'ಬಿಜೆಪಿ, ಕಾಂಗ್ರೆಸ್ ವಾಮಮಾರ್ಗ'
ಕ.ಪ್ರ.ವಾರ್ತೆ ತಿಪಟೂರು ಏ.16
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ತಿಪಟೂರಿನ ಕಾರ್ಯಚಟುವಟಿಕೆ ಹೆಚ್ಚಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ವಾಮಮಾರ್ಗಗಳ ಮುಖಾಂತರ ಜನರನ್ನು ದಾರಿತಪ್ಪಿಸುತ್ತಿವೆ ಎಂದು ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಉಭಯ ಪಕ್ಷಗಳ ವಿರುದ್ಧ ಹರಿಹಾಯ್ದರು.
ನಗರದ ಕೆಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹುಚ್ಚಗೊಂಡನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಅತ್ಯಂತ ಹಿಂದುಳಿದ ಈರಲಗೆರೆ ಹರಿಜನ ಕಾಲೋನಿಯಿಂದ ಮಂಗಳವಾರ ಸಂಜೆ ಪ್ರಚಾರವನ್ನು ಪ್ರಾರಂಭಿಸುತ್ತಿದ್ದು, ತಾಲೂಕಿನ ಎಲ್ಲಾ ಹಳ್ಳಿಗಳ ಮನೆಮನೆಗೂ ತೆರಳಿ ಪ್ರಚಾರಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಅನೇಕ ಅಕ್ರಮಗಳನ್ನು ಎಸಗುತ್ತಿದ್ದು, ಅಕ್ರಮವಾಗಿ ಮದ್ಯಸಾಗಿಸುತ್ತಿದ್ದ ನಾಲ್ಕು ವಾಹನಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
ಬಿಜೆಪಿ ತಾಲೂಕಿನ ಮುಗ್ಧ ಜನರಿಗೆ ಹಣ, ಹೆಂಡ, ಮಾಂಸಗಳಂತಹ ಆಮಿಷಗಳನ್ನು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿ ಅಕ್ರಮ ದಿನನಿತ್ಯ ಸಾಬೀತಾಗಿದ್ದು, ಅಧಿಕಾರಿಗಳು ಕೂಡಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು 5 ವರ್ಷಗಳಿಗಿಂತಲೂ ಹಿಂದಿನಿಂದ ಬೀಡುಬಿಟ್ಟಿದ್ದು, ಅವರೆಲ್ಲಾ ಬಿಜೆಪಿ ಶಾಸಕ ನಾಗೇಶ್ ಪರ ಕೆಲಸ ಮಾಡುತ್ತಿದ್ದು, ಅವರನ್ನು ಈ ಕೂಡಲೆ ವರ್ಗಾಯಿಸಬೇಕು. ಅಲ್ಲಿವರೆಗೂ ಚುನಾವಣಾ ಕೆಲಸ ಕಾರ್ಯಗಳಿಂದ ದೂರ ಇಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದರು.
ಯಡಿಯೂರಪ್ಪ ಅಲೆ: ಕ್ಷೇತ್ರದಲ್ಲಿ ಯಡಿಯೂರಪ್ಪನವರ ಅಲೆ ಹಿಂದಿಗಿಂತಲೂ ಪ್ರಬಲವಾಗಿದ್ದು, ತಾಲೂಕಿಗೆ ಅವರು ನೀಡಿರುವಂತಹ ಅವಿಸ್ಮರಣೀಯ ಕೆಲಸ ಕಾರ್ಯಗಳನ್ನು ಇಲ್ಲಿನ ಜಾತ್ಯತೀತ ಪ್ರಜ್ಞಾವಂತ ಮತ್ತು ಸುಶಿಕ್ಷಿತ ಮತದಾರರು ಮೆಚ್ಚಿ ಕೆಜೆಪಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನನ್ನ ಕೈಹಿಡಿಯುವುದು ನಿಶ್ಚಿತ ಎಂದು ಲೋಕೇಶ್ವರ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ತಾ.ಅಧ್ಯಕ್ಷ ರಘುಪತಿ, ಕಾರ್ಯದರ್ಶಿ ಮಲ್ಲೇಶ್, ತಾ.ಕೆಜೆಪಿ ಮುಖಂಡರಾದ ಕರಡಿ ದೇವರಾಜು, ಹಿಂಡಿಸ್ಕೆರೆ ಶಿವಶಂಕರ್, ಚಿಕ್ಕಬಿದರೆ ಶೇಖರಣ್ಣ, ನೊಣವಿನಕೆರೆ ರೇಣುಕಸ್ವಾಮಿ, ರಂಗಾಪುರ ದೇವರಾಜು ಸೇರಿದಂತೆ ಅನೇಕ ಮುಖಂಡರುಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

