ಮದಲೂರು ಕೆರೆ ಯೋಜನೆ ಕಾಮಗಾರಿ ಬಹುತೇಕ ಪೂರ್ಣ
ಕ.ಪ್ರ.ವಾರ್ತೆ ಶಿರಾ ಆ. 6
ತಾಲೂಕಿನ ಮದಲೂರು ಕೆರೆ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೇವಲ 3 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಕಳ್ಳಂಬೆಳ್ಳ ಹೋಬಳಿಯ ಮಾಯಸಂದ್ರ ಭಾಗದ ರೈತರು ಮಾನವೀಯತೆಯ ದೃಷ್ಟಿಯಿಂದ ಸದರಿ ಕಾಮಗಾರಿಗೆ ಸಹಕರಿಸುವಂತೆ ತಾಲೂಕು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ ತಿಳಿಸಿದರು.
ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ನ ಅವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಶಿರಾ ತಾಲೂಕು ಬರಗಾಲಕ್ಕೆ ತುತ್ತಾಗಿದೆ. ಮಳೆ-ಬೆಳೆಯಾಗದೆ ರೈತರು ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಮದಲೂರು ಕೆರೆಗೆ ಹೇಮಾವತಿ ನೀರನ್ನು ಬರಮಾಡಿಕೊಂಡರೆ ಶಿರಾ ಸೇರಿದಂತೆ ಸಮೀಪದ ತಾಲೂಕುಗಳೂ ಕೂಡ ಅಂತರ್ಜಲವನ್ನು ವೃದ್ಧಿಸಿಕೊಳ್ಳಲಿವೆ. ನಮ್ಮ ತಾಲೂಕಿನ ಗೌಡಗೆರೆ, ಹುಲಿಕುಂಟೆ, ಸೇರಿದಂತೆ ಅನೇಕ ಹೋಬಳಿಗಳ ರೈತರು ನೆಮ್ಮದಿಯ ಜೀವನ ಸಾಗಿಸುವಂತಾಗುತ್ತದೆ ಎಂದು ಅವರು ತಿಳಿಸಿದರು.
ಚಾಲನೆ: ಡಿಸೆಂಬರ್ 15, 2011 ರಂದು ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಮದಲೂರು ಕೆರೆ ಯೋಜನೆಗೆ ಚಾಲನೆ ನೀಡಿದರು. ಈ ನಿಟ್ಟಿನಲ್ಲಿ ಚಾನಲ್ ಕಾಮಗಾರಿ ಕೈಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆ ನಡೆದು ಮೊದಲ ಹಂತದಲ್ಲಿ 183 ಎಕರೆ ಹಾಗೂ 2ನೇ ಹಂತದಲ್ಲಿ 102 ಎಕರೆ ರೈತರ ಜಮೀನನ್ನು ಕಾಮಗಾರಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿತು. ಸರ್ಕಾರ ಸ್ವಾಧೀನಪಡಿಸಿಕೊಂಡ ತಮ್ಮ ಜಮೀನುಗಳಿಗೆ ಒಂದಕ್ಕೆ ಮೂರರಷ್ಟು ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಆದರೆ ಈಗ ಸರ್ಕಾರ ಒಂದಕ್ಕೆ ನಾಲ್ಕರಷ್ಟು ಮತ್ತು ಹಲವು ಜಮೀನುಗಳಿಗೆ ಮೌಲ್ಯಕ್ಕೆ ತಕ್ಕಂತೆ ನಾಲ್ಕು ಪಟ್ಟಿಗೂ ಹೆಚ್ಚು ಪರಿಹಾರ ನೀಡಲು ಗ್ರಾಮಾವಾರು ಅಂದಾಜು ಮೊತ್ತವನ್ನು ನಿಗದಿಗೊಳಿಸಿ ಆದೇಶ ನೀಡಿದ್ದು ಈ ಸಂಬಂಧ ರೈತರು ಉಳಿದ ಕಾಮಗಾರಿ ನಡೆಯಲು ಅವಕಾಶ ನೀಡುವಂತೆ ರಾಮಕೃಷ್ಣ ಮನವಿ ಮಾಡಿದರು.
ಯಶಸ್ವಿನಿ: ಇದೇ ಸಂದರ್ಭದಲ್ಲಿ ತಾಲೂಕಿನ ಪ.ಜಾತಿ, ಪ.ಪಂಗಡದ ಜನಾಂಗದವರಿಗೆ ಉಚಿತವಾಗಿ ಯಶಸ್ವಿನಿ ಕಾರ್ಡುಗಳನ್ನು ಮಾಡಿಕೊಡಲಾಗುವುದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

