ಕುಡಿಯೋ ನೀರು ಮನೆ ಕಟ್ಟೋರ್ಗೇಕೆ?
ಕ.ಪ್ರ.ವಾರ್ತೆ ಸೊರಬ ಮೇ 1
ದಿನದಿಂದ ದಿನಕ್ಕೆ ನೀರಿನ ಬವಣೆ ಉಲ್ಬಣಗೊಳ್ಳುವುದಕ್ಕೆ ಪಟ್ಟಣ ಪಂಚಾಯಿತಿ ಆಡಳಿತವೇ ಕಾರಣ ಎಂದು 3ನೇ ವಾರ್ಡಿನ ನಿವಾಸಿ ಷರೀಫ್, ಜಬ್ಬರ್, ಫಾತಿಮಾಬೀ ಮತ್ತಿತರರು ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.
3ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದು ಇಂದಿನ ಸಮಸ್ಯೆ ಏನಲ್ಲ. ಹೀಗಿದ್ದೂ ಪೂರ್ವಬಾವಿ ವ್ಯವಸ್ಥೆಗೆ ಮುಂದಾಗುವ ಬದಲು ಈಗ ಟೆಂಡರ್ ಕರೆದಿದ್ದಾರೆ. 'ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟರು' ಎಂಬ ಗಾದೆಯಂತೆ ಅಂತಹ ಕಾರ್ಯವೈಖರಿ ಪಪಂ ಆಡಳಿತದ್ದು ಎಂದು ನಿವಾಸಿಗಳು ಮೂದಲಿಸಿದರು. ಯಾರಾದರೂ ಮನೆ ಕಟ್ಟುತ್ತೇವೆ ಎಂದರೆ ದಿನಗಟ್ಟಲೆ ಆ ಮಾರ್ಗದ ಪೈಪ್ಲೈನ್ನಲ್ಲಿ ನೀರು ಸರಬರಾಜು ಮಾಡುತ್ತಾರೆ, ಕುಡಿಯಲು ನೀರು ಕೇಳಿದರೆ ಮಾತ್ರ ನೂರೆಂಟು ಸಬೂಬು ಹೇಳಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ನಾವು ನೀರು ಅರಸಿ ಇನ್ನೊಂದು ವಾರ್ಡಿಗೆ ತೆರಳಿ ಜಗಳ ಮಾಡುವಂತಾಗಿದೆ. ನಿರಾಶ್ರಿತರಿಗೆ ತಿಂಡಿ ಹಂಚುವಂತೆ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಂಚುತ್ತಾರೆ. 5 ಕೊಡಪಾನಕ್ಕಿಂತ ಹೆಚ್ಚು ನೀರು ದೊರಕುವುದಿಲ್ಲ. ಅದಕ್ಕೂ ಪೈಪೋಟಿ ಮಾಡಿ ನೀರು ಪಡೆಯಬೇಕಾದ ಪರಿಸ್ಥಿತಿ ನಮ್ಮದು. ನೀರಿಗಾಗಿ ಕೂಲಿನಾಲಿನೂ ಬಿಡಬೇಕಾಗಿದೆ ಎಂದು ತಮ್ಮ ಬವಣೆ ತೋಡಿಕೊಂಡರು. ಪಟ್ಟಣದ ಕಾನಕೇರಿಯಲ್ಲಿ ಮಾತ್ರ ಅಧಿಕ ನೀರಿನ ಬವಣೆ ಏರ್ಪಟ್ಟಿದ್ದು, ಇಲ್ಲಿರುವ ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಇಲ್ಲ. ಅಳವಡಿಸುವ ಮೋಟಾರ್ ಕಳಪೆ ಗುಣಮಟ್ಟದ್ದಾಗಿದೆ. ದಿನವೂ ರಿಪೇರಿ ಮಾಡುತ್ತಾರೆಯೇ ವಿನಹ ಉತ್ತಮ ಮೋಟಾರ್ ಅಳವಡಿಸಲು ಮುಂದಾಗುವುದಿಲ್ಲ. ದುರಸ್ತಿ ವೇಳೆ ನೀರುಗಂಟಿಗಳು ಇರುತ್ತಾರೆಯೇ ವಿನಹ ತಾಂತ್ರಿಕ ಅಭಿಯಂತರರು ಬರುವುದಿಲ್ಲ. ಇಲ್ಲಿಯೇ ತುಸು ಎತ್ತರದಲ್ಲಿರುವ ನಲ್ಲಿಗಳಿಗೆ ನೀರು ಏರುವುದಿಲ್ಲ ಎಂದಿರುವ ನಿವಾಸಿಗಳು ಪಪಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಒಟ್ಟಾರೆ ಪಟ್ಟಣದ 6, 1, 10, 9, 2, 3ನೇ ವಾರ್ಡ್ ಹಾಗೂ ಶ್ರೀಗಂಧದ ಸಂಕೀರ್ಣದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ.
ನೀರು ಸಿಗುವ ವಾರ್ಡಿಗೆ ಜನ ತೆರಳಿ, ಸೈಕಲ್, ಬೈಕ್, ಆಟೋ, ತಳ್ಳುವ ಗಾಡಿಯ ಮೂಲಕ ನೀರು ತರುವ ಸ್ಥಿತಿ ದಿನನಿತ್ಯದ್ದಾಗಿದೆ ಎಂದು ಅವಲತ್ತುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

