ತುಮಕೂರು

'ಟಿ.ಬಿ.ಜಯಚಂದ್ರಗೆ ಜನತೆಯಿಂದ ತಕ್ಕ ಪಾಠ'

Published On :

ಶಿರಾ: ನನಗೆ ಹಣ ಬಲ ಇಲ್ಲದಿರಬಹುದು ಆದರೆ ಜನಬಲವಿದೆ. ನನ್ನ ಬಳಿ ಹಣವಿಲ್ಲವೆಂದು ತಿಳಿದು ಎಲ್ಲರನ್ನು ದುಡ್ಡು ಕೊಟ್ಟು ಕೊಂಡು ಕೊಳ್ಳಬಹುದೆಂದು ದುಡ್ಡಿನ ದರ್ಪ ಪ್ರದರ್ಶಿಸುತ್ತಿರುವ ಟಿ.ಬಿ.ಜಯಚಂದ್ರರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ತಿಳಿಸಿದರು.
ಅವರು ತಾಲೂಕಿನ ಮದಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ ಮತ್ತು ವಿವಿಧ ಪಕ್ಷಗಳ ಮುಖಂಡರುಗಳ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಸಕನಾಗಿ ಜಯಚಂದ್ರರರ ಮತ್ತು ಕುಟುಂಬದ ದುರಾಡಳಿತ ಭ್ರಷ್ಟಾಚಾರ ಲೂಟಿ ಕ್ಷೇತ್ರದ ಅಭಿವೃದ್ಧಿಯ ನಿರ್ಲಕ್ಷ ಇವೆಲ್ಲವನ್ನೂ ಜನತೆ ನೋಡಿ ಈ ಬಾರಿ ಜೆಡಿಎಸ್ ಬೆಂಬಲಿಸಲು ನಿರ್ಧರಿಸಿದ್ದು ಎಲ್ಲೆಡೆ ಪಕ್ಷಕ್ಕೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು ಖಂಡಿತವಾಗಿಯೂ ಈ ಭಾರಿ ಗೆಲವು ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಏನನ್ನಾದರೂ ತಂದಿದ್ದೀರಾ: ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಆರ್.ಮುರುಗಪ್ಪಗೌಡ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಇದ್ದ ಕಾಂಗ್ರೆಸ್ ಪಕ್ಷವೆ ಬೇರೆ, ಪ್ರಸ್ತುತ ಇರುವ ಕಾಂಗ್ರೆಸ್ ಬೇರೆ. ಆಗ ಪಕ್ಷಕ್ಕೆ ಜನಪರ ಕಾಳಜಿ ಇತ್ತು. ಆದರೆ ಈಗ ಬರಿ ದೋಚುವುದೇ ದಂಧೆಯಾಗಿದೆ. ಕ್ಷೇತ್ರಕ್ಕೆ ಶಾಸಕರಾದ ಟಿ.ಬಿ.ಜಯಚಂದ್ರ ಅವರು 5 ವರ್ಷದಲ್ಲಿ 874 ಕೋಟಿ ಕಾಮಗಾರಿ ಆಗಿದೆ ಎನ್ನುವ ಅವರು ಯಾವ ಯಾವ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆಂದು ಪಟ್ಟಿ ನೀಡಲಿ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು ಎಲ್ಲಾ ಕ್ಷೇತ್ರಕ್ಕೂ ಬರುತ್ತವೆ. ಅದನ್ನು ಸಾಧನೆಯೆಂದು ಹೇಳುವ ನೀವು ಶಾಸಕರಾದ ನಂತರ ಕ್ಷೇತ್ರದಲ್ಲಿ ಒಂದೇ ಒಂದು ಆಸ್ಪತ್ರೆ, ಅಂಗನವಾಡಿ, ಶಾಲೆ ಉತ್ತಮ ರಸ್ತೆ ಏನನ್ನಾದರೂ ತಂದಿದ್ದೀರಾ. ಬರೀ ನೀರಿನ ವಿಷಯ ಮಾತನಾಡುವ ನೀವು ಒಬ್ಬರೇ ನೀರು ತರಲಿಲ್ಲ. ಇದರಲ್ಲಿ ಎಲ್ಲಾ ಪಕ್ಷಗಳ ಮುಖಂಡರೂಗಳ ಪಾತ್ರವು ಇದೆ. ಶಾಸಕನಾಗಿ ಎರಡು ವರ್ಷದಲ್ಲಿ ಮದಲೂರು ಕೆರೆಗೆ ನೀರು ತರುತ್ತೇನೆಂದು ಹೇಳಿದ್ದ ನೀವು ಇಲ್ಲಿಯವರೆಗೂ ಯಾಕೆ ತಂದಿಲ್ಲ ಎಂದು ಪ್ರಶ್ನಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್ ಮಾತನಾಡುತ್ತ, ನಾನು ನೇರವು ನೀಡಿದ ಕಾರ್ಯಕ್ರಮಗಳಿಗೆ ಭಾಗವಹಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಜಯಚಂದ್ರರಿಗೆ ಈಗ ಕಲ್ಕೆರೆ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಬರಿ ಸುಳ್ಳನ್ನೇ ಹೇಳಿಕೊಂಡು ಹಣ ಬಲದಿಂದ ಗೆಲ್ಲುತ್ತೇನೆ ಎಂದು ತಿಳಿದಿದ್ದಾರೆ ಎಂದರು.
ಎಚ್ಡಿಕೆ ಸಿಎಂ ಆಗಲಿ: ಜಿ.ಪಂ. ಸದಸ್ಯ ಸಿ.ಆರ್.ಉಮೇಶ್ ಮಾತನಾಡಿ ರಾಜ್ಯದಲ್ಲೇ ಗಮನ ಸೆಳೆದಿರುವ ಮದಲೂರು ಕೆರೆ ನೀರು ಹರಿಸಲು ಕಾರಣವಾಗಿರುವ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿ ಕರೆ ತರಬೇಕು ಎಂದರು.
ಸಮಾವೇಶದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.