ಎಲ್ಲ ಮಾಯ.. ಕೆರೆ, ಬೆಟ್ಟ, ಗ್ರಾಮಗಳೂ ಹರಾಜಯ್ಯ
ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ.ವಾರ್ತೆ ತುಮಕೂರು ಆ. 2
ವಿಜ್ಞಾನಗುಡ್ಡ ಯೋಜನೆ ರೂಪುಗೊಳ್ಳಬೇಕಿರುವ ಜಾಗದಲ್ಲಿರುವ ಕೆರೆ-ಕಟ್ಟೆ, ಬೆಟ್ಟ-ಗುಡ್ಡ, 4 ಗ್ರಾಮಗಳು, ಕರಾಬು, ಹಳ್ಳ ಸೇರಿದಂತೆ ಎಲ್ಲವನ್ನೂ 1951 ರಲ್ಲಿ ದಾಖಲೆ ಸೃಷ್ಟಿಸಿ, ಹರಾಜು ಹಾಕಿರುವಂತೆ ತೋರಿಸಲಾಗಿದೆ. ಆದರೆ ಈ ದಾಖಲೆ ರಿಜಿಸ್ಟರ್ಡ್ ದಾಖಲೆಯಾಗಿರುವುದಿಲ್ಲ. ಒಂದು ಬಿಳಿ ಹಾಳೆ ಮೇಲೆ ಎಂಟಾಣೆ ಸ್ಟ್ಯಾಂಪ್ ಅಂಟಿಸಿ ಕುಟುಂಬದ ಪಾರೀಕತ್ತು ಮಾಡಿಕೊಂಡಿರುವಂತೆ ಕಂಡುಬರುತ್ತದೆ.
ಆದರೆ 1951ರ ಈ ಮೇಲಿನ ಪ್ರಸ್ತಾವಿತ ಹರಾಜು ನಡೆದ 9 ವರ್ಷಗಳ ನಂತರ ದೇಶಾದ್ಯಂತ ನಡೆದ ಮರು ಸರ್ವೆಯಲ್ಲೂ ಬೆಟ್ಟ-ಗುಡ್ಡಗಳು, ಕೆರೆ-ಕಟ್ಟೆಗಳು ಹಾಗೆಯೇ ದಾಖಲಾಗಿ ಉಳಿದಿರುವುದು ಗಮನಾರ್ಹ. ಆದರೆ 1991 ಆಗಸ್ಟ್ 17 ರಲ್ಲಿ ತಹಶೀಲ್ದಾರ್ ಮೇಲಿನ ಎಲ್ಲ ಸಾರ್ವಜನಿಕ ಸ್ವತ್ತನ್ನು ವರ್ಗಾವಣೆ ಮಾಡಲು ಟೊಂಕ ಕಟ್ಟಿ ನಿಂತಿರುವುದು, ಇದಕ್ಕೆ ಅಂದಿನ ಜಿಲ್ಲಾಧಿಕಾರಿಗಳು ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕ್ರಯಪತ್ರದ ಸಂಖ್ಯೆಯಿಲ್ಲ: ಸರ್ವೆ ನಂ 31 ರಲ್ಲಿನ 206 ಎಕರೆ 15 ಗುಂಟೆ ಹಸನಾಗದ ಸರ್ಕಾರಿ ಕರಾಬು ಎಂಬುದಾಗಿ ಸರ್ಕಾರಿ ದಾಖಲೆಗಳಲ್ಲಿ ದೃಢಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮತ್ತೂ ಸೋಜಿಗದ ಸಂಗತಿ ಏನೆಂದರೆ ಸರ್ವೆ ನಂ. 12 ಹಾಗೂ 33 ರಲ್ಲಿನ ಸರ್ಕಾರಿ ಕೆರೆ ನೀರನ್ನು ಅರ್ಜಿದಾರರೇ ಉಪಯೋಗಿಸುತ್ತಿದ್ದು, ಈ ಕೆರೆಗಳು ಕೂಡ ಕ್ರಯಕ್ಕೆ ಸೇರಿರುತ್ತದೆ ಎಂದು ಘೋಷಿಸಿದ್ದಾರೆ. ಇಡೀ ಪರಿಶೀಲನಾ ವರದಿಯಲ್ಲಿ ಎಲ್ಲಿಯೂ ಕ್ರಯಪತ್ರದ ಸಂಖ್ಯೆಯನ್ನು ವರದಿ ಮಾಡಿರುವುದಿಲ್ಲ, ದಾಖಲಿಸಿರುವುದಿಲ್ಲ.
ಕೆರೆ, ಕಟ್ಟೆ, ಗ್ರಾಮ ಹರಾಜು ಸಾಧ್ಯವಿಲ್ಲ: ಒಂದು ವೇಳೆ ಹರಾಜು ಮೂಲಕ ಅರ್ಜಿದಾರರು ಪ್ರದೇಶವನ್ನು ಪಡೆದಿದ್ದರೆ, ಯಾರಾದರೂ ಅಂತಹ ಹರಾಜು ಪ್ರಕ್ರಿಯೆಯನ್ನು ಮಾಡಿದ್ದರೂ ಅದು ಕಾನೂನು ಬಾಹಿರವಾಗಿರುತ್ತದೆ. ಬೆಟ್ಟ-ಗುಡ್ಡ, ಕೆರೆ - ಕಟ್ಟೆಗಳೆಲ್ಲವನ್ನೂ ಸೇರಿ ಹರಾಜು ಮಾಡಲು ಸಾಧ್ಯವೇ ಇಲ್ಲ. ಈ ಬಗ್ಗೆ ಹರಾಜು ದಾಖಲೆಯನ್ನು ಪರಿಶೀಲಿಸಿದರೆ ಕೆ. ವೆಂಕಟರಾಮು ಎನ್ನುವ ವ್ಯಕ್ತಿ, ಸರ್ಕಾರಿ ಕೈಗಾರಿಕಾ ಇಲಾಖೆಯಿಂದ ಸ್ಟೋನ್ ಕ್ರಷರ್ವೊಂದನ್ನು ನಡೆಸಲು ಸಾಲ ಪಡೆದಿದ್ದು, ಸರಿಯಾಗಿ ಸಾಲದ ಕಂತುಗಳ್ನು ಕಟ್ಟದೇ ಇರುವುದರಿಂದ ಸದರಿ ಹರಾಜು ಪ್ರಕ್ರಿಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ ಸಾಲದ ಕಂತು ತೀರಿಸದೆ ಇದ್ದಾಗ, ಸದರಿ ವ್ಯಕ್ತಿಯ ಕ್ರಷರ್ ಯಂತ್ರೋಪಕರಣಗಳನ್ನು ಮತ್ತು ಕ್ರಷರ್ ನಡೆಸುವ ಜಾಗವನ್ನು ಒಂದು ವೇಳೆ ಅರ್ಜಿದಾರರು ಒಡೆತನವನ್ನು ಹೊಂದಿದ್ದರೆ ಹರಾಜು ಹಾಕುವುದು ಸ್ವಾಭಾವಿಕ. ಆದರೆ ಈ ಪ್ರಕರಣದಲ್ಲಿ 4 ಗ್ರಾಮಗಳನ್ನು ಮತ್ತು ಅದರಲ್ಲಿ ಬರುವ ಕೆರೆಗಳನ್ನು ಹಾಗೂ ಬೆಟ್ಟ-ಗುಡ್ಡ, ಗೋಮಾಳವನ್ನು ಹರಾಜು ಹಾಕಿರುವಂತೆ ತೋರಿಸುತ್ತಾ, ದಾಖಲೆಗಳನ್ನು ಸೃಷ್ಟಿಸಿರುತ್ತಾರೆ. ಈ ಸದರಿ ಹರಾಜು ನವೆಂಬರ್ 1, 1951 ರಲ್ಲಿ ನಡೆದಿರುವಂತೆ ತೋರಿಸುತ್ತಾರೆ. ಈ ದಾಖಲೆ ರಿಜಿಸ್ಟರ್ಡ್ ದಾಖಲೆಯಾಗಿರುವುದಿಲ್ಲ.
ದಾಖಲೆಗಳಿರಬೇಕಿತ್ತು: ಒಂದು ವೇಳೆ ಸಾಲಕ್ಕಾಗಿ 4 ಗ್ರಾಮಗಳೂ ಹರಾಜಾಗಿದ್ದರೆ, ಹರಾಜಿನಲ್ಲಿ ಪಡೆದ ವ್ಯಕ್ತಿಯ ಹೆಸರಿನಲ್ಲಿ ದಾಖಲೆಗಳು ಲಭ್ಯವಿರಬೇಕಿತ್ತು. ರೆಕಾರ್ಡ್ಸ್ ಆಫ್ ರೈಟ್ಸ್ ಪುಸ್ತಕ ಇರಬೇಕಿತ್ತು. ರಾಜ್ಯ ಸರ್ಕಾರದ ಅನುಮತಿ ಇರಬೇಕಿತ್ತು. ತೆರಿಗೆ ಪಾವತಿಸಿದ ದಾಖಲೆಗಳಿರಬೇಕಿತ್ತು. ಆಶ್ಚರ್ಯವೆಂದರೆ ಯಾವೊಂದು ದಾಖಲೆಗಳೂ ಇರುವುದಿಲ್ಲ. ಇದು ಕ್ರಯಕ್ಕೆ ಕೊಂಡ ಭೂಮಿಯೋ, ಅಥವಾ ಹರಾಜಿನಲ್ಲಿ ಪಡೆದ ಭೂಮಿಯೋ, ಯಾವುದೂ ದೃಢಪಡುವುದಿಲ್ಲ.
ಬೆಟ್ಟ, ಬೆಟ್ಟವೇ, ಕೆರೆ, ಕೆರೆಯೇ: ಪ್ರಸ್ತಾವಿತ 1951 ರ ಹರಾಜು ನಂತರ 9 ವರ್ಷಗಳ ಬಳಿಕ ಇಡೀ ದೇಶಾದ್ಯಂತ ನಡೆಸಿದ ಮರು ಸರ್ವೆ ದಾಖಲೆಗಳ ಪ್ರಕಾರ ಸರ್ವೆ ನಂ. 31 ರ 206 ಎಕರೆ 16 ಗುಂಟೆ ಪ್ರದೇಶ ಹಸನಾಗದಂತಹ ಸರ್ಕಾರಿ ಖರಾಬು ಪ್ರದೇಶ ಮತ್ತು ಸರ್ವೆ ನಂ. 12 ರಲ್ಲಿನ 8 ಎಕರೆ 20 ಗುಂಟೆ ಸರ್ಕಾರಿ ಕೆರೆ, ಸರ್ವೆ ನಂ. 31 ರ 8 ಎಕರೆ 4 ಗುಂಟೆ ಸಹ ಸರ್ಕಾರಿ ಕೆರೆ, ಸರ್ವೆ ನಂ. 39 ರ 27 ಎಕರೆ 36 ಗುಂಟೆ ಗೋಮಾಳ, ಮತ್ತು ಸರ್ವೆ ನಂ. 38 ರ 77 ಎಕರೆ 37 ಗುಂಟೆ ಸರ್ಕಾರಿ ಕೆರೆಯಾಗಿಯೇ ಇಂದೂ ಉಳಿದಿದೆ. ಸದರಿ ರೀ ಸರ್ವೆಯನ್ನು ಯಾರೂ ಈವರೆವಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಆದರೆ ತಹಶೀಲ್ದಾರರೊಬ್ಬರು ಕೇವಲ ಅರ್ಜಿದಾರರು ಕೊಟ್ಟ ಅರ್ಜಿಯ ಮೇರೆಗೆ ಪಹಣಿಯ ಕಲಂ 9 ರಲ್ಲಿ ಸರ್ಕಾರಿ ಎಂಬ ಪದವನ್ನು ತೆಗೆದುಹಾಕಬೇಕೆಂದು ಆದೇಶ ಮಾಡುತ್ತಾ, ಸರ್ವೆ ನಂ. 12 ಮತ್ತು 33 ರಲ್ಲಿನ ಕೆರೆ ಪ್ರದೇಶದ ಪಹಣಿಗಳಲ್ಲೂ ಅರ್ಜಿದಾರರ ಹೆಸರನ್ನು ಸೇರಿಸುವಂತೆ ಆದೇಶ ನೀಡಿದ್ದು, ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಸರ್ವೆ ನಂ. 39 ರಲ್ಲಿನ ಸರ್ಕಾರಿ ಗೋಮಾಳ 27 ಎಕರೆ 36 ಗುಂಟೆ ಸಹ ಇನ್ನೊಬ್ಹ ವ್ಯಕ್ತಿಯ ಹೆಸರಿಗೆ ವರ್ಗಾಯಿಸಲು ಇದೇ ತಹಶೀಲ್ದಾರ್ ಎಲ್ ಅಂಡ್ ಸಿಆರ್ 79 ಬಾರ್ 91 -92, ದಿ. 23 -12-1991 ರಲ್ಲಿ ಆದೇಶ ಹೊರಡಿಸಿರುವುದು ಕಂಡು ಬರುತ್ತದೆ.
ಗಮನಿಸಬೇಕಾದ ಅಂಶ: ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದೇ ತಹಶೀಲ್ದಾರ್ 17-8-1991ರಲ್ಲಿ ಸರ್ವೆ. ನಂ 31 ರ 206 ಎಕರೆ 15 ಗುಂಟೆ ಸ್ಥಳ ಪರಿಶೀಲನೆ ಮಾಡಿರುತ್ತಾರೆ. ಈ ತಹಶೀಲ್ದಾರ್ ಗೋಮಾಳ, ಕೆರೆ ಮತ್ತು ಬೆಟ್ಟ-ಗುಡ್ಡ ಎಲ್ಲವನ್ನೂ ಭೂ ಮಾಫಿಯಾಗೆ ವರ್ಗಾವಣೆ ಮಾಡಲು ಟೊಂಕಕಟ್ಟಿ ನಿಂತಿರುವುದು ಕಂಡು ಬರುತ್ತದೆ. ಅಂದಿನ ಜಿಲ್ಲಾಧಿಕಾರಿಗಳು ಸಹ ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ವಿಚಿತ್ರವಾದ ಅಂಶಗಳು: ಸರ್ವೆ ನಂ. 12, 31, 33, 38,39 ರ 10 ವರ್ಷಗಳ ಹಿಂದಿನ ಪಹಣಿಗಳನ್ನು ತೆಗೆಸಿ ನೋಡಲಾಗಿ ಕೆಳಗಿನ ವಿಚಿತ್ರ ಅಂಶಗಳು ಗೋಚರಿಸಿವೆ. ಸರ್ವೆ ನಂ. 31ರ 206 ಎಕರೆ 15 ಗುಂಟೆ ಪ್ರದೇಶದ ಪೈಕಿ 110 ಎಕರೆ ಪ್ರದೇಶವನ್ನು ತುಮಕೂರು ವಲಯ ಅರಣ್ಯಾಧಿಕಾರಿಗಳ ವಿಭಾಗಕ್ಕೆ ವರ್ಗಾಯಿಸಿರುವಂತೆ ಕಂಡು ಬರುತ್ತದೆ. 10 ಎಕರೆ ಪ್ರದೇಶವನ್ನು ತುಮಕೂರು ಕೇಂದ್ರೀಯ ವಿದ್ಯಾಲಯಕ್ಕೆ ವರ್ಗಾಯಿಸಿರುವುದು ಕಂಡು ಬಂದಿದೆ. 50 ಎಕರೆ 31 ಗುಂಟೆ ಪ್ರದೇಶ ಸರ್ಕಾರಿ ಖರಾಬು ಕಲ್ಲು ಬೆಟ್ಟ ಎಂಬುದಾಗಿ ವರ್ಗೀಕರಿಸಿರುವುದು ಕಂಡುಬರುವುದಲ್ಲದೆ, 6 ಎಕರೆ ಪ್ರದೇಶವನ್ನು ಕಾಂಪೋಸ್ಟ್ಯಾರ್ಡ್ ನಿರ್ಮಾಣದ ಉದ್ದೇಶಕ್ಕಾಗಿ ವರ್ಗಾಯಿಸಿರುವುದು ಕಂಡು ಬರುತ್ತದೆ. ಮತ್ತು ಕೆಲವು ವ್ಯಕ್ತಿಗಳಿಗೆ ಎರಡು ಅಥವಾ 4 ಪ್ರದೇಶಗಳನ್ನು ನೀಡಿರುವುದಾಗಿ ಕಂಡು ಬರುತ್ತದೆ. ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ 1992 ಜನವರಿ 20 ರಂದು 206 ಎಕರೆ 15 ಗುಂಟೆ ಹಸನಾಗದಂತಹ ಸರ್ಕಾರಿ ಖರಾಬು ಪ್ರದೇಶವನ್ನು ಹಸನು ಮಾಡಿ ಹಂಚುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ಯಾರೊಬ್ಬರೂ ಪ್ರಶ್ನಿಸದೇ ಇರುವುದು ದುರಂತವೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

