ಶಿವಮೊಗ್ಗ

ಚುನಾವಣೆ: ಸಹಕಾರ ಭಾರತಿ ಸ್ಪರ್ಧೆ

Published On :

ಶಿವಮೊಗ್ಗ: ಮೇ 24ರಂದು ನಡೆಯುತ್ತಿರುವ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಚುನಾವಣೆ ಹಾಗೂ ಮೇ 26ರಂದು ನಡೆಯುವ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿ ಸ್ಪರ್ಧೆ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಸಹಕಾರಿ ವಿಭಾಗದ ಅಧ್ಯಕ್ಷ ಹೊಸಹಳ್ಳಿ ರವಿಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನಲ್ಲಿ ಕಳೆದ ಅನೇಕ ವರ್ಷಗಳಿಂದ ಏಕವ್ಯಕ್ತಿ ಆಡಳಿತ ನಡೆಯುತ್ತಿದೆ. ಇದು ಸಹಕಾರಿ ತತ್ವಕ್ಕೆ ವಿರುದ್ಧ, ಆಡಳಿತ ಕೂಡ ಚೆನ್ನಾಗಿ ನಡೆದಿಲ್ಲ ಎಂದು ಅವರು  ಅಸಮಾಧಾನ ವ್ಯಕ್ತಪಡಿಸಿದರು.
ಎರಡು ಕಡೆ ಸದಸ್ಯತ್ವ: ಒಬ್ಬ ವ್ಯಕ್ತಿ ಒಂದೇ ಉದ್ದೇಶ ಹೊಂದಿರುವ ಹಾಗೂ ಒಂದೇ ಸ್ತರದ ಸಂಘಗಳಲ್ಲಿ ಸದಸ್ಯರಾಗುವಂತಿಲ್ಲ. ಆದರೆ ಮಂಜುನಾಥ ಗೌಡರು ಶಿವಮೊಗ್ಗ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಹಾಗೂ ತೋಟಗಾರಿಕೆ ಬೆಳೆಗಾರರ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದಿದ್ದು, ಇದು ಕಾನೂನು ಬಾಹಿರ ಎಂದರು.
ನಿಯಮ ಉಲ್ಲಂಘನೆ: ಶಿವಮೊಗ್ಗ ಹಾಲು ಒಕ್ಕೂಟದ ಹಾಲಿ ಅಧ್ಯಕ್ಷ ಜಗದೀಶ್ವರ್ ಕೂಡ ಎರಡು ಕಡೆ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇವರು ಶಿವಮೊಗ್ಗದಲ್ಲಿ ವಾಸವಿದ್ದು, ಕುಂಚೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಯಡವಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ರೀತಿ ಮಾಡುವಂತಿಲ್ಲವಾದರೂ ಸ್ವ ಹಿತಾಸಕ್ತಿಗಾಗಿ  ಜಾಣ್ಮೆ ಪ್ರದರ್ಶಿಸುತ್ತಿದ್ದಾರೆಂದು ಟೀಕಿಸಿದರು.
 ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದ ಅವರು, ಶಿಮೂಲ್ ಸಿಬ್ಬಂದಿ ನೇಮಕಾತಿಯಲ್ಲಿ ಭಾರೀ ಅವ್ಯವಹಾರ ಮಾಡಲಾಗಿದೆ. ಹಣ ಕೊಟ್ಟವರಿಗೆ ನೌಕರಿ ನೀಡಿ ಮೆರಿಟ್ ಇದ್ದವರಿಗೆ ವಂಚಿಸಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಿದರು.


'ಸಹಕಾರಿ ಮತಕ್ಕೆ ಧಮಕಿ'
ಮಂಜುನಾಥ ಗೌಡರು ಸಹಕಾರಿ ಕ್ಷೇತ್ರಕ್ಕೆ ಬಾರದಿದ್ದರೆ ಡಿಸಿಸಿ ಬ್ಯಾಂಕ್ ಹಾಗೂ ಇಡೀ ಕ್ಷೇತ್ರವೇ ಅಧೋಗತಿಗೆ ಹೋಗುತ್ತಿತ್ತು ಎಂದು ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನಿಯಮ 54ರ ಅಡಿ ತನಿಖೆ ನಡೆಯುತ್ತಿದೆ. ತನಿಖೆ ನಡೆಸಬಾರದೆಂದು ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ, ತಪ್ಪು ಮಾಡದಿದ್ದರೆ ತಡೆಯಾಜ್ಞೆ ಏಕೆ ತರಬೇಕಿತ್ತೆಂದು ಪ್ರಶ್ನಿಸಿದರು.
ಸೊಸೈಟಿಗಳಿಗೆ ಧಮಕಿ: ಡಿಸಿಸಿ ಬ್ಯಾಂಕ್‌ನ ಅಧಿಕಾರಿಗಳನ್ನು ಬಳಸಿ ಕೆಲವು ಸಹಕಾರಿ ಸಂಘಗಳನ್ನು ಸೂಪರ್‌ಸೀಡ್ ಮಾಡಿ ಮತದಾನದಿಂದ ಅನರ್ಹ ಮಾಡಲಾಗಿದೆ. ತಮಗೆ ಮತ ಹಾಕದಿದ್ದರೆ ಮುಂದೆ ನೀವು ಹೇಗೆ ಸಾಲ ಪಡೆಯುತ್ತೀರಿ ನೋಡುತ್ತೇವೆಂದು ಸೊಸೈಟಿಗಳಿಗೆ ಧಮಕಿ ಹಾಕಲಾಗುತ್ತಿದೆ ಎಂದರು.
ಕೆ.ಜಿ.ಕುಮಾರಸ್ವಾಮಿ, ದತ್ತಾತ್ರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.