ಕ್ವಿಂಟಲ್ ಬತ್ತಕ್ಕೆ 2500 ನೀಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 19
ಈ ಕೂಡಲೇ ಬತ್ತ ಬೆಳೆಗಾರರ ನೆರವಿಗೆ ಧಾವಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದ ರೈತ ಸಂಘದ ಕಾರ್ಯಕರ್ತರು, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಿದರು.
ರಾಜ್ಯದಲ್ಲಿ ಭದ್ರಾ, ತುಂಗಭದ್ರ, ಹೇಮಾವತಿ, ಆಲಮಟ್ಟಿ ಇನ್ನೂ ಅನೇಕ ಜಲಾಶಯಗಳ ಕೆಲಭಾಗದಲ್ಲಿ ಲಕ್ಷಾಂತರ ಕ್ವಿಂಟಲ್ ಬತ್ತ ಬೆಳೆದಿದ್ದಾರೆ. ಈಗ ಬತ್ತದ ಬೆಲೆ ಕ್ವಿಂಟಲ್ಗೆ ಒಂದು ಸಾವಿರ ರುಪಾಯಿ ಇದೆ. ದುಬಾರಿ ಕೂಲಿ, ರಸಗೊಬ್ಬರ ಜತೆಗೆ ಜೀವನ ವೆಚ್ಚ ಸಹ ಜಾಸ್ತಿಯಾಗಿದೆ. ಈಗಿನ ಮಾರುಕಟ್ಟೆ ದರಕ್ಕೆ ರೈತರು ಬತ್ತ ಮಾರಾಟ ಮಾಡಿದರೆ ಉತ್ಪಾದನಾ ವೆಚ್ಚದ ಅರ್ಧ ಹಣ ಸಹ ರೈತನಿಗೆ ಸಿಗುವುದಿಲ್ಲ.
ಕಾರಣ, ತಮ್ಮ ಸರ್ಕಾರ ಬಡವರಿಗೆ 1ಕ್ಕೆ 1 ಕೆಜಿ ಅಕ್ಕಿ ಕುಟುಂಬಕ್ಕೆ 30 ಕೆಜಿ ಅಕ್ಕಿ ಕೊಡುತ್ತಿರುವುದು ಈ ಯೋಜನೆ ದುರುಪಯೋಗವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಸಹ ಕಾರಣ. ಕೊಂಡು ತಿನ್ನುವವರ ರಕ್ಷಣೆ ಮಾಡುವುದರ ಜತೆಗೆ ಅಕ್ಕಿ ಉತ್ಪಾದನೆ ಮಾಡುವವರ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಆದ್ದರಿಂದ ಕೂಡಲೇ ರೈತರ ಸಂಕಷ್ಟ ಅರಿತು ಪರಿಹಾರ ಕೊಡಬೇಕೆಂದು ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ಹಣ ಪಾವತಿ: ಈಗಾಗಲೇ ಸುಗ್ಗಿ ಕಾಲ ಪ್ರಾರಂಭವಾಗಿದೆ. ಶೀಘ್ರವೇ ಕ್ವಿಂಟಲ್ಗೆ 2500 ಬೆಲೆ ಕೊಟ್ಟು ಬತ್ತ ಖರೀದಿಸಬೇಕು. ಹಾಗೆಯೇ ಖರೀದಿ ಕೇಂದ್ರದ ಮೂಲಕ ಮೆಕ್ಕೆಜೋಳ ಖರೀದಿದ ಬಾಬ್ತು ರೈತರಿಗೆ ಹಣ ಸಂದಾಯ ಮಾಡಿಲ್ಲ, ಅದನ್ನೂ ಪಾವತಿಸುವಂತೆ ಒತ್ತಾಯಿಸಿದರು.
ನಿರ್ಲಕ್ಷ್ಯ ಧೋರಣೆ: ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತದೆ. ಸುಮಾರು ಒಂದು ಲಕ್ಷ ಬತ್ತ ಬೆಳೆಯುವ ರೈತರಿದ್ದಾರೆ. ಇವರೆಲ್ಲರು ಸಂಕಷ್ಟ ಅನುಭವಿಸುತ್ತಿರುವಾಗ ಜನಪ್ರತಿನಿಧಿಗಳು ಉದಾಸೀನ ಮಾಡುವುದು ಸರಿಯಲ್ಲ ಎಂದು ಹೇಳಿದ ಅವರು, ಕಬ್ಬು ಬೆಳೆಗಾರರ ವಿಚಾರದಲ್ಲೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂದಿನ ತಿಂಗಳು ಆರಂಭವಾಗುವ ಅಧಿವೇಶನ ನಡೆಸಲು ರೈತ ಸಂಘ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ರೈತರನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ ಸಿದ್ದರಾಮಯ್ಯ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಕ್ಕಿದೆ. ಇನ್ನು ಮುಂದಾದರೂ ಸಕ್ಕರೆ ಕಾರ್ಖಾನೆಗಳೊಂದಿಗೆ ಚಕ್ಕಂದ ಆಡುವುದನ್ನು ಬಿಟ್ಟು ರೈತರ ನೆರವಿಗೆ ಧಾವಿಸಿಬರಬೇಕೆಂದು ಈ ಮೂಲಕ ಎಚ್ಚರಿಸುತ್ತೇವೆ. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.
ದಲ್ಲಾಳಿ ಕಾಟ: ಕೇಂದ್ರ ಸರ್ಕಾರ ಬತ್ತ ಖರೀದಿ ಸಂದರ್ಭದಲ್ಲಿ ಬೆಂಬಲ ನೀಡುತ್ತಿದೆ. ಅದನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂಬುದು ನಮ್ಮ ಒತ್ತಾಯ. ಹೇಗಿದ್ದರೂ ಪಹಣಿ, ವಿಎ ವರದಿ ಇರುತ್ತದೆ, ಯಾವ ರೈತ ಎಷ್ಟು ಬತ್ತ ತೆಗೆಯುತ್ತಾನೆಂಬ ಅಂದಾಜಿರುತ್ತದೆ. ಇದರ ಆಧಾರದ ಮೇಲೆ ನೇರವಾಗಿ ಬತ್ತದ ಬೆಂಬಲ ಬೆಲೆಯನ್ನು ಖಾತೆಗೆ ಹಾಕಿದರೆ ದಲ್ಲಾಳಿಗಳ ಕಾಟವಿರುವುದಿಲ್ಲ, ರೈತನಿಗೆ ಸಲ್ಲಬೇಕಾದಷ್ಟು ಹಣ ನೇರವಾಗಿ ಸಂದಾಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ಕ್ರಮಕೈಗೊಳ್ಳಲಿ ಎಂದು ರೈತ ಸಂಘದ ಮಲ್ಲಿಕಾರ್ಜುನ ತಿಳಿಸಿದರು.
ರಾಘವೇಂದ್ರ, ಹಿಟ್ಟೂರು ರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

