀಕರಣದ ಫಲವಾಗಿ ಇಂದು ಶ್ರಮ ಸಂಸ್ಕೃತಿ ಮರೆಯಾಗಿ ಹಣ ಸಂಸ್ಕೃತಿ ವಿಜೃಂಭಿಸುತ್ತಿದೆ. ಸ್ವಹಿತಾಸಕ್ತಿ, ಸ್ವಾರ್ಥ ಲಾಲಸೆ, ಮೇಲುಗೈಯಾಗಿ ನೈತಿಕ ಮಟ್ಟ ಕುಸಿಯುತ್ತಿದೆ. ರಾತ್ರೋರಾತ್ರಿ ಅಧಿಕಾರ, ಅಂತಸ್ತು, ಹಣ ಹೆಸರು ಗಳಿಸುವ ಆತುರದಲ್ಲಿದ್ದಾರೆ. ಶತಾಯಗತಾಯ ಅಡ್ಡ ಮಾರ್ಗ ಹಿಡಿದಾದರೂ ತಮ್ಮ ಆಕಾಂಕ್ಷೆ ಈಡೇರಿಸಿಕೊಳ್ಳುವ ಆತುರದಲ್ಲಿದ್ದಾರೆ. ಇದರಿಂದ ಭ್ರಷ್ಟರಾಗಿದ್ದಾರೆ. ಮಾನವ ಸಂಬಂಧಗಳು, ಮಾನವೀಯ ಕೊಂಡಿಗಳು ಕಳಚಿ ಬೀಳುತ್ತಿವೆ. ಪ್ರತಿಭೆಗೆ ಪುರಸ್ಕಾರವಿಲ್ಲ, ಪ್ರಾಮಾಣಿಕತೆಗೆ ಬೆಲೆ ಇಲ್ಲ. ಚಾರಿತ್ರ್ಯ ಕೇಳುವವರಿಲ್ಲ. ತ್ಯಾಗ ಮತ್ತು ಸೇವೆಯ ಮನೋಭಾವ ಸಂಪೂರ್ಣ ನಶಿಸಿ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಿಳಿ ಮಾತು: ಇಂದು ಪದವಿ ಪಡೆದು ವಿಶ್ವವಿದ್ಯಾಲಯದಿಂದ ಹೊರಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ವಿಷವೃತ್ತದ ಸಮಾಜದ ಮಧ್ಯೆ ಬದುಕಬೇಕಾಗಿದೆ.
  ಈ ಪರಿಸ್ಥಿತಿಯ ಬದಲಾವಣೆ ಶೀಘ್ರದಲ್ಲಾಗಬೇಕು. ಒಂದು ವೇಳೆ ಇದೇ ಪರಿಸರದಲ್ಲಿ ನೀವೂ ಸ್ವಾರ್ಥದಿಂದ ಹಿಂದಿನವರ ಹಾದಿಯಲ್ಲೇ ಹೆಜ್ಜೆ ಹಾಕುವುದಾದರೆ ಬಹುಶಃ ಕ್ಷಿಪ್ರಗತಿಯಲ್ಲಿ ಆಸೆ ಪೂರೈಸಿಕೊಳ್ಳಲು ಸಾಧ್ಯವಾಗಬಹುದು. ಆದರೆ, ವಿಶೇಷವಾದದ್ದನ್ನು ಸಾಧಿಸಿದಂತೆ ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಮ್ಮಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಬುದ್ಧಿವಂತಿಕೆಯಲ್ಲಿ ನಾವು ಜಗತ್ತಿನ ಯಾವುದೇ ಭಾಗದ ಜನರಿಗಿಂತ ಕಡಿಮೆ ಇಲ್ಲ. ಆದರೆ, ಸರಿಯಾದ ಅವಕಾಶಗಳು ಸಿಗದೆ ನಾವು ಇಂದಿನ ಪರಿಸ್ಥಿತಿ ತಲುಪಿರಬಹುದು. ಈಗಲೂ ಕಾಲ ಮಿಂಚಿಲ್ಲ, ಸೂಕ್ತ ಬದಲಾವಣೆ ಮಾಡಿ ತಪ್ಪು ತಿದ್ದಿಕೊಂಡ ಪಕ್ಷದಲ್ಲಿ ನಮ್ಮ ವಿಶ್ವವಿದ್ಯಾಲಯಗಳು, ಅಲ್ಲಿನ ಪ್ರಾಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಬಲ್ಲರು ಎಂದು ತಿಳಿ ಹೇಳಿದರು.
ಮಾರ್ಗದರ್ಶನದ ಮಾತು: ಒಂದು ಸಮೀಕ್ಷೆಯ ಪ್ರಕಾರ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಶೇ. 80ರಷ್ಟು ಎಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕೆ ಬೇಕಾದಂತಹ ಅಗತ್ಯವಾದ ಕೌಶಲ್ಯ ಹೊಂದಿಲ್ಲ. ಹಾಗೆಯೇ ಬೇರೆಯ ಕ್ಷೇತ್ರಗಳಲ್ಲೂ ಬಹಳ ಸಂಖ್ಯೆಯಲ್ಲಿ ಪದವೀಧರರು ಅಗತ್ಯವಾದ ಕೌಶಲ್ಯ ಹೊಂದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇಷ್ಟು ಹಣ ಖರ್ಚು ಮಾಡಿ ಸಮಯ ವ್ಯಯಿಸಿ ಕೊನೆಗೆ ಪದವಿ ಪಡೆದರೂ ಅವರು ಉದ್ಯೋಗಕ್ಕೆ ಅರ್ಹರಲ್ಲವೆಂತಾದರೆ ಇದಕ್ಕೆ ಕಾರಣಗಳನ್ನು ಅತಿ ಶೀಘ್ರವಾಗಿ ಕಂಡುಕೊಳ್ಳಬೇಕಾದ ಅಗತ್ಯ ಇದೆ ಎಂದರು.
ಮಹಾತ್ಮ ಗಾಂಧಿ ಅವರು ಹೇಳಿದಂತೆ ಚಾರಿತ್ರ್ಯವಿಲ್ಲದ ವಿದ್ಯಾಭ್ಯಾಸ, ಸಹಾನೂಭೂತಿ ಇಲ್ಲದ ಚಾರಿತ್ರ್ಯ ಏನು ಉಪಯೋಗ, ಸಚ್ಚಾರಿತ್ರ್ಯ ನಿರ್ಮಲವಾದ ಹೃದಯದ ಮೇಲೆ ಅವಲಂಬಿಸಿರುತ್ತದೆ. ಚಾರಿತ್ರ್ಯವನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಲಾಗುವುದಿಲ್ಲ. ಅದು ನಮ್ಮಿಂದಲೇ ಆಗಬೇಕು ಮತ್ತು ನಮ್ಮ ಕೈಗಳಿಂದಲೇ ಆಗಬೇಕು ಎಂದು ಮಾರ್ಗದರ್ಶನ ಮಾಡಿದರು.
ಕುಲಪತಿ ಪ್ರೊ. ಎಸ್.ಎ. ಬಾರಿ, ಕುಲಸಚಿವರಾದ ಮಲ್ಲಿಕಾ ಘಂಟಿ, ವಿವಿಧ ನಿಖಾಯದ ಡೀನರು, ಸಿಂಡಿಕೇಟ್ ಸದಸ್ಯರು ಇದ್ದರು.
(ಪ್ರತಿಭಾವಂತರ ಕಥೆ ಪುಟ.. 11)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.