ಕೈಫಿಯತ್ತು, ಬಖೈರುಗಳ ಅಧ್ಯಯನ ಅಗತ್ಯ
ಚರಿತ್ರೆ ಪುನರ್ ನಿರ್ಮಾಣಕ್ಕೆ ಇದು ಜರೂರು, ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಡಿ.ವಿ. ಪರಮಶಿವಮೂರ್ತಿ ಅಭಿಮತ
ಕ.ಪ್ರ. ವಾರ್ತೆ ತುಮಕೂರು ಆ.1
ಕನ್ನಡ ನಾಡಿನ ದಾಖಲು ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಕೈಪಿಯತ್ತು ಮತ್ತು ಬಖೈರುಗಳು ಪ್ರಮುಖವಾದವು. ಚರಿತೆಯ ಪುನರ್ ನಿರ್ಮಾಣಕ್ಕೆ ಕೈಫಿಯತ್ತು ಮತ್ತು ಬಖೈರುಗಳ ಅಧ್ಯಯನ ಅಗತ್ಯವಾಗಿದೆ. ಸ್ಥಳೀಯ ಇತಿಹಾಸವನ್ನು ಅನಾವರಣಗೊಳಿಸುವ ಕೀಲಿ ಕೈ ಇವಾಗಿವೆ ಎಂದು ತುಮಕೂರು ವಿವಿ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ಕೈಫಿಯತ್ತು ಮತ್ತು ಬಖೈರುಗಳು ಕುರಿತ ವಿಶೇಷ ಉಪನ್ಯಾಸ ಹಾಗೂ ಸ್ನೇಹ ಸಮ್ಮೀಲನ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಉಪನ್ಯಾಸ ನೀಡಿದರು.
ಕನ್ನಡ ನಾಡಿನ ಕೈಫಿಯತ್ತು ಮತ್ತು ಬಖೈರುಗಳನ್ನು ಸಂಗ್ರಹಿಸಿದ ಪ್ರಸಿದ್ಧ ವಿದ್ವಾಂಸ ಕರ್ನಲ್ ಮೆಕೆಂಜಿ. ಇವರು 1862 ಗ್ರಂಥಗಳು, 2070 ಸ್ಥಳೀಯ ಚರಿತ್ರೆಯನ್ನೊಳಗೊಂಡ ಕೈಫಿಯತ್ತುಗಳು, 6288 ನಾಣ್ಯಗಳು, 146 ಅತ್ಯುತ್ತಮ ವಿಗ್ರಹಗಳ ಸಂಗ್ರಹಣೆ ಮಾಡಿದ ಮಹನೀಯರು.
ವಿವಿಧ ಅರ್ಥ: ಕೈಫಿಯತ್ತು ಅರಬಿಕ್ ಮತ್ತು ಫರ್ಸಿಯನ್ ಪದ. ಕೈಫಿಯತ್ತು ಎಂದರೆ ಸಮಾಚಾರ, ಹೇಳಿಕೆ , ಲಿಖಿತ ದಾಖಲೆ, ಸಂಗತಿ, ಘಟನೆಗಳ ದಾಖಲೆ ಮುಂತಾದ ಅರ್ಥಗಳಿವೆ. ಈ ಶಬ್ದ ಕನ್ನಡ ನಾಡಿಗೆ ಎರವಲಾಗಿ ಬಂದದ್ದು ವಿಜಾಪುರದ ಆದಿಲ್ ಶಾಹಿಗಳ ಕಾಲದಲ್ಲಿ. ಸ್ಥಳೀಯ ರಾಜಕೀಯ, ಸಾಮಾನ್ಯ ಜನರ ವಿವರ, ವ್ಯಾಪಾರ ಬೆಳೆ, ಸ್ಥಳೀಯ ಪುರಾಣ, ಐತಿಹ್ಯಗಳನ್ನು ಒಳಗೊಂಡ ಕೈಫಿಯತ್ತು ನಾಡಿನ ಸಾಮಾನ್ಯ ಜನರ ಚರಿತ್ರೆಯನ್ನೊಳಗೊಂಡ ಅತ್ಯುತ್ತಮ ದಾಖಲೆಗಳೆಂದು ಅಭಿಪ್ರಾಯಪಟ್ಟರು.
ಚಾರಿತ್ರಿಕ ದಾಖಲೆ: ಬಖೈರು ಖಬರ್ ಮೂಲ ಪದದಿಂದ ಬಂದ ಪದ. ಹಾಗೆಂದರೆ ಮಾಹಿತಿ ಪತ್ರ ಎಂದರ್ಥವಾಗುತ್ತದೆ. ಬಖೈರು ಸಾಹಿತ್ಯದಲ್ಲಿ ವಿಷಯದ ನಿರೂಪಣೆಯ ಜೊತೆಗೆ ಬರೆದವರ ಸಹಿ ಮತ್ತು ಮುದ್ರೆ ಕಡ್ಡಾಯವಾಗಿರುತ್ತದೆ. ಆದ್ದರಿಂದ ಇವು ಅತ್ಯಂತ ನಂಬಲರ್ಹವಾದ ಚಾರಿತ್ರಿಕ ದಾಖಲೆಗಳಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್ ಮಾತನಾಡಿ, ಪ್ರಸ್ತುತ ನಮ್ಮ ಸಾಂಸ್ಕೃತಿಕ ವಾತಾವರಣ ಮಲೀನವಾಗಿದೆ. ಇದನ್ನು
ಸರಿಪಡಿಸುತ್ತ ನಮ್ಮಲ್ಲಿಯ ಕೆಡುಕನ್ನು ಕಳೆದುಕೊಳ್ಳುತ್ತಾ ಮುನ್ನಡೆಯಬೇಕೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಬಿ. ಕರಿಯಣ್ಣರವರು ವಹಿಸಿದ್ದರು. ಕನ್ನಡ ವಿಭಾಗದ ಅಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ, ಡಾ. ಎಸ್. ಶಿವಣ್ಣ, ರೇಣುಕಾ ಎಚ್.ಆರ್. ಭಾಗವಹಿಸಿದ್ದರು. ಪೂರ್ಣಿಮ ಪ್ರಾರ್ಥಿಸಿದರು. ದಿಲ್ಷಾದ್ ಬಾನು ಸ್ವಾಗತಿಸಿದರು. ಸುಪ್ರಿಯಾ ವಂದಿಸಿದರೆ, ಸುಪ್ರೀತ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

