ತುಮಕೂರು

ಆರೋಪಿ ಭಾರ್ಗವನಿಗೆ ಸಂಸದರ ರಕ್ಷಣೆ

Published On :

ಕ.ಪ್ರ. ವಾರ್ತ್ಣೆ ತುಮಕೂರ್ಣು ಏ.6
ಸ್ವೀಟಿ ಮರ್ಲಿನ್ ಆತ್ಮಹತ್ಯೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಆರೋಪಿ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಭಾರ್ಗವನನ್ನು ಬಂಧಿಸುವಲ್ಲಿ ಕೇವಲ ಪೊಲೀಸರ ನಿಷ್ಕ್ರ್ರಿಯತೆ, ತನಿಖೆಯಲ್ಲಿ ವಿಳಂಬ ಧೋರಣೆಗಷ್ಟೇ ಸೀಮಿತಗೊಂಡಿದ್ದ ಈ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಸುತ್ತ ತಳುಕು ಹಾಕಿಕೊಂಡಿದೆ.
ಸಚಿವ ಸೊಗಡು ಶಿವಣ್ಣ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗೆ ಸಂಸದ ಜಿ.ಎಸ್. ಬಸವರಾಜು ರಕ್ಷಣೆ ನೀಡುತ್ತಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸುವಲ್ಲಿ ವಿಳಂಬವಾಗಿದೆ ಎಂಬ ಅನುಮಾನ ತಮಗೆ ಕಾಡತೊಡಗಿದ್ದು, ಕೆಲ ಪತ್ರಿಕೆಗಳಲ್ಲೂ ಈ ಕುರಿತು ವರದಿಗಳು ಬಂದಿವೆ. ಸ್ವೀಟಿ ಮರ್ಲಿನ್ ಆತ್ಮಹತ್ಯೆ ಪ್ರಕರಣ ಕುರಿತು ವಸ್ತುನಿಷ್ಠವಾಗಿ ವರದಿ ಮಾಡುತ್ತಿರುವ ಪತ್ರಿಕೆಗಳಿಗೆ ಶ್ಲಾಘಿಸುವುದಾಗಿಯೂ, ಧನ್ಯವಾದ ಅರ್ಪಿಸುವುದಾಗಿಯೂ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಒಬ್ಬ ಅಮಾಯಕ ಹೆಣ್ಣು ಮಗಳ ಆತ್ಮಹತ್ಯೆಗೆ ಕಾರಣನಾಗಿರುವ ಭಾರ್ಗವನಿಗೆ ಸಂಸದ ಜಿ.ಎಸ್. ಬಸವರಾಜು ರಕ್ಷಣೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಸೊಗಡು ಪ್ರಶ್ನಿಸಿದರು.
ಅನ್ಯಾಯ ಸಹಿಸಲ್ಲ: ಯಾವುದೇ ಜಾತಿ, ಧರ್ಮದ ಹೆಣ್ಣು ಮಗಳಿಗೆ ಅನ್ಯಾಯವಾದರೆ ತಾವು ಸಹಿಸಲ್ಲ. ತಾವು ಸ್ವೀಟಿ ಮರ್ಲಿನ್ ಕುಟುಂಬದ ಪರ ಇರುವುದಾಗಿಯೂ, ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಿಯೂ, ಸ್ವೀಟಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿಯೂ, ಹೆಣ್ಣು ಮಕ್ಕಳ ಮರ್ಯಾದೆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸೊಗಡು ಸ್ಪಷ್ಟಪಡಿಸಿದರು.
ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ: ಸ್ವೀಟಿ ಮರ್ಲಿನ್ ಆತ್ಮಹತ್ಯೆಗೆ ಕಾರಣನಾಗಿರುವ ಆರೋಪಿ ಭಾರ್ಗವನನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿಯೂ, ಯಾವುದೇ ಒತ್ತಡ ತಂತ್ರಕ್ಕೆ ಮಣಿಯದಂತೆ, ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ಸೂಚಿಸುವುದಾಗಿಯೂ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು.
ಈಗಾಗಲೇ ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವ ಕುರಿತು ಹಾಗೂ ತನಿಖಾಧಿಕಾರಿ ಬದಲಿಸಿ, ಹೊರ ಜಿಲ್ಲೆ ಪೊಲೀಸರಿಗೆ ತನಿಖೆಯ ಜವಾಬ್ದಾರಿ ವಹಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಹೇಳಿಕೆ ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ತನಿಖೆ ವಿಳಂಬವಾಗಿದೆ ಎಂಬ ಹೇಳಿಕೆಯನ್ನು ಸಹ ಗಮನಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನು ಮಾಡುವುದಾಗಿಯೂ, ಸ್ವೀಟಿ ಮರ್ಲಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಸಹ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಂಎಸ್ಐಎಲ್ ಅಧ್ಯಕ್ಷ  ನಂದೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ನಗರ ಬಿಜೆಪಿಯ ನಂದೀಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.