ಶಿವಮೊಗ್ಗ

ಜೀವ ವೈವಿಧ್ಯ ರಕ್ಷಣೆಗೆ ಆಗ್ರಹ

Published On :

ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 21
ವೃಕ್ಷಲಕ್ಷ ಆಂದೋಲನವು ಜಾಗತಿಕ ಜೀವ ವೈವಿಧ್ಯ ದಿನದಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಯವರಿಗೆ ಬಹಿರಂಗ ಪತ್ರ ಬರೆದಿದ್ದು, ಹಲವು ಜ್ವಲಂತ ಜೀವ ವೈವಿಧ್ಯ ಸಂಗತಿಗಳನ್ನು ನೆನಪಿಸಿದೆ.
ಜೀವ ವೈವಿಧ್ಯ ಮಂಡಳಿ ಸದಾ ಜೀವಂತಿಕೆಯಿಂದ ಕ್ರಿಯಾಶೀಲವಾಗಿ ಇರಬೇಕು. ಈ ಹಿಂದೆ ರೂಪಿಸಲಾಗಿದ್ದ ಜನ ಸಹಭಾಗಿತ್ವದ ರಚನಾತ್ಮಕ, ಜೀವವೈವಿಧ್ಯ ಕಾರ್ಯಚಟುವಟಿಕೆ, ಯೋಜನೆಗಳನ್ನು ಮುಂದುವರೆಸಬೇಕು ಎಂದು ವೃಕ್ಷಲಕ್ಷ ಆಂದೋಲನ ಒತ್ತಾಯ ಮಾಡಿದೆ. ಜೀವ ವೈವಿಧ್ಯ ಮಂಡಳಿಯ ಹಿಂದಿನ ಉಪಾಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ ಅವರು ಈ ಪತ್ರ ಬರೆದಿದ್ದಾರೆ. ರಾಜ್ಯ ಜೀವ ವೈವಿಧ್ಯ ಮಂಡಳಿ ಜೀವವೈವಿಧ್ಯ ಕಾಯಿದೆ ಅಡಿಯಲ್ಲಿ ರಚನೆಗೊಂಡಿದೆ. ಕಳೆದ 5 ವರ್ಷಗಳಲ್ಲಿ ಜೀವ ವೈವಿಧ್ಯ ಮಂಡಳಿ ಮೂಲಕ ಹಲವು ಮುಖಗಳಲ್ಲಿ ನೇರವಾಗಿ ಜೀವ ವೈವಿಧ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಎಂಬುದನ್ನು ಪತ್ರದಲ್ಲಿ ನೆನಪಿಸಲಾಗಿದೆ.
ಎಂಡೋಸಲ್ಫಾನ್ ನಿಷೇಧ: ಎಂಡೋಸಲ್ಫಾನ್ ನಿಷೇಧ, ಬಿ.ಟಿ ವಿವಾದ, ಅತೀಸೂಕ್ಷ್ಮ ಪರಿಸರ ತಾಣಗಳಿಗೆ ಹಾನಿ ಆಗುವ ಸಂದರ್ಭಗಳಲ್ಲಿ ಜೀವವೈವಿಧ್ಯ ಉಳಿವಿಗಾಗಿ ತುರ್ತುಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಪುನರ್ರಚಿತ ಮಂಡಳಿಗೆ ನೆನಪಿಸಲಾಗಿದೆ.
ಮುಂದೇನಾಗಬೇಕು?
ಪುನರ್ರಚನೆ ಆಗಿರುವ ಜೀವ ವೈವಿಧ್ಯ ಮಂಡಳಿ ರಾಜ್ಯದ ಜ್ವಲಂತ ಜೀವವೈವಿಧ್ಯ ವಿಷಯಗಳು ಬಗ್ಗೆ ತುರ್ತು ಗಮನ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.
ಜೌಷಧಿ ಸಸ್ಯಗಳ ಕಳ್ಳ ಸಾಗಾಣೆ ತಡೆಯಬೇಕು, ಜೈವಿಕ ತಾಣಗಳ ರಕ್ಷಣೆ ಮಾಡಬೇಕು, ಪಂಚಾಯಿತ ಜೀವ ವೈವಿಧ್ಯ ಸಮಿತಿಗಳಿಗೆ ಜೀವ ತುಂಬಬೇಕು ಎಂದು ವೃಕ್ಷಲಕ್ಷ ಆಂದೋಲನ ಒತ್ತಾಯಿಸಿದೆ.
ಜಲಾಶಯ, ಕೆರೆಗಳು, ನದೀ ಮೂಲಗಳಲ್ಲಿ ನಾಶದ ಅಂಚಿನ ವೃಕ್ಷ ತಳಿಗಳು, ಕೃಷಿ ತಳಿಗಳ ಉಳಿವಿಗೆ ನೇರ ಕ್ರಮ ತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳಬೇಕು. ತಜ್ಞ ತಂಡಗಳನ್ನು ಸ್ಥಳಕ್ಕೆ ಕಳಿಸಬೇಕು. ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಹಾಗೂ ಪರಿಸರ ಅರಣ್ಯ ಇಲಾಖೆ ಕಾರ್ಯದರ್ಶಿಗಳ ಗಮನ ಸೆಳೆಯಲಾಗಿದೆ. ಜೀವವೈವಿಧ್ಯ ಮಂಡಳಿ ಪರಿಸರ ಜೀವವೈವಿಧ್ಯ ಕ್ಷೇತ್ರದ ತಜ್ಞರು, ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆಯಬೇಕು. ರಾಜ್ಯದ ಜೀವವೈವಿಧ್ಯ ಪರಿಸ್ಥಿತಿ ಪರಾಮರ್ಶೆ ನಡೆಸಬೇಕು ಎಂದು ಒತ್ತಾಯ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.