ಶಿವಮೊಗ್ಗ

ಸಾಗರದಲ್ಲಿ ಲಲಿತಕಲಾ ಸ್ನಾತಕ ಪದವಿ ಕೋರ್ಸ್

Published On :

ಶಿವಮೊಗ್ಗ:  ರಾಜ್ಯದ ಕರಕುಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಾಗರದಲ್ಲಿ ಲಲಿತಕಲಾ ಸ್ನಾತಕ ಪದವಿ ಕೋರ್ಸ್ ಆರಂಭಿಸಲು ಕುವೆಂಪು ವಿಶ್ವವಿದ್ಯಾಲಯ ತೀರ್ಮಾನಿಸಿದೆ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ಈ ಕೋರ್ಸ್ ಆರಂಭಿಸಲು ಅನುಮತಿ ದೊರೆಯಿತು.
ಸರ್ಟಿಫಿಕೆಟ್ ಕೋರ್ಸ್: ಈಗಾಗಲೇ 7ನೇ ತರಗತಿ ಪಾಸಾದವರಿಗೆ ಈ ಕೇಂದ್ರದಲ್ಲಿ ಎರಡು ವರ್ಷ ಸರ್ಟಿಫಿಕೆಟ್ ಕೋರ್ಸ್ ನಡೆಸಲಾಗುತ್ತಿದೆ. ಇದೀಗ ಸ್ನಾತಕ ಪದವಿ ಆರಂಭಿಸಲು ವಿವಿ ಆಸಕ್ತಿ ತೋರಿದೆ. ಈ ಹಿನ್ನೆಲೆಯಲ್ಲಿ ಕಲಾ ನಿಕಾಯದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದೆ.
ಪದವಿ ಆರಂಭಿಸಲು ಬೇಕಾದ ಕಟ್ಟಡ, 2 ವರ್ಕ್‌ಶಾಪ್, 1 ಕಚೇರಿ ಕೊಠಡಿ, 2 ವಸತಿ ಕೊಠಡಿಗಳು ಲಭ್ಯವಿವೆ. ನೌಕರರ ನೇಮಕ, ಆಡಳಿತ, ಪ್ರವೇಶ ಪ್ರಕ್ರಿಯೆಯನ್ನು ವಿಶ್ವವಿದ್ಯಾಲಯ ನಿರ್ವಹಿಸಬೇಕಿದೆ. ಅಲ್ಲದೆ, ತರಬೇತಿ ಸಂಸ್ಥೆಯನ್ನು ವಿವಿಯ ಘಟಕ ಕಾಲೇಜು ಎಂದು ಪರಿಗಣಿಸಿ ಕೋರ್ಸ್ ನೀಡಬೇಕಾಗುತ್ತದೆ. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಬೇಕೆಂದು ವರದಿ ಸಲ್ಲಿಕೆಯಾಗಿದೆ.
ಎನ್‌ಸಿಸಿ ವಿಷಯ: ಪದವಿ ಕಲಾ ಕಾಲೇಜುಗಳಲ್ಲಿ ಐಚ್ಛಿಕ ವಿಷಯಗಳ ಜತೆಗೆ ಎನ್‌ಸಿಸಿ ವಿಷಯ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತಂತೆ ಪ್ರಸ್ತಾವನೆಯನ್ನು ಎಲ್ಲ ಪದವಿ ಕಾಲೇಜುಗಳ ಪ್ರಾಚಾರ್ಯರಿಗೆ, ಎನ್‌ಸಿಸಿ ಡೈರೆಕ್ಟರ್ ಜನರಲ್ ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಬಹುದುದೆಂದು ಪ್ರೊ. ಎಸ್.ಎ. ಬಾರಿ ಸಭೆಗೆ ತಿಳಿಸಿದರು.
ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಎನ್‌ಸಿಸಿಯನ್ನು ಪ್ರತ್ಯೇಕ ವಿಷಯವನ್ನಾಗಿ ಅಳವಡಿಸಿವೆ. ಇಂತಹ ಪ್ರಯತ್ನವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಏಕೆ ಮಾಡಬಾರದು, ಮೊದಲು ಕಲಾ ವಿಭಾಗದಲ್ಲಿ ಅನುಷ್ಠಾನಗೊಳಿಸೋಣ. ನಂತರ ಇದರ ಯಶಸ್ಸು ಗಮನಿಸಿ ಇತರೆ ವಿಭಾಗಗಳಿಗೂ ವಿಸ್ತರಿಸೋಣ ಎಂದು ಕುಲಪತಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಐಪಿಎಸ್, ಐಎಎಸ್ ಸೇರ್ಪಡೆಯಾಗಲು ಇದು ನೆರವಾಗುತ್ತದೆ. ಆದರೆ, ಆಯ್ಕೆ ಮಾತ್ರ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು. ಒಟ್ಟಾರೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬಹುದು ಎಂಬ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಲಾಯಿತು.
ದೂರ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ಗಣಿತಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸ್ವರ್ಣ ಪದಕ ನೀಡಲು ಮೆ. ಪೂರ್ಣಿಮಾ ಪ್ರಿಂಟರ್ಸ್ ಹೆಸರಿನಲ್ಲಿ 50 ಸಾವಿರ ದತ್ತಿ ನಿಧಿ ಸ್ಥಾಪಿಸಲು ಸಭೆ ಒಪ್ಪಿಗೆ ನೀಡಿತು.
ಬಜೆಟ್: ಕುವೆಂಪು ವಿವಿ ಹಣಕಾಸು ಅಧಿಕಾರಿ ಪ್ರೊ. ಹಿರೇಮಣಿ ನಾಯ್ಕ ಅವರು 2014- 15ರ ಹಣಕಾಸು ವರ್ಷದ ಅಂದಾಜು ಮುಂಗಡ ಪತ್ರವನ್ನು ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.