ಬಿಎಸ್ವೈಗೆ ಅಭಿನಂದನೆ ನಾಳೆ
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರ ಬಿಜೆಪಿ ಘಟಕಗಳು ಮೇ 31ರಂದು ಪ್ರತ್ಯೇಕ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಮಾರಂಭ ಆಯೋಜಿಸಿವೆ. ನೂತನ ಸಂಸದ ಬಿ.ಎಸ್. ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಆಯನೂರು ಮಂಜುನಾಥ, ವಿಧಾನ ಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಮತ್ತಿತರರು ಭಾಗವಹಿಸುವರು.
ಗ್ರಾಮಾಂತರ ಕ್ಷೇತ್ರ ಘಟಕವು ಅಂದು ಬೆಳಗ್ಗೆ 10.30ಕ್ಕೆ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕ್ಷೇತ್ರ ಪ್ರಭಾರಿಗಳಾದ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ತಾಲೂಕು ಬಿಜೆಪಿ ಅಧ್ಯಕ್ಷ ಎನ್.ಜಿ. ರುದ್ರೇಶಗೌಡ್ರು, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಡಿ. ಮಂಜುನಾಥ್ ಉಪಸ್ಥಿತರಿರುವರು.
ನಗರ ಬಿಜೆಪಿ ಘಟಕವು ಸಂಜೆ 5.30ಕ್ಕೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ವಿಭಾಗ ಸಹ ಪ್ರಭಾರಿಗಳಾದ ಗಿರೀಶ್ ಪಟೇಲ್, ನಗರ ಬಿಜೆಪಿ ಜ್ಞಾನೇಶ್ವರ ಉಪಸ್ಥಿತರಿರುತ್ತಾರೆ.
5000 ಹೆಚ್ಚುವರಿ ಶಿಕ್ಷಕರ ನೇಮಕ: ಸಿಎಂ ಒಪ್ಪಿಗೆ
ಶಿವಮೊಗ್ಗ: ಐದು ಸಾವಿರ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರವು 1ರಿಂದ ಪಿಯುಸಿ ವರೆಗೆ 11,400 ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿದೆ. ಇನ್ನೂ ಶಿಕ್ಷಕರ ಕೊರತೆ ಇರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅವರು ಆರ್ಥಿಕ ಹೊರೆ ಇದ್ದರೂ ಹೆಚ್ಚುವರಿ 5 ಸಾವಿರ ಶಿಕ್ಷಕರ ನೇಮಕ್ಕೆ ಆದೇಶ ನೀಡಿದ್ದಾರೆ ಎಂದರು.
ಈಗಾಗಲೇ ಎಲ್ಲಾ ಶಾಲೆಗಳಿಗೆ ಪುಸ್ತಕ ತಲುಪಿವೆ. ಸಮವಸ್ತ್ರ ವಿತರಣೆ ಜೂನ್ 15ರೊಳಗೆ ಮುಗಿಯಲಿದೆ. ಹಿಂದಿನಂತೆ ಈ ಬಾರಿ ಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆಗೆ ಯಾವುದೇ ತೊಂದರೆ ಆಗಿಲ್ಲ. ಇದಕ್ಕಾಗಿ 2013ರಿಂದಲೇ ತಯಾರಿ ನಡೆಸಲಾಗಿತ್ತು ಎಂದಿದ್ದಾರೆ.
ನೇಕಾರರ ಹಿತದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಕೈಮಗ್ಗ ಸಂಸ್ಥೆಗೆ ಸಮವಸ್ತ್ರ ಪೂರೈಸಲು ಸೂಚಿಸಲಾಗಿತ್ತು. ಇವರಿಂದ ಸ್ವಲ್ಪ ವಿಳಂಬವಾದ ಕಾರಣ ಸಂಸ್ಥೆ ಅಧಿಕಾರಿಗಳು, ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದರು.
ಅಂಬೇಡ್ಕರ್, ಬಸವೇಶ್ವರ ಜಯಂತಿ
ಸೊರಬ: ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಯಾವುದೇ ತಾರತಮ್ಯವಿಲ್ಲ. ರಾಷ್ಟ್ರವು ಸುಭದ್ರವಾಗಿರಲು ಅವರು ನೀಡಿದ ಕೊಡುಗೆ ಸ್ಮರಣೀಯವಾದುದು. ಇಂತಹ ಮಹಾಪುರುಷರು ನೀಡಿದ ಸಂದೇಶಗಳು ಸಾರ್ವಕಾಲಿಕ ಸತ್ಯ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ತಿಳಿಸಿದರು. ತಾ. ದಸಂಸ ವತಿಯಿಂದ ಜಡೆ ಗ್ರಾಮದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿ, ವಚನಗಳ ಮೂಲಕ ಸಮಾಜದಲ್ಲಿನ ಪ್ರೀತಿ ವಿಶ್ವಾಸದ ಕೊರತೆಯನ್ನು ನೀಗಿಸಿದವರು ಬಸವಣ್ಣನವರು ಎಂದರು.
ಅಂಬೇಡ್ಕರ್ ಉಪನ್ಯಾಸ ನೀಡಿದ ಪ್ರೊ. ಚಂದ್ರಶೇಖರ್ ಮರಿಯಮ್ಮಹಳ್ಳಿ, ಸಂವಿಧಾನದಲ್ಲಿ ಕಾರ್ಮಿಕರು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಿಗೆ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಶಿವಮ್ಮ ಉದ್ಘಾಟಿಸಿದರು. ಸಮಿತಿಯ ತಾಲೂಕು ಸಂಚಾಲಕ ಬಿ. ಬಂಗಾರಪ್ಪ ನಿಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಂಚಾಲಕ ಗುರುರಾಜ್, ಪ್ರಮುಖರಾದ ಎ.ಡಿ. ನಾಗಪ್ಪ ಮಾವಲಿ, ಅಶೋಕ್ ತಲಗುಂದ, ಹರೀಶ್, ಪ್ರಕಾಶ್, ಬಸವರಾಜ್ ಬಂಕಸಾಣ, ಬಸವಂತಪ್ಪ ಕೋಟೆ, ಜಹಿರುದ್ದೀನ್ ಸಾಬ್, ರುದ್ರಗೌಡ್ರು, ತಲ್ಲೂರು ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಬಿಸಿಎಂ ಇಲಾಖೆ ವತಿಯಿಂದ ಶಿವಮೊಗ್ಗ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 2014- 15ನೇ ಸಾಲಿನಲ್ಲಿ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ. 13 ಕೊನೆಯ ದಿನ. ಪ್ರವೇಶಾರ್ಥಿಗಳು 2013- 14ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಾಸಸ್ಥಳದಿಂದ ವಸತಿ ನಿಲಯ ಕನಿಷ್ಠ 5 ಕಿ.ಮೀ. ದೂರದಲ್ಲಿರಬೇಕು. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸುವ ಹಿಂದುಳಿದ ವರ್ಗಗಳ ವರ್ಗ-1, ವರ್ಗ-2ಎ, 2ಬಿ, 3ಎ, 3ಬಿ, ಪ.ಜಾತಿ, ಪ.ವರ್ಗಕ್ಕೆ ಸೇರಿರಬೇಕು. ಪ.ಜಾತಿ, ಪ.ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಾರ್ಷಿಕ 2 ಲಕ್ಷ ಆದಾಯದ ಮಿತಿ, ವರ್ಗ-1ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷ ಆದಾಯದ ಮಿತಿ ಮತ್ತು 2ಎ, 2ಬಿ, 3ಎ, 3ಬಿ ಗೆ ಸೇರಿದ ವಿದ್ಯಾರ್ಥಿಗಳಿಗೆ ವಾರ್ಷಿಕ 44,500 ಆದಾಯ ಮಿತಿ ಇರುತ್ತದೆ.
ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ದೇವರಾಜ ಅರಸು ಭವನ, ಬೈಪಾಸ್ ರಸ್ತೆ, ವಿದ್ಯಾನಗರ, ಶಿವಮೊಗ್ಗ-03 ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂ.13 ರೊಳಗಾಗಿ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸುವಂತೆ ಶಿವಮೊಗ್ಗ ತಾಲೂಕಿನ ಬಿಸಿಎಂ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ವಿಶ್ವ ತಂಬಾಕು ರಹಿತ ದಿನಾಚರಣೆ
ಶಿವಮೊಗ್ಗ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಆಶ್ರಯದಲ್ಲಿ ಮೇ 31 ರಂದು ಬೆಳಗ್ಗೆ 10 ಗಂಟೆಗೆ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಏರ್ಪಡಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ಅಂಗಡಿರವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸತ್ರ ನ್ಯಾಯಾಧೀಶ ನಂಜುಂಡಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಜಿಲ್ಲಾ ಅಧಿಕಾರಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧ್ಯಕ್ಷರು ತಿಳಿಸಿದ್ದಾರೆ.
ಆನವಟ್ಟಿ ಕೃಷಿ ಕೇಂದ್ರದಲ್ಲಿ ಭೂಚೇತನ ಕಾರ್ಯಕ್ರಮ
ಸೊರಬ: ಹವಾಗುಣಕ್ಕೆ ಅನುಗುಣವಾಗಿ ಮೂಲ ತಳಿಯ ಬಿತ್ತನೆ ಬೀಜ, ತಾಂತ್ರಿಕತೆ ಅಳವಡಿಸಿಕೊಂಡು ಬೇಸಾಯ, ಮಣ್ಣು, ನೀರು ಪರೀಕ್ಷಿಸಿ, ಅಗತ್ಯ ಪೋಷಕಾಂಶಗಳನ್ನು ಬಳಕೆ ಮಾಡುವುದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯವಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಮಂಜುಳಾ ತಿಳಿಸಿದರು.
ಆನವಟ್ಟಿ ಕೃಷಿ ಕೇಂದ್ರದ ಆವರಣದಲ್ಲಿ ನಡೆದ ಭೂಚೇತನ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಮಾರಾಟದ ವ್ಯಾಪಕ ಜಾಲವೇ ಹುಟ್ಟಿಕೊಂಡಿದೆ. ರೈತರು ಬಿತ್ತನೆ ಬೀಜಗಳನ್ನು ಅಂಗಡಿಗಳಲ್ಲಿ ಖರೀದಿಸಿ ಅಧಿಕೃತ ರಸೀದಿಯನ್ನು ಕಡ್ಡಾಯವಾಗಿ ಪಡೆಯಬೇಕು. ಬಿತ್ತನೆ ಬೀಜದ ಖಾಲಿ ಪ್ಯಾಕೇಟ್ ಹಾಗೂ ರಸೀದಿಗಳನ್ನು ಬೆಳೆ ಬರುವವರೆಗೂ ಕಾಯ್ದಿಡಬೇಕು. ಒಂದು ವೇಳೆ ಬೆಳೆ ಬಿತ್ತನೆ ಬೀಜದಿಂದಲೇ ಹಾಳಾದಲ್ಲಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳಲು ಇಲಾಖೆಗೆ ನೆರವಾಗುತ್ತದೆ ಎಂದರು.
ತಾಪಂ ಸದಸ್ಯೆ ವಿಶಾಲಾ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಜಯಶೀಲಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಬಸವರಾಜಪ್ಪ, ರೇವಣಪ್ಪ, ದಯಾನಂದ ಗೌಡ, ಕಾರಳ್ಳಿ ರಂಗಪ್ಪ, ಸನಾವತ್ ಉಲ್ಲಾ, ಕಾಂತರಾಜ್, ಅನವುಗಾರರು, ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

