ಗೋದಾಮು ಕುಸಿದು ನಾಲ್ವರ ಸಾವು
ಕ.ಪ್ರ.ವಾರ್ತೆ, ಶಿಕಾರಿಪುರ, ಮೇ 19
ಮನೆ ಹಿಂಬದಿ ಸೂಕ್ತ ತಳಪಾಯವಿಲ್ಲದೆ ನಿರ್ಮಿಸಲಾಗಿದ್ದ ಗೋದಾಮು ಸೋಮವಾರ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಕುಸಿದು ನಾಲ್ವರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಾಲೂಕಿನ ಕಾಗಿನಲ್ಲಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಾಗಿನಲ್ಲಿ ಗ್ರಾಮದಲ್ಲಿ ಸೋಮವಾರ ಸಂಜೆ 6 ಸುಮಾರಿಗೆ ಸುರಿದ ಭಾರಿ ಮಳೆ, ಗಾಳಿಗೆ ಮನೆ ಹಿಂಭಾಗದಲ್ಲಿ ನಿರ್ಮಿಸಲಾಗಿದ್ದ ಸಾಧಾರಣ ಬಂದೋಬಸ್ತ್ ಕಟ್ಟಡದ ಬೃಹತ್ ಗೋದಾಮು ಕುಸಿದು ಬಿದ್ದು ಮಾಲೀಕ ಸುರೇಂದ್ರಪ್ಪ(55), ಮಗ ಅಂಜನಕುಮಾರ್(30), ಕಾರ್ಮಿಕ ಕೆಂಗಟ್ಟೆ ಗ್ರಾಮದ ಮಂಜಪ್ಪ(55), ಶೇಖರಪ್ಪ ಸ್ಥಳದಲ್ಲಿಯೇ ಮೃತರಾಗಿದ್ದಾರೆ ಎಂದು ಪೊಲೀಸ್ ವೃತ್ತನಿರೀಕ್ಷಕ ಶ್ರೀಧರ್ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಐವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆ- ಗಾಳಿ ರಭಸಕ್ಕೆ ಗ್ರಾಮದ 25ಕ್ಕೂ ಅಧಿಕ ಮನೆಯ ಚಾವಣಿ ಹಾರಿ ಹೋಗಿದ್ದು, ಘಟನಾ ಸ್ಥಳಕ್ಕೆ ಪ್ರೊಬೇಷನರಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಕುಳೇರ್, ಪೊಲೀಸ್ ಉಪಾಧೀಕ್ಷಕ ನಾಗರಾಜ್, ಸಿಪಿಐ ಶ್ರೀಧರ್, ಪಿಎಸ್ಐ ತಿಪ್ಪೇಸ್ವಾಮಿ, ರವಿಕುಮಾರ್ ಮತ್ತಿತರರು ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಪ್ರಕರಣ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಶಿಕಾರಿಪುರ: ತಾಲೂಕಿನ ಕಾಗಿನಲ್ಲಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆ ಗಾಳಿಯ ರಭಸಕ್ಕೆ ಕುಸಿದ ಗೋಡೆಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಗ್ರಾಮದ ರವಿ, ನಾಗೇಂದ್ರಾಚಾರಿ, ಜ್ಞಾನೇಂದ್ರಾಚಾರಿ, ಲೋಕೇಶಪ್ಪ ಹಾಗೂ ಕುಮಾರ ಎಂದು ಗುರುತಿಸಲಾಗಿದೆ.
ಪರಿಹಾರಕ್ಕೆ ಸೂಚನೆ: ಗೋಡೆ ಕುಸಿತದಿಂದಾಗಿ ಮೃತಪಟ್ಟವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಸೋಮವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಗತಿ ಬಗ್ಗೆ ಮಾಹಿತಿಗಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಜತೆ ದೆಹಲಿಯಿಂದ ದೂರವಾಣಿ ಮೂಲಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಾಧ್ಯವಿರುವ ಹೆಚ್ಚಿನ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಜತೆಗೆ ತೀವ್ರವಾಗಿ ಗಾಯಗೊಂಡಿರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಸೂಕ್ತ ಪರಿಹಾರ: ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಆಗಮಿಸಿ ಘಟನೆ ಬಗ್ಗೆ ತನಿಖೆ ನಡೆಸಿ ಪ್ರಕೃತಿ ವಿಕೋಪದಿಂದ ಆದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು.ತೀವ್ರವಾಗಿ ಗಾಯಗೊಂಡಿರುವವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಮೃತರಿಗೆ ತಲಾ 1.5 ಲಕ್ಷ ವಿತರಿಸಲು ಅವಕಾಶವಿದ್ದು, ಘಟನೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡ ಗುರುಮೂರ್ತಿ, ಲಕ್ಷ್ಮಣ ಕೆಂಗಟ್ಟೆ, ಕಂದಾಯ ಅಧಿಕಾರಿ ಮಂಜುನಾಥ್, ರಾಜೀವ್, ಶಶಿಧರ ಮತ್ತಿತರರು ದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

