ಹಿಂದುಳಿದ ತಾಲೂಕುಗಳಲ್ಲಿ ರಾಜಕೀಯ ರೆಕ್ಕೆ
ತುಮಕೂರು: ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕಾದ ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡಲ್ಲಿ ತುರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ.
ಶಿರಾದಿಂದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ಹಾಗೂ ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಕಣದಲ್ಲಿ ಇರುವುದರಿಂದ ಈ ಕ್ಷೇತ್ರ ರಾಜ್ಯದ ಗಮನಸೆಳೆದಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಶಿರಾಕ್ಕೆ ಆಗಮಿಸಿ 5ನೇ ಬಾರಿಗೆ ಜಯಗಳಿಸಿರುವ ಜಯಚಂದ್ರ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಇವರಿಗೆ ಪ್ರತಿ ಸ್ಪರ್ಧಿಯಾಗಿ ಜೆಡಿಎಸ್ನ ಬಿ. ಸತ್ಯನಾರಾಯಣ್ ಕಣದಲ್ಲಿದ್ದಾರೆ.
ಈ ಕ್ಷೇತ್ರದಲ್ಲಿ ಇವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜಯಚಂದ್ರ ಅವರು ಕ್ಷೇತ್ರಕ್ಕೆ ನೀರನ್ನು ನೀಡಿರುವುದರಿಂದ ನೀರನ್ನು ಬಂಡವಾಳ ಮಾಡಿಕೊಂಡು ಮತ ಕೇಳುತ್ತಿದ್ದಾರೆ.
ಇನ್ನು ಬಿ. ಸತ್ಯನಾರಾಯಣ್ ಕಳೆದ ಸಲ ಸೋತಿರುವುದರಿಂದ ಅನುಕಂಪದ ಆಧಾರದ ಮೇಲೆ ಮತ ಕೇಳಲಿದ್ದಾರೆ.
ಹಣಾಹಣಿ: ಇನ್ನು ಅತ್ಯಂತ ಕುತೂಹಲ ಕೆರಳಿಸಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹಣಾಹಣಿ ಏರ್ಪಡಲಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಳೆದ ವಿಧಾನಸಭಾ ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ ಮೀಸಲು ಕ್ಷೇತ್ರವಾಗಿತ್ತು. ಕಳೆದ ಬಾರಿ ಈ ಕ್ಷೇತ್ರದಿಂದ ಡಾ. ಜಿ. ಪರಮೇಶ್ವರ್ ಆಯ್ಕೆಯಾಗಿದ್ದರು.
ಈಗ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಸಹಜವಾಗಿ ಇದೊಂದು ಪ್ರತಿಷ್ಠೆಯ ಕಣವಾಗಿದೆ. ಇವರ ಎದುರಾಳಿಯಾಗಿ ಜೆಡಿಎಸ್ನಿಂದ ಸುಧಾಕರ್ ಲಾಲ್ ಕಣದಲ್ಲಿದ್ದಾರೆ. ಸುಧಾಕರ್ ಲಾಲ್ ಹಾಲಿ ಜಿ.ಪಂ. ಸದಸ್ಯರೂ ಆಗಿದ್ದು ಕಳೆದ 3 ಅವಧಿಯಿಂದ ಜಿ.ಪಂ. ಸದಸ್ಯರಾಗಿರುವುದು ಹೆಗ್ಗಳಿಕೆ. ಉಳಿದಂತೆ ಕೆಜೆಪಿಯಿಂದ ವಾಲೆಚಂದ್ರು ಹಾಗೂ ಬಿಜೆಪಿಯಿಂದ ಪೆದ್ದರಾಜು ಕಣದಲ್ಲಿದ್ದಾರೆ. ಕಳೆದ ಸಾಲಿನಲ್ಲಿ ವಾಲೆಚಂದ್ರು ಜೆಡಿಎಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗ ಕೆಜೆಪಿಗೆ ಜಿಗಿದಿದ್ದಾರೆ. ಸದ್ಯಕ್ಕೆ ನೇರ ಹಣಾಹಣಿ ಪರಮೇಶ್ವರ್ ಮತ್ತು ಸುಧಾಕರ್ ಲಾಲ್ ನಡುವೆ ಇದೆ.
ವಿವಾದದ ಕೇಂದ್ರ ಬಿಂದು: ಇನ್ನು ಮಧುಗಿರಿ ವಿಧಾನಸಭಾ ಕ್ಷೇತ್ರವಂತೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಾದದ ಕೇಂದ್ರ ಬಿಂದುವಾಗಿತ್ತು. ಈ ಕ್ಷೇತ್ರದಿಂದ ಮಾಜಿ ಸಚಿವ ಸಿ. ಚನ್ನಿಗಪ್ಪ ಪುತ್ರ ಗೌರಿಶಂಕರ್ ಆಯ್ಕೆಯಾಗಿದ್ದರು.
ಆದರೆ ಆಪರೇಷನ್ ಕಮಲದಿಂದಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಮತ್ತೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದರು.
ಆಗ ಅವರು ಕಾಂಗ್ರೆಸ್ನ ಕೆ.ಎನ್. ರಾಜಣ್ಣ ವಿರುದ್ಧ ಜಯಶಾಲಿಯಾಗಿದ್ದರು. ಸತತ ಎರಡು ಬಾರಿ ಸೋಲನ್ನು ಅನುಭವಿಸಿರುವ ಕೆ.ಎನ್. ರಾಜಣ್ಣ ಈಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ನಿಂದ ವೀರಭದ್ರಯ್ಯ ಸ್ಪರ್ಧಿಸುತ್ತಿದ್ದಾರೆ. ಇಲ್ಲೂ ಕೂಡ ನೇರ ಹಣಾಹಣಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದೆ.
ಗಡಿ ನಾಡೆಂದು ಖ್ಯಾತಿ ಗಳಿಸಿರುವ ಪಾವಗಡದಲ್ಲೂ ಕೂಡ ಚುನಾವಣಾ ರಂಗು ಬಿರುಸಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಸಚಿವರಾಗಿ ನಂತರ ಶಾಸಕ ಸ್ಥಾನದಿಂದ ಅನೂರ್ಜಿತಗೊಂಡು ಮತ್ತೆ ಕೋರ್ಟ್ನಲ್ಲಿ ಗೆದ್ದು ಬಂದಿದ್ದ ವೆಂಕಟರಮಣಪ್ಪ ಈ ಬಾರಿ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಕಾಂಗ್ರೆಸ್ನಿಂದ ಅವರ ಪುತ್ರ ವೆಂಕಟೇಶ್ ಸ್ಪರ್ಧಿಸುತ್ತಿದ್ದಾರೆ.
ಜೆಡಿಎಸ್ನಿಂದ ತಿಮ್ಮರಾಯಪ್ಪ ಕಣದಲ್ಲಿದ್ದಾರೆ. ತಿಮ್ಮರಾಯಪ್ಪ ಅವರು ಈ ಹಿಂದೆ ಶಾಸಕರಾಗಿದ್ದರು.
ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇನ್ನು ಕೆಜೆಪಿಯಿಂದ ಪಾವಗಡ ಶ್ರೀರಾಮ್ ಸ್ಪರ್ಧಿಸುತ್ತಿದ್ದಾರೆ. ಇಲ್ಲೂ ಕೂಡ ತುರುಸಿನ ರಾಜಕೀಯ ಚಟುವಟಿಕೆ ಗರಿಗೆದರಿದೆ.
ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದೆ. ಈಗಾಗಲೇ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ನಾಲ್ಕು ಕ್ಷೇತ್ರ ಯಾವ ಪಕ್ಷಕ್ಕೆ ಮಣೆ ಹಾಕುತ್ತದೆ ಎಂಬ ಕುತೂಹಲವಷ್ಟೆ ಈಗ ಉಳಿದಿದೆ.
ಉಗಮ ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

