ಉನ್ನತ ಚಿಂತನೆ ಅಳವಡಿಕೆಯಿಂದ ಬದುಕು ಸಾರ್ಥಕ
ಕ.ಪ್ರ. ವಾರ್ತೆ ತಿಪಟೂರು ಏ.10
ತಂದೆ-ತಾಯಿ, ಗುರುಗಳ ವಾಣಿಯೇ ಅಶರೀರವಾಣಿ. ವಿದ್ಯಾರ್ಥಿಗಳೇ ಇದನ್ನು ಕಡೆಗಣಿಸದೆ ಸದುಪಯೋಗಪಡಿಸಿಕೊಂಡು ಹಿರಿಯರ, ಮಹಾತ್ಮರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪೋಷಕರ ಸಂಘದ ಕಾರ್ಯಚಟುವಟಿಕೆ ಸಾಂಸ್ಕೃತಿಕ ಹಬ್ಬ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬುದ್ಧ ಬಸವ, ಕನಕದಾಸ, ಮುಂತಾದ ಮಹಾನುಭಾವರ ಆಲೋಚನೆಗಳು ಒಂದು ಜಾತಿ ಒಂದು ಜನಾಂಗಕ್ಕೆ ಸೀಮಿತಗೊಳ್ಳದೆ, ಜಾತಿ ಮೀರಿ ಬೆಳೆಯುವ ಆಲೋಚನೆ ಬೆಳೆಸಿಕೊಳ್ಳಬೇಕು. ಸಾಧಕ ಮಾತ್ರ ಎಲ್ಲವನ್ನೂ ಪಡೆಯಬಲ್ಲ. ಪಾಪಿಗೆ ಏಕಾಂತ ನರಕವಾದರೆ, ಜ್ಞಾನಿಗೆ ಅದು ಸ್ವರ್ಗವಾಗುತ್ತದೆ. ವಿದ್ಯೆಯನ್ನು ಪಾಠ ಪ್ರವಚನಗಳಿಗೆ ಸೀಮಿತಗೊಳಿಸದೆ ಬೌದ್ಧಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಸೋಮುಭಾಸ್ಕರಾಚಾರ್ ಮಾತನಾಡಿ, ಯಾರು ಸರಿಯಾಗಿ ಕಲಿಕೆ ಅವಧಿಯಲ್ಲಿ ಕಲಿಯುವುದಿಲ್ಲವೋ ಅವರು ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜೀವನದ ಪರೀಕ್ಷೆಗೆ ಆದ್ಯತೆ ಕೊಡಬೇಕು. ಬುದ್ಧಿವಂತಿಕೆ ತಯಾರು ಮಾಡುವ ಶಿಕ್ಷಣ ಎಷ್ಟು ಅಗತ್ಯವೋ ಅದಕ್ಕಿಂತ ಮುಖ್ಯವಾಗಿ ಹೃದಯವಂತಿಕೆ ಶಿಕ್ಷಣ ಸಾಮಾಜಿಕ ಬದುಕಿನಲ್ಲಿ ಬಹುಮುಖ್ಯವಾಗಿದೆ. ವಿಚಾರಗಳು ಜಗತ್ತನ್ನೇ ಆಳಬೇಕು ಬುದ್ಧಿವಂತಿಕೆಯಲ್ಲ ಎಂದು ಕರೆ ನೀಡಿದರು.
ಪೋಷಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿಲ್ಲೇಮನೆ ಮಾತನಾಡಿ, ಭೂತಕಾಲ ನೆನೆದು ವರ್ತಮಾನದಲ್ಲಿ ನಿಂತು ಭವಿಷ್ಯ ರೂಪಿಸಿಕೊಳ್ಳಬೇಕು. ಸರ್ವರಿಗೂ ಸಮಬಾಳು ಸಮಪಾಲು ನೀತಿಯನ್ನು ಜಾರಿಗೊಳಿಸುವುದರ ಜೊತೆಗೆ ಗಾಂಧೀಜಿ ಚಿಂತನೆ ಮೈಗೂಡಿಸಿಕೊಳ್ಳಬೇಕೆಂದರು.
ಪ್ರಾಂಶುಪಾಲ ಡಾ. ಜಯದೇವಪ್ಪ ಮಾತನಾಡಿ,ಬದಲಾಗುತ್ತಿರುವ ಜಗತ್ತಿನಲ್ಲಿ ಸಮಸ್ಯೆಗಳಿಗೆ ಪರಿಹಾರ, ಮನಸ್ಸಿನ ಕೊಳೆ ತೊಳೆಯುವ ಮಾನವೀಯ ಚಿಂತನೆ ಮೆರೆಯುವ ಶಿಕ್ಷಣ ನಮಗೆ ಬೇಕಾಗಿದೆ. ನಮ್ಮ ಪದವಿ ನಮಗೆ ಏನು ಮಾಡಿವೆ ಎಂಬುದು ಮುಖ್ಯವಾಗಿದೆ ಹೊರತು, ಸ್ವಾರ್ಥಕ್ಕೇನು ಮಾಡಿವೆ ಎಂಬುದಲ್ಲಾ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಇದೆ ಸಂದರ್ಭದಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿಗೆ ರ್ಯಾಂಕ್ ತಂದ ವಿದ್ಯಾರ್ಥಿಗಳಾದ ಎಂ.ಎಸ್.ಮಹಾಲಕ್ಷ್ಮಿ ಮತ್ತು ಮಣಿಕಂಠ ಅವರನ್ನು ಸನ್ಮಾನಿಸಲಾಯಿತು. ಪ್ರೊ.ನಿಂಗಪ್ಪ, ಡಾ.ಹೊನ್ನಾಂಜಿನಯ್ಯ, ಪ್ರೊ.ರಾಜಶೇಖರ್, ಪ್ರೊ.ನರಸಿಂಹರಾಜು, ಡಾ.ವೆಂಕಟೇಶ್ ಸೇರಿದಂತೆ ಪ್ರಾಧ್ಯಾಪಕರು, ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರ್ಚನಾ ಶರ್ಮ ಪ್ರಾರ್ಥಿಸಿ, ರಾಮಚಂದ್ರ ಸ್ವಾಗತಿಸಿ, ಸಿದ್ದಗಂಗಯ್ಯ ನಿರೂಪಿಸಿ, ಕುಮಾರಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

