ಮಹಿಳೆಯರು ಸಂಸ್ಕೃತಿಯ ರಕ್ಷಕರಾಗಲಿ
ಕ.ಪ್ರ.ವಾರ್ತೆ , ತುಮಕೂರು , ಏ.28
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾಗಿ ತಾಯಿಗೆ ಅತ್ಯಂತ ಮಹತ್ವದ ಸ್ಥಾನ ನೀಡಿದೆ. ಅವರಿಂದ ಮಾತ್ರ ನಮ್ಮ ಭಾಷೆ, ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ. ಈ ದಿಕ್ಕಿನಲ್ಲಿ ನಮ್ಮ ಗ್ರಾಮೀಣ ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಮತ್ತು ನೈಜತೆಯನ್ನು ರೇಡಿಯೋ ಸಿದ್ಧಾರ್ಥದಂತಹ ಸಮುದಾಯ ಬಾನುಲಿಯ ಮೂಲಕ ಪ್ರದರ್ಶಿಸಲು ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ಕರೆ ನೀಡಿದರು.
ರೇಡಿಯೋ ಸಿದ್ಧಾರ್ಥ ದೆಹಲಿಯ ಕಾಮನ್ವೆಲ್ತ್ ಎಜುಕೇಷನಲ್ ಮೀಡಿಯಾ ಫಾರ್ ಏಷ್ಯ (ಸೆಮ್ಕಾ) ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹದಿನೆಂಟು ಮಂದಿ ಮಹಿಳೆಯರಿಗೆ ನೀಡಿದ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹಳ್ಳಿಯ ಅನಕ್ಷರಸ್ಥ ಮಹಿಳೆಯರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಿ ವೇದಿಕೆಯ ಮೇಲೆ ನಿಂತು ಮಾತನಾಡುವ ಮತ್ತು ರೇಡಿಯೋ ಉಪಕರಣಗಳನ್ನು ಬಳಸಿ ಮಾತನಾಡುವ ಶಕ್ತಿಯನ್ನು ಪಡೆದುಕೊಂಡಿರುವುದು ಮೆಚ್ಚುವ ಕಾರ್ಯ. ಮಹಿಳೆಯರು ಮಾತನಾಡಿದ ಧಾಟಿಯನ್ನು ಪ್ರಸ್ತಾಪಿಸಿ ಮಾತನಾಡಿದ ಸ್ವಾಮೀಜಿ ಅವರು, ನಮ್ಮ ಭಾಷೆ ಕೇವಲ ಬುದ್ಧಿವಂತಿಕೆಯ ಪ್ರದರ್ಶನವಾಗದೆ ಅದು ಸಂಸ್ಕಾರವಾಗಿ ಮೂಡಿ ಬರಬೇಕು. ಏಕೆಂದರೆ ಬುದ್ಧಿವಂತಿಕೆಯ ಭಾಷೆಗಿಂತ ಹೃದಯದ ಭಾಷೆಯಲ್ಲಿ ನೂರು ಪಟ್ಟು ವ್ಯತ್ಯಾಸವಿದೆ ಎಂದರು.
ನಿಮ್ಮ ಗ್ರಾಮೀಣ ಸಂಸ್ಕೃತಿ ಒಂದು ಕಟ್ಟಡದಂತೆ ಸುಭದ್ರ ತಳಪಾಯದಂತಿರಲಿ. ಮೂಲ ಭಾಷೆ ಮತ್ತು ಸಂಸ್ಕೃತಿಯನ್ನು ರೇಡಿಯೋದಂತಹ ಮಾಧ್ಯಮದ ಮೂಲಕ ಬೆಳೆಸಿ ಉಳಿಸಬೇಕು. ರೇಡಿಯೋ ಸಿದ್ಧಾರ್ಥ ಇಲ್ಲಿಗೆ ಆಮಂತ್ರಿಸಿ ನೀಡಿರುವ ತರಬೇತಿ ಸಮಾಜದ ಒಳಿತಿಗಾಗಿ ಸದುಪಯೋಗವಾಗಲಿ ಎಂದು ಶ್ರೀ ವೀರೇಶಾನಂದ ಸ್ವಾಮೀಜಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.
ಜ್ಞಾನ ವಿಕಾಸ ಕಾರ್ಯ: ಅಧ್ಯಕ್ಷತೆ ವಹಿಸಿದ್ದ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅವರು, ಮಹಿಳೆಯನ್ನು ಮರೆತು ಸಮಾಜ ಜೀವಂತವಾಗಿರಲಾರದು. ಈ ದಿಕ್ಕಿನಲ್ಲಿ ರೇಡಿಯೋ ಸಿದ್ಧಾರ್ಥ ಸಮಾಜದಲ್ಲಿನ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಜ್ಞಾನ ವಿಕಾಸ ಕಾರ್ಯವನ್ನು ತುಂಬಾ ಸಮರ್ಥವಾಗಿ ನಿರ್ವಹಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಿಸಿದ ಎಚ್.ಎಂ. ಗಂಗಾಧರಯ್ಯ ಅವರು ಮೂಲತಃ ಚಿತ್ರಕಲಾವಿದರಾಗಿದ್ದರು. ಹಾಗಾಗಿ ಅವರಿಗೆ ಸಮಾಜದ ಭವಿಷ್ಯದ ಚಿತ್ರಣದ ಬಗೆಗೆ ತುಂಬಾ ದೂರದೃಷ್ಟಿ ಇದ್ದ ಕಾರಣ ಅವರು ಹುಟ್ಟು ಹಾಕಿರುವ ಶಿಕ್ಷಣ ಸಂಸ್ಥೆ ಉತ್ತಮವಾಗಿ ಬೆಳೆಯುತ್ತಿದೆ. ಅವರ ಮಕ್ಕಳು ಈ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವುದೆ ರೇಡಿಯೋ ಸಿದ್ಧಾರ್ಥದಂತಹ ಸಮುದಾಯ ಮಾಧ್ಯಮ ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

