ಪತ್ನಿಗೆ ಬೆಂಕಿ ಹಚ್ಚಿ ಪರಾರಿಯಾದ ಪತಿ
ಕುಣಿಗಲ್: ಕ್ಷುಲಕ ಕಾರಣಕ್ಕೆ ಪತ್ನಿಗೆ ಬೆಂಕಿ ಹಚ್ಚಿ, ಪತಿ ಪರಾರಿಯಾಗಿರುವ ಘಟನೆ ತಾಲೂಕಿನ ಸಂತೇಮಾವತ್ತೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೇಮಾವತ್ತೂರಿನ ನರಸಮ್ಮ (38ವರ್ಷ) ಎಂಬಾಕೆ ಪತಿಯ ದೌರ್ಜನ್ಯಕ್ಕೆ ಒಳಗಾದ ನತದೃಷ್ಟೆಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು,ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇವರಿಗೆ ಮದುವೆಯಾಗಿ ಹದಿನಾರು ವರ್ಷ ಕಳೆದಿದ್ದು, ಕೆಲ ದಿನಗಳಿಂದ ಪತಿ ಶಂಕರಯ್ಯ, ಪತ್ನಿಯ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ 7ರಂದು ಪತ್ನಿ ಸರಿಯಾಗಿ ಅಡುಗೆ ಮಾಡಲ್ಲವೆಂಬ ಕಾರಣಕ್ಕೆ ಜಗಳ ನಡೆದು, ಪತ್ನಿ ಮನೆಯಲ್ಲಿ ಕೆಲಸ ಮಾಡುವ ವೇಳೆ ಶಂಕರಯ್ಯ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ನರಸಮ್ಮಳ ಚೀರಾಟ ಕೇಳಿದ ನೆರೆಹೊರೆಯವರು ಆಕೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಸಾವು- ಬದುಕಿನೊಡನೆ ಹೋರಾಟ ಮಾಡುತ್ತಿರುವ ನರಸಮ್ಮಳ ವಿಷಯ ತಿಳಿದ ಹುಲಿಯೂರುದುರ್ಗ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ದೂರು ನೀಡಲು ಮುಂದೆ ಬಾರದ ಕಾರಣ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರಸಮ್ಮಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ನರಸಮ್ಮಳಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದಾರೆ.
ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಗುಬ್ಬಿ: ಅಗ್ನಿವಂಶ ಕ್ಷತಿಯ(ತಿಗಳ)ವಿದ್ಯಾಭಿವೃದ್ಧಿ ಸಂಘದಿಂದ ಸಂಘದ ಸರ್ವಸದಸ್ಯರ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಆಗಸ್ಟ್ 11ರಂದು ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಿ.ಬಿ.ಮಲ್ಲಣ್ಣ ಹಾಗೂ ಖಜಾಂಚಿ ಜಿ.ಗೋವಿಂದಯ್ಯ ತಿಳಿಸಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದರು.
ಇಂದು ಉದ್ಘಾಟನೆ
ತುಮಕೂರು: ಆ. 11 ರಂದು ಬೆಳಗ್ಗೆ 10-30 ಕ್ಕೆ ತುಮಕೂರು ಗ್ರಾಮಾಂತರದ ಗೂಳೂರು ಹೋಬಳಿಯ ಬೈಚಾಪುರದಲ್ಲಿ ಛಲವಾದಿ ಮಹಾಸಭಾ ಗ್ರಾಮಶಾಖೆ ಉದ್ಘಾಟನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 122 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಶಿವರಾಮ್ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಹಾಗೂ ನೆಲಮಂಗಲ ಶಾಸಕ ಡಾ. ಶ್ರೀನಿವಾಸ್ ಪಾಲ್ಗೊಳ್ಳಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಛಲವಾದಿ ಮಹಾಸಭಾ ಉಪಾಧ್ಯಕ್ಷ ಕೆ. ವೀರಭದ್ರಪ್ಪ, ಪಾಲ್ಗೊಳ್ಳಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

