ದಿನಗೂಲಿ ಜಲಗಾರರ ವಜಾ: ನಗರಸಭೆಯಲ್ಲಿ ಗದ್ದಲ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಆ.5
20 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ 25 ಮಂದಿ ಜಲಗಾರರನ್ನು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಿದ ವಿಚಾರವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಚರ್ಚಿಸಲು ಪೌರಾಯುಕ್ತ ರುದ್ರಮುನಿ ನೇತೃತ್ವದಲ್ಲಿ ಸೋಮವಾರ ನಗರಸಭೆ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ದೊಡ್ಡ ಗದ್ದಲವೇ ನಡೆಯಿತು.
ಇತ್ತೀಚೆಗೆ ಕೆಲಸದಿಂದ ಕಿತ್ತು ಹಾಕಿದ ಕಾರಣ ಜಲಗಾರರು ನಗರಸಭೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, 3 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕನಿಷ್ಠ ವೇತನ ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರಿಂದ ಸೋಮವಾರ ನಗರಸಭೆಯಲ್ಲಿ ಜಲಗಾರರು ಮತ್ತು ಸದಸ್ಯರನ್ನೊಳಗೊಂಡ ಸಭೆಯನ್ನು ಕರೆಯಲಾಗಿತ್ತು.
ಒಂದು ಕಡೆ ಸಭೆಯಲ್ಲಿ ನಗರಸಭಾ ಸದಸ್ಯರು ನಗರದಲ್ಲಿ ತಾಂಡವ ಆಡುತ್ತಿರುವ ಸಮಸ್ಯೆಗಳನ್ನು, ಜಲಗಾರರನ್ನು ಸೇವೆಯಿಂದ ಮುಕ್ತಿಗೊಳಿಸಿರುವ ವಿಷಯ ಪ್ರಸ್ತಾಪಿಸಿ ಪೌರಾಯುಕ್ತರ ವಿರುದ್ಧ ತಿರುಗಿ ಬಿದ್ದು ತರಾಟೆಗೆ ತೆಗೆದುಕೊಂಡರೆ, ಮತ್ತೊಂದೆಡೆ ಇಷ್ಟು ವರ್ಷ ಕಾಲ ಚೆನ್ನಾಗಿ ದುಡಿಸಿಕೊಂಡು ಇದೀಗ ನಮ್ಮನ್ನು ಬೀದಿಪಾಲು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ ಜಲಗಾರರು, ಯಥಾಸ್ಥಿತಿಯಲ್ಲಿ ನಮ್ಮನ್ನು ಕೆಲಸದಲ್ಲಿ ಮುಂದುವರಿಸದಿದ್ದರೆ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ನಗರಸಭೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು.
ಪೌರಾಯುಕ್ತರು ಮಾತ್ರ, ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಜಲಗಾರರನ್ನು ಕಾನೂನು ಪ್ರಕಾರವಾಗಿಯೇ ಸೇವೆಯಿಂದ ಮುಕ್ತಿಗೊಳಿಸಲಾಗಿದೆ. ಇದರಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಮಾಡಿದರು. ಆದರೆ, ಸದಸ್ಯರು ಮತ್ತು ಜಲಗಾರರು ಮಾತ್ರ ತಮ್ಮ ಪಟ್ಟು ಬಿಡಲಿಲ್ಲ. ಈ ಹಿನ್ನೆಲೆಯಲ್ಲಿ ಪೌರಾಯುಕ್ತರು ಯೋಜನಾ ನಿರ್ದೇಶಕರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಗೆ ಕರೆಸಿಕೊಂಡು ನೇರವಾಗಿ ಅವರ ಬಳಿಯೇ ಜಲಗಾರರು ಮತ್ತು ಸದಸ್ಯರು ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಮಾಡಿದರು.
ಅಧಿಕಾರಿಗಳಿಗೆ ಮುತ್ತಿಗೆ: ಸಭೆಗೆ ಬಂದ ಯೋಜನಾ ನಿರ್ದೇಶಕ ನಾಗರಾಜ್ ಶೆಟ್ಟಿ ಸಹ ಸದಸ್ಯರ ಮನವೊಲಿಕೆಗೆ ಬಗ್ಗಲಿಲ್ಲ. ಬದಲಿಗೆ ಕಾನೂನು ವಿರುದ್ಧವಾಗಿ ಕೆಲಸ ಮಾಡಲಾಗುವುದಿಲ್ಲ. ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಇಟ್ಟುಕೊಂಡಿದ್ದ ಜಲಗಾರರನ್ನು ಈ ಹಿಂದೆಯೇ ಸೇವೆಯಿಂದ ಬಿಡುಗಡೆಗೊಳಿಸಬೇಕಾಗಿತ್ತು. ಈ ಕಾರಣದಿಂದ ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸದಸ್ಯರು ಪ್ರತಿಕ್ರಿಯಿಸಿ, ನಗರಸಭೆ ಕಾರ್ಯಾಲಯದಲ್ಲಿ 2006ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 1996 ರಿಂದ ಕಾರ್ಯನಿರ್ವಹಿಸುತ್ತಿರುವ ಜಲಗಾರರಿಗೆ ಕನಿಷ್ಠ ವೇತನ ನೀಡಿ ಕೆಲಸದಲ್ಲಿ ಮುಂದುವರಿಸುವ ತೀರ್ಮಾನಕ್ಕೆ ಕೌನ್ಸಿಲ್ ಅನುಮೋದನೆ ನೀಡಿದೆ. ಆದರೆ, ಪೌರಾಯುಕ್ತರು ತಪ್ಪು ಮಾಹಿತಿಯನ್ನು ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಈಗ ಏಕಾಏಕಿ ಜಲಗಾರರನ್ನು ಸೇವೆಯಿಂದ ಮುಕ್ತಿಗೊಳಿಸಿದರೆ ಅವರು ಹೇಗೆ ಜೀವನ ನಡೆಸಬೇಕು. ಮಾನವೀಯ ದೃಷ್ಟಿಯಿಂದ ಈಗ ಅವರ ಸೇವೆ ಮುಂದುವರಿಸಿ ಮುಂದೆ ಸಭೆ ನಡೆಸಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಗ, ಇದು ಆಗದ ಮಾತು. ನೀವೇನಾದರೂ ಮಾಡಿಕೊಳ್ಳಿ ಎಂದು ಯೋಜನಾ ನಿರ್ದೇಶಕರು ಮತ್ತು ಪೌರಾಯುಕ್ತರು ಸಭೆಯಿಂದ ಹೊರ ನಡೆಯಲು ಮುಂದಾದರು. ಆಗ ತಕ್ಷಣ ಅಡ್ಡಲಾಗಿ ನಿಂತ ಕೆಲ ಸದಸ್ಯರು ಮತ್ತು ಜಲಗಾರರು ನಗರಸಭಾ ಕಚೇರಿಯ ಬಾಗಿಲುಗಳನ್ನು ಬಂದ್ ಮಾಡಿ ಅವರಿಗೆ ಹೊರ ಹೋಗಲು ಬಿಡಲಿಲ್ಲ. ಸಭೆಯಿಂದ ಎದ್ದು ಹೋಗಲು ನಾವು ಬಿಡುವುದಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಹೇಳಿ ಎಂದು ಗುಂಪು ಗುಂಪಾಗಿ ಮುತ್ತಿಗೆ ಹಾಕಿದರು. ಇದರಿಂದ ಕೆರಳಿದ ಅಧಿಕಾರಿಗಳು, ನಮ್ಮನ್ನು ಹೀಗೆ ಕೂಡಿ ಹಾಕಿದರೆ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದಾಗ ಸದಸ್ಯರು ಸಮಾಧಾನಪಡಿಸಿ ಸಾವಾಧಾನವಾಗಿ ಸಭೆಯಲ್ಲಿ ಚರ್ಚಿಸುವಂತೆ ಮನವಿ ಮಾಡಿದರು.
ಡಿಸಿ ಸಹಿ ಫೋರ್ಜರಿ: ನಗರಸಭಾ ಸದಸ್ಯರ ವಿರುದ್ಧ ಕಿಡಿಕಾರಿದ ಯೋಜನಾ ನಿರ್ದೇಶಕರು, ಕೌನ್ಸಿಲ್ನಲ್ಲಿ ಮನಸ್ಸಿಗೆ ಬಂದಂತೆ ತೆಗೆದುಕೊಂಡ ಎಲ್ಲಾ ತೀರ್ಮಾನಗಳನ್ನು ಒಪ್ಪಲು ಸಾಧ್ಯವಿಲ್ಲ. ಏನೇ ಆಗಲಿ ನಿಯಮಾನುಸಾರವಿದ್ದಾಗ ಮಾತ್ರ ತೀರ್ಮಾನಗಳು ಅಂತಿಮವಾಗಿ ಕಾರ್ಯರೂಪಕ್ಕೆ ಬರುತ್ತದೆ. ಒಂದು ವೇಳೆ ನಿಯಮಾನುಸಾರ ಇಲ್ಲದಿದ್ದಾಗ ತಿರಸ್ಕರಿಸಬಹುದು ಅಥವಾ ತಿದ್ದುಪಡಿಗೆ ಸೂಚಿಸಬಹುದು. ಇಲ್ಲಿಯವರೆಗೂ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಜಲಗಾರರನ್ನು ಮುಂದುವರಿಸಿಕೊಂಡು ತಪ್ಪು ಮಾಡಲಾಗಿದೆ. ಇದನ್ನು ಹೀಗೆ ಮುಂದುವರಿಸಬೇಕಾ. ಅಲ್ಲದೇ, ಹಿಂದೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೆ ಠರಾವು ಪುಸ್ತಕದಲ್ಲಿ ನಮೋದಿಸಲಾಗಿಲ್ಲ. ಅದಕ್ಕೆ ಸಂಖ್ಯೆ ಇಲ್ಲ,ಅದು ಕ್ರಮಬದ್ಧವಾಗಿಯೂ ಇಲ್ಲ. ಇದರ ಜತೆಗೆ ಕಡತದಲ್ಲಿ ಕೆಲ ತೀರ್ಮಾನಕ್ಕೆ ಹಾಕಿರುವ ಡಿಸಿ ಸಹಿಯೂ ಫೋರ್ಜರಿ ಎಂಬ ಆರೋಪ ಕೇಳಿಬಂದಿದೆ. ಸಂಬಂಧಪಟ್ಟವರಿಂದ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೊನೆಗೆ ಹಿರಿಯ ಸದಸ್ಯ ಎಸ್.ಎಂ. ರಫೀಕ್ ಮೊಬೈಲ್ ಮೂಲಕ ಶಾಸಕ ಸುಧಾಕರ್ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ಗಮನಕ್ಕೆ ತಂದರು. ನಂತರ ಪ್ರಸ್ತುತ ತಾತ್ಕಾಲಿಕವಾಗಿ ದಿನಗೂಲಿ ಜಲಗಾರರನ್ನು ಯಥಾ ರೀತಿ ಸೇವೆಯಲ್ಲಿ ಮುಂದುವರಿಸಿಕೊಂಡು ಹೋಗುವುದು.ಮುಂದಿನ ಸಭೆಯಲ್ಲಿ ಚರ್ಚಿಸಿ ನಂತರ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

