ನೀರು ಬರದಿದ್ದರೆ ಚುನಾವಣೆ ಬಹಿಷ್ಕಾರ
ಹೊಸನಗರ: ಕಳೆದ ಹತ್ತಾರು ವರ್ಷದಿಂದ ಕುಡಿಯುವ ನೀರಿನ ಬೇಡಿಕೆ ಇದ್ದರೂ ಇನ್ನು ನೀರಿನ ಬವಣೆ ತೀರಿಸದ ಬಗ್ಗೆ ತೀವ್ರವಾಗಿ ಖಂಡಿಸಿರುವ ತಾಲೂಕಿನ ಚಿಕ್ಕಪೇಟೆ ಕೋಟನ್ಕೇರಿ ಗ್ರಾಮಸ್ಥರು ಚುನಾವಣೆಯೊಳಗೆ ನೀರಿನ ಸೌಲಭ್ಯ ನೀಡದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅರ್ಧಕ್ಕೆ ನಿಂತ ಕುಡಿಯುವ ನೀರು ಸರಬರಾಜು ಕಾಮಗಾರಿ ಮುಂದೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದ ಗ್ರಾಮಸ್ಥರು, ನೀರಿಗಾಗಿ ಪಡುತ್ತಿರುವ ಪಾಡಿನ ಬಗ್ಗೆ ತಮ್ಮ ಅಳಲು ತೋಡಿಕೊಂಡರಲ್ಲದೆ ವ್ಯವಸ್ಥೆ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿಯ ಕಿರು ನೀರು ಸರಬರಾಜು ಯೋಜನೆಯಡಿ ಸುಮಾರು 8 ಲಕ್ಷದ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ಕೇಳಿದರೆ ಕಾಮಗಾರಿ ಹಣವಿಲ್ಲ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶ್ರಲ್ಲಿ ತಮ್ಮ ಆಕ್ರೋಶ ತೋಡಿಕೊಂಡ ಗ್ರಾಮಸ್ಥರು ನೀರಿನ ಬವಣೆ ತೀರಿಸಿ ಎಂದು ಆಗ್ರಹಿಸಿದರು. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷರು ಜಿಪಂ ಎಇಇಗೆ ಮಾಹಿತಿಗಾಗಿ ಫೋನ್ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ. ನಂತರ ಜಿಪಂ ಸದಸ್ಯರಿಗೆ ಫೋನ್ ಮಾಡಿ ಗ್ರಾಮಸ್ಥರ ಬವಣೆ ಬಗ್ಗೆ ವಿವರಿಸಿದರು. ಕಾಮಗಾರಿ ಗ್ರಾಪಂಗೆ ಹಸ್ತಾಂತರವಾಗುವವರೆಗೆ ಏನು ಮಾಡಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟಿನಲ್ಲಿ ಚುನಾವಣೆಯೊಳಗೆ ನೀರು ಬೇಕು, ಮತ್ತೆ ಯಾರು ನಮ್ಮ ಕೈಗೆ ಸಿಗುವುದಿಲ್ಲ. ಹಾಗಾಗಿ ಬೇಡಿಕೆ ಈಡೇರದಿದ್ದರೆ ಚುನಾವಣೆ ಬಹಿಷ್ಕಾರ ಅನೀವಾರ್ಯ ಎಂದು ಎಚ್ಚರಿಸಿದರು.
ಎಂ. ಕರುಣಾಕರ ಪೂಜಾರಿ, ಚಂದ್ರಪೂಜಾರಿ, ತಮ್ಮಯ್ಯಾಚಾರ್, ಬಾಬಣ್ಣ ಸೇರಿದಂತೆ ಕೇರಿಯ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

