ತುಮಕೂರು

ಜಯಕ್ಕಾಗಿ ಜೆಡಿಎಸ್, ಕೆಜೆಪಿ ಹಗ್ಗ ಜಗ್ಗಾಟ, ತೀವ್ರ ಕಸರತ್ತು

Published On :

ಕ.ಪ್ರ.ವಾರ್ತೆ  ,   ತುರುವೇಕೆರೆ  ,   ಏ.28
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ರಂಗು ದಿನೇ ದಿನೇ ಏರುತ್ತಿದೆ.
ಎಲ್ಲಾ ಪಕ್ಷಗಳೂ  ಗೆಲವಿಗಾಗಿ ಪಣತೊಟ್ಟು ನಿಂತಿವೆ. 6 ರಾಜಕೀಯ ಪಕ್ಷಗಳು ಹಾಗೂ 6 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ತಮ್ಮ ಹಣೆಬರಹವನ್ನು ಬರೆಯಲು ಮತದಾರಿಗೆ ಬಿಟ್ಟಿದ್ದಾರೆ.
 ಗೆಲವಿನ ಲೆಕ್ಕಾಚಾರದಲ್ಲಿ ಕೆಜೆಪಿ ಹಾಗೂ ಜೆಡಿಎಸ್ ತೀವ್ರ ಹಣಾಹಣಿಯಲ್ಲಿ ತೊಡಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ  ಹರಸಾಹಸ ಮಾಡಬೇಕಿದೆ. ಸದ್ಯದ ಸ್ಥಿತಿಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನೇರ  ಸ್ಪರ್ಧೆ ಕೆಜೆಪಿ ಮತ್ತು ಜೆಡಿಎಸ್‌ಗೆ ಇದೆ.
 ಇದುವರೆಗಿನ ಇತಿಹಾಸದಲ್ಲಿ ಸತತವಾಗಿ ಎರಡನೇ ಬಾರಿಗೆ ಗೆದ್ದ ಉದಾಹಣೆ ಇಲ್ಲಿಲ್ಲ. ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ. ಈಗಾಗಲೇ ಎರಡು ಬಾರಿ ಶಾಸಕರಾಗಿ ಅನುಭವವಿರುವ ಕೃಷ್ಣಪ್ಪನವರಿಗೆ ಹೋರಾಟವೇ ಜೀವನ ಎಂಬಂತಾಗಿದೆ. ಕ್ಷೇತ್ರದಲ್ಲಿ ಹಲವಾರು ಪ್ರಗತಿಪರ ಕಾರ್ಯ ಮಾಡಿರುವ ಹೆಗ್ಗಳಿಕೆ ಇವರಿಗಿದೆ. ನ್ಯಾಯಾಲಯ ಕಟ್ಟಡ, ಪ್ರಥಮದರ್ಜೆ ಕಾಲೇಜು, ಒಳಚರಂಡಿ, ತಾಲೂಕಿನ ಹಲವಾರು ರಸ್ತೆಗಳ ಅಭಿವೃಧ್ಧಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಿದ ತೃಪ್ತಿ ಕೃಷ್ಣಪ್ಪನವರಿಗೆ ಇದೆ.
ಆದರೆ ಇವರು ಕಾರ್ಯಕರ್ತರೊಂದಿಗೆ ಹಾಗೂ ಇವರಿಗೆ ಈಗಾಗಲೇ ಮತ ನೀಡದೇ ಇರುವವರ ಬಗ್ಗೆ ಆಡುವ ಉದಾಸೀನದ ಮಾತುಗಳು, ಕಠೋರ ನುಡಿಗಳು ಹಲವಾರು ಕಾರ್ಯಕರ್ತರು ಹಾಗೂ ಮುಖಂಡರನ್ನು ಕೆರಳಿಸುವಂತೆ ಮಾಡಿದೆ. ಇದು ಅವರಿಗೆ ಮುಳುವಾದರೂ ಆಗಬಹುದು.
ಹಾದಿ ಸಗಮವಲ್ಲ: ಆದರೆ ಈಗಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಎಲ್ಲ ಹಾದಿಗಳು ಸುಗಮವಾಗಿಲ್ಲ. ಹಲವಾರು ವಿರೋಧಗಳು ಜೊತೆಜೊತೆಯಲ್ಲೇ ಸಾಗಿವೆ. ಇವರ ನೇರ ನುಡಿ ಒರಟುತನಕ್ಕೆ ಬಹಳಷ್ಟು ಜನ ತಕ್ಕ ಉತ್ತರ ನೀಡಲು ತುದಿಗಾಲಲಲ್ಲಿ ನಿಂತಿದ್ದಾರೆ.  ಕಾಂಗ್ರೆಸ್‌ನ ಅಭ್ಯರ್ಥಿಯ ಆಯ್ಕೆ ಸರಿಯಾಗದಿದ್ದರಿಂದ ಒಡೆದ ಕಾಂಗ್ರೆಸ್ ತಮ್ಮತ್ತ ಬರಲಿದೆ ಎಂಬ ಲೆಕ್ಕಾಚಾರ ಭಗ್ನವಾಗಿದೆ. ಬಹುಪಾಲು ಮಂದಿ ಕಾಂಗ್ರೆಸ್ಸಿಗರು ಕೆಜೆಪಿಗೆ ಬೆಂಬಲ ನೀಡಿದ್ದಾರೆ.
ಮುಳ್ಳು: ಇದು ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಷ್ಪ್ಪನವರಿಗೆ ಮುಳ್ಳಾಗಿ ಪರಿಣಮಿಸಿದೆ. ಕೆಜೆಪಿಯ ಅಭ್ಯರ್ಥಿಯಾಗಿರುವ ಮಸಾಲಾ ಜಯರಾಂ ಅವರಿಗೆ ರಾಜ್ಯ ಕೆಜೆಪಿ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್ ಅವರ ಬೆಂಬಲವಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದ ಎಂ.ಡಿ.ಎಲ್. ಸುಮಾರು 52 ಸಾವಿರ ಮತಗಳಿಸಿದ್ದರು. ಈಗ ಅದು ಬಿಜೆಪಿಗೂ ಒಂದಿಷ್ಟು ಹಂಚಿಕೆಯಾಗಿದೆ. ಕೆಜೆಪಿ ಅಭ್ಯರ್ಥಿಯಾಗಿರುವ ಮಸಾಲಾ ಜಯರಾಂ ಬಹುಪಾಲು ವೀರಶೈವರ ಮತವನ್ನು ಬಿಎಸ್‌ವೈ  ಅವರ ಕೃಪೆಯಿಂದ ಭದ್ರಪಡಿಸಿಕೊಂಡಿದ್ದಾರೆ.
ಎಂ.ಟಿ.ಕೃಷ್ಣಪ್ಪನವರ ಬಹುತೇಕ ವಿರೋಧಿ ಪಡೆ ಮಸಾಲಾ ಜಯರಾಂ ಪರ ಇದೆ.  ಮಸಾಲಾ ಜಯರಾಂ ಇದೇ ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.
 ಏನೇ ಆಗಲಿ ವಿಜಯಲಕ್ಷ್ಮಿ ತೂಗುಯ್ಯಾಲೆಯಲ್ಲಿದ್ದಾಳೆ. ಯಾರ ಮಡಿಲು ತುಂಬುವಳೋ ಗೊತ್ತಿಲ್ಲ. ಕೆಜೆಪಿ ಗೆಲವೋ, ಜೆಡಿಎಸ್ ಗೆಲವೋ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ಶುರುವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.