ಕಳಪೆ ಗೊಬ್ಬರ ಮಾರಾಟ: ಪ್ರತಿಭಟನೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಆ.5
ಕಳಪೆ ಗುಣಮಟ್ಟದ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಬಳಿ ಇರುವ ಗ್ರೋವರ್ ಗೊಬ್ಬರದ ಅಂಗಡಿಯ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಪ್ರಸ್ತುತ ದಿನಗಳಲ್ಲಿ ಮಳೆ ಬೀಳುತ್ತಿರುವುದರಿಂದ ಬಿತ್ತನೆ ಕಾರ್ಯ ಕೈಗೊಂಡಿರುವ ರೈತರು ದುಬಾರಿ ಬೆಲೆಯಾದರೂ ಸಹ ಸಾಲ ಮಾಡಿ ರಸಗೊಬ್ಬರಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ನಡುವೆ ರೈತರನ್ನು ವಂಚಿಸುವ ಕೆಲಸವಾಗುತ್ತಿದೆ. ಇಷ್ಟಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಕಳಪೆ ಗುಣಮಟ್ಟದ ರಸಗೊಬ್ಬರ ಮೂಟೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಗರದಲ್ಲಿರುವ ಗ್ರೋವರ್ ಗೊಬ್ಬರದ ಅಂಗಡಿಯಲ್ಲಿ ಕೋರಮಂಡಲ ಕಂಪನಿಯ ಸಾವಯವ ಗೊಬ್ಬರವನ್ನು ರೈತರು ಕೊಂಡು ಹೋಗಿ ತಮ್ಮ ಕೃಷಿ ಜಮೀನುಗಳಿಗೆ ಹಾಕಲು ಮುಂದಾದಾಗ ಗೊಬ್ಬರ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬಂದಿದೆ. ಗೊಬ್ಬರ ಮಾರಾಟಗಾರರು ಗೊಬ್ಬರ ಮೂಟೆಗಳಲ್ಲಿ ಹೆಚ್ಚಿಗೆ ಮರಳನ್ನು ಬೆರೆಸಿದ್ದಾರೆ. ಈ ಮೂಲಕ ಹೆಚ್ಚು ತೂಕ ಬರುವಂತೆ ಮಾಡಿ ಕಳಪೆ ಗುಣಮಟ್ಟದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಳಪೆ ಗುಣಮಟ್ಟದ ಗೊಬ್ಬರವನ್ನು ಮಾರಾಟ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಹಿತಿ ತಿಳಿದು ಘಟನೆ ಸ್ಥಳಕ್ಕೆ ಆಗಮಿಸಿದ ಕೃಷಿ ಅಧಿಕಾರಿ ವಿಜಯನರಸಿಂಹ, ಲೋಪ ಕಂಡ ಬಂದಿರುವ ಗೊಬ್ಬರದ ಮೂಟೆಗಳನ್ನು ಪರಿಶೀಲಿಸಲಾಗುವುದು. ಕಳಪೆ ಗುಣಮಟ್ಟದ ಗೊಬ್ಬರ ಎಂದು ತಿಳಿದು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಾವಯವ ಗೊಬ್ಬರದಲ್ಲಿ ಯಾವುದೇ ದೋಷವಿಲ್ಲ. ಗೊಬ್ಬರದ ಮೂಟೆ ನೆನೆದು ಹೋಗಿರುವ ಹಿನ್ನೆಲೆಯಲ್ಲಿ ಗೊಬ್ಬರ ಗಟ್ಟಿಯಾಗಿದೆ. ಬೇಕಾದರೆ ಗೊಬ್ಬರದ ಗುಣಮಟ್ಟವನ್ನು ಪರಿಶೀಲನೆ ನಡೆಸಲಿ, ನಮ್ಮ ಅಭ್ಯಂತರವಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

