ತಾಲೂಕು ಕಚೇರಿಗೆ ಮುತ್ತಿಗೆ; ಮುಖ್ಯ ಗೇಟ್ ಬಂದ್, ಪ್ರತಿಭಟನೆ
ಕುಣಿಗಲ್ 20ನೇ ವಾರ್ಡ್ ಭೈರಪ್ಪ ಮನೆ ರಸ್ತೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲ: ನಾಗರಿಕರ ಆರೋಪ
ಕ.ಪ್ರ.ವಾರ್ತೆ ಕುಣಿಗಲ್ ಆ.2
ಪುರಸಭೆಯ 20ನೇ ವಾರ್ಡ್ನ ಭೈರಪ್ಪ ಮನೆ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದ ನಾಗರಿಕರು, ಶುಕ್ರವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮುಖ್ಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಮುಖಂಡರಾದ ಬೈರಪ್ಪ, ಗಣೇಶ್, ರಾಮಣ್ಣ, ಸದಸ್ಯೆ ನಳಿನಾ ನೇತೃತ್ವದಲ್ಲಿ ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ 20 ನೇ ವಾರ್ಡ್ನ ಭೈರಪ್ಪ ರಸ್ತೆಯಲ್ಲಿರುವ ನೂರಾರು ನಾಗರಿಕರು ತಾಲೂಕು ಕಚೇರಿಗೆ ಆಗಮಿಸಿ, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮನವಿ ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ಸೂಚಿಸಲು ತಹಶೀಲ್ದಾರ್ ಬರುವಂತೆ ಹಲವು ಬಾರಿ ಪ್ರತಿಭಟನಾಕಾರರರು ತೆರಳಿ ಮನವಿ ಮಾಡಿದರೂ, ತಹಶೀಲ್ದಾರ್ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು.
ಬಹುಕಾಲವಾದರೂ, ತಹಶೀಲ್ದಾರ್ ಮನವಿ ಸ್ವೀಕರಿಸಲು ಆಗಮಿಸದಿರುವ ಬಗ್ಗೆ ಬೇಸರಗೊಂಡ ನಾಗರಿಕರು, ತಾಲೂಕು ಕಚೇರಿಯ ಮುಖ್ಯಗೇಟ್ ಬಂದ್ ಮಾಡಿ, ತಹಶೀಲ್ದಾರ್ ಕಾರ್ಯ ವೈಖರಿಯನ್ನು ಖಂಡಿಸಿ, ತಹಶೀಲ್ದಾರ್ ವಿರುದ್ದ ಘೋಷಣೆ ತೀವ್ರಗೊಳಿಸಿದರು.
ಇದರಿಂದಾಗಿ ತಾಲೂಕು ಕಚೇರಿಗೆ ಸಾರ್ವಜನಿಕರು ಹೋಗಿಬರಲು ತೊಂದರೆಯಾಗಿ ಪರದಾಡುವಂತಾಯಿತು. ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು, ಪಿಎಸೈ ಗುರುಪ್ರಸಾದ್, ಸಿಬ್ಬಂದಿ ಆಗಮಿಸಿ, ಮುಖ್ಯಗೇಟ್ ತೆಗಿಸಿ, ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಿದರು.
ಮುಕ್ಕಾಲು ತಾಸಿನ ನಂತರ, ಕೊಠಡಿಯಿಂದ ಹೊರಬಂದ ತಹಶೀಲ್ದಾರ್ ಜಗದೀಶ್ರೊಡನೆ ಪ್ರತಿಭಟನಾಕಾರರು ತೀವ್ರ ಮಾತಿನ ಚಕಮಕಿ ನಡೆಸಿದರಲ್ಲದೆ, ಕಳೆದೊಂದು ವಾರದಿಂದಲೂ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ನೂರಾರು ಮನೆಯವರು ಒಡಾಡುವ ರಸ್ತೆ ತನ್ನದೆಂದು ಮನೆ ನಿರ್ಮಿಸಲು ಪಾಯ ಹಾಕಿದ್ದಾನೆ. ತಾಲೂಕು ಆಡಳಿತ, ಪುರಸಭಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಜಗದೀಶ್, ಸದರಿ ಸಮಸ್ಯೆ ಕಳೆದೆರಡು ದಶಕಗಳಿಂದಸ ಇದ್ದು, ಸಾರ್ವಜನಿಕರು ಬಳಸುವ ರಸ್ತೆಯ ಜಾಗ ಮಾಲಿಕತ್ವದ ಬಗ್ಗೆ ಸೂಕ್ತ ಚರ್ಚೆ ನಡೆಸಿ ತೀರ್ಮಾನಿಸಬೇಕಿದೆ, ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಎರಡೂ ಬದಿಯವರೊಂದಿಗೆ ಚರ್ಚಿಸಿ, ರಸ್ತೆಸಮಸ್ಯೆಗೆ ಸೂಕ್ತಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ಪ್ರಮುಖರಾದ ಗೌರಮ್ಮ, ಲಕ್ಷ್ಮಮ್ಮ, ಸುಶೀಲಮ್ಮ, ಕಮಲಮ್ಮ, ರಾಮಣ್ಣ, ಕೃಷ್ಣಪ್ಪ, ಸುರೇಶ್ ಇತರರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗ ಮೊರೆ: ಮಧ್ಯಾಹ್ನ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಪೂರ್ವಭಾವಿ ಸಭೆಗೆ ಜಿಲ್ಲಾಧಿಕಾರಿಗಳು ಆಗಮಿಸುವ ಸುದ್ದಿ ತಿಳಿದ ನಾಗರೀಕರು, ಸದಸ್ಯೆ ನಳಿನಾ ನೇತೃತ್ವದಲ್ಲಿ ಪಟ್ಟಣದ ಖಾಸಗಿ ಸಮುದಾಯ ಭವನದ ಮುಂದೆ ಕಾದು, ಜಿಲ್ಲಾಧಿಕಾರಿಗಳು ಸಭೆಗೆ ಆಗಮಿಸಿದಾಗ, ತಮ್ಮ ಅಹವಾಲನ್ನು ಮುಂದಿಟ್ಟರು. ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೆ ತಹಶೀಲ್ದಾರ್ ಜಗದೀಶ್ರವರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

