ಭಾರತಮಾತಾ ಪೂಜೆ
ಹೊಸನಗರ: ಶಿವಮೊಗ್ಗ ಲೋಕಸಬಾ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಗೆಲ್ಲಬೇಕು ಮತ್ತು ನರೇಂದ್ರ ಮೋದಿ ದೇಶದ ಪ್ರಧಾನಿ ಆಗಬೇಕು ಎಂದು ಪ್ರಾರ್ಥಿಸಿ ಗುರುವಾರ ತಾಲೂಕಿನ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಭಾರತಮಾತಾ ಪೂಜೆ ನೆರವೇರಿಸಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನಲ್ಲಿ 131 ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆ ಸಮಿತಿ ಸದಸ್ಯರು ಭಾರತಮಾತೆ ಫೋಟೊಗೆ ಪೂಜೆ ಸಲ್ಲಿಸುವುದರ ಮೂಲಕ ಬಿಜೆಪಿ ಗೆಲುವಿನ ಯಾತ್ರೆಗೆ ಈ ಮೂಲಕ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಬಿಜೆಪಿಗೆ ಅತಿ ಹೆಚ್ಚು ಮುನ್ನಡೆ ದೊರಕುವ ನಿರೀಕ್ಷೆಯಿದೆ. ಈಗಾಗಲೇ ಬೂತ್ ಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಕರ್ತರು ಮನೆಮನೆಗೆ ಬಿಜೆಪಿ ಅಭಿವೃದ್ಧಿ ಮಂತ್ರ ತಲುಪಿಸಲು ಸಿದ್ಧರಾಗಿದ್ದಾರೆ. ಮೋದಿ ಅಲೆ, ಬಿಜೆಪಿ ಸರ್ಕಾರದ ಅಭಿವೃದ್ಧಿ, ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಬಲವಿರುವುದರಿಂದ ಕಾರ್ಯಕರ್ತರ ಕೆಲಸ ಸುಲಭವಾಗಲಿದೆ ಎಂದರು. ಶುಕ್ರವಾರ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಬಿಜೆಪಿಗೆ ಹಿಂದೆಂದಿಗಿಂತಲೂ ಹೆಚ್ಚು ಮತ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸೊರಬದಲ್ಲಿ ಪೂಜೆ
ಸೊರಬ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ 236 ಮತಗಟ್ಟೆಗಳಲ್ಲಿ ಬಿಎಸ್ವೈ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಏಕ ಕಾಲಕ್ಕೆ ಭಾರತ ಮಾತೆಗೆ ಪೂಜೆ ಸಲ್ಲಿಸಿ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿದರು. ಪಟ್ಟಣದ ರಂಗನಾಥಸ್ವಾಮಿ ದೇಗುಲದಲ್ಲಿ ಇಲ್ಲಿನ ಕಾರ್ಯಕರ್ತ, ಮುಖಂಡರು ಪೂಜೆ ಸಲ್ಲಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ಶಿವಯೋಗಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಕೆ. ಯೋಗೇಶ್ ವಕೀಲರು, ಟವನ್ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಶಿವಮೂರ್ತಿ, ರವಿ, ನೆಮ್ಮದಿ ಸುಬ್ರಹ್ಮಣ್ಯ, ರೇವಣಕುಮಾರ್, ಟೋಕಪ್ಪ, ಚಂದ್ರಪ್ಪ, ಸಂಜೀವಾಚಾರ್, ಗಜಾನನ, ಷಣ್ಮುಖಪ್ಪ, ಸುರೇಶ್, ಮಂಜು, ಕುಮಾರ್, ರವಿಮೇಸ್ತ್ರಿ, ಮಕ್ಬೂಲ್, ವಿಜಯಗೌಳಿ, ಅರುಣ, ವಿಶ್ವನಾಥ್, ಶ್ರೀಧರ ಭಂಡಾರಿ, ಪರಶುರಾಮ್, ಮೊದಲಾದವರಿದ್ದರು.
ಕಾರಿನಲ್ಲಿದ್ದ ರು. 2.5 ಲಕ್ಷ ಹಣ ಜಪ್ತಿ
ದಾವಣಗೆರೆ: ಹರಪನಹಳ್ಳಿ ಕಡೆಯಿಂದ ಟಾಟಾ ಇಂಡಿಕಾ ಕಾರಿನಲ್ಲಿ ದಾವಣಗೆರೆ ನಗರಕ್ಕೆ ರು. 2.5 ಲಕ್ಷ ತರುತ್ತಿದ್ದ ವಾಹನವನ್ನು ಗುರುವಾರ ಪತ್ತೆ ಮಾಡಿ, ಅಷ್ಟೂ ಹಣವನ್ನು ಜಿಲ್ಲಾ ವಿಚಕ್ಷಣಾ ದಳದ ಅಧಿಕಾರಿಗಳು ಜಪ್ತುಮಾಡಿದ್ದಾರೆ. ನಗರದ ಹೊರವಲಯದ ಹಳೆ ಪಿ.ಬಿ. ರಸ್ತೆಯಲ್ಲಿ ಸಾಯಿ ಇಂಟರ್ನ್ಯಾಷನಲ್ ಹೊಟೆಲ್ ಬಳಿ ವಿಚಕ್ಷಣ ದಳದ ಅಧಿಕಾರಿ ಎಸ್.ಎಸ್. ಬಸವರಾಜ ನೇತೃತ್ವದ ತಂಡ ವಾಹನಗಳ ತಪಾಸಣೆ ನಡೆಸಿದ್ದ ವೇಳೆ ಹರಪನಹಳ್ಳಿ ಕಡೆಯಿಂದ ಬಂದಿದ್ದು, ಎನ್ನಲಾದ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರಿನಲ್ಲಿ ರು. 2.50 ಲಕ್ಷ ನಗದು ಪತ್ತಯಾಯಿತು. ಕಾರಿನಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ರು. 2.5 ಲಕ್ಷ ಹಣ ಸಾಗಿಸುತ್ತಿದ್ದವರ ಬಳಿ ಹಣದ ಬಗ್ಗೆ ತಕ್ಷಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಆದರೆ, ಹರಪನಹಳ್ಳಿಯಿಂದ ಟ್ರ್ಯಾಕ್ಟರ್ ಖರೀದಿಸಲೆಂದು ತಾವು ಬಂದಿದ್ದಾಗಿ ಕಾರಿನಲ್ಲಿದ್ದ ಗುತ್ತಿಗೆದಾರ ಜಬೀವುಲ್ಲಾ ಸ್ಪಷ್ಟಪಡಿಸಿದರು. ನೀತಿ ಸಂಹಿತೆ ಹಿನ್ನೆಲೆ: ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ಕೋರಿದ್ದರಿಂದ ಅಧಿಕಾರಿಗಳು ಹಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಹಣದ ಬಗ್ಗೆ ದಾಖಲೆ ತರುವುದಾಗಿ ಅದರ ಮಾಲೀಕ ಜಬೀವುಲ್ಲಾ ಹರಪನಹಳ್ಳಿಗೆ ಮರಳಿದ್ದಾರೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಾಕಾಬಂದಿ ಚುರುಕುಗೊಳಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಅಡ್ಡವಾಗಿಟ್ಟು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಖಾಸಗಿ ವಾಹನಗಳು, ದ್ವಿಚಕ್ರ, ಸರಕು ಸಾಗಾಣಿಕೆ ವಾಹನ, ಬಸ್ಸು ಹೀಗೆ ತಪಾಸಣೆ ಕಾರ್ಯ ಚುರುಕುಗೊಳ್ಳುತ್ತಿದೆ. ದಾವಣಗೆರೆ ಜಿಲ್ಲಾ ಕೇಂದ್ರದ ವಿವಿಧೆಡೆಯಲ್ಲೂ ವಾಹನಗಳ ತಪಾಸಣೆ ಕಾರ್ಯ ಜೋರಾಗಿ ಸಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

