ಹುಚ್ಚು ನಾಯಿ ಕಡಿತಕ್ಕೆ ಹತ್ತಕ್ಕೂ ಹೆಚ್ಚು ಜನರ ಗಾಯ
ಕ.ಪ್ರ.ವಾರ್ತೆ ತುಮಕೂರು ಆ. 10
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಹುಚ್ಚು ನಾಯಿಯೊಂದು 10 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಗರದ ಬಿ.ಜಿ.ಪಾಳ್ಯ ಸರ್ಕಲ್ ಬಳಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಇದೀಗ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದೆ. ಮೊನ್ನೆಯಷ್ಟೆ ಜಾಂಬವಂತನ ಪ್ರವೇಶದಿಂದ ತಲ್ಲಣಗೊಂಡಿದ್ದ ಇಲ್ಲಿನ ಬಿ.ಜಿ.ಪಾಳ್ಯದ ನಾಗರಿಕರು ಈಗ ಬೀದಿ ನಾಯಿಗಳ ಹಾವಳಿಗೆ ಭಯ ಭೀತರಾಗಿದ್ದಾರೆ.
ಶನಿವಾರ ಮುಂಜಾನೆ ಶಾಲೆಗೆ ತೆರಳುತ್ತಿದ್ದ ಐವರು ಬಾಲಕರ ಮೇಲೆ ದಾಳಿ ನಡೆಸಿರುವ ಹುಚ್ಚು ನಾಯಿಯೊಂದು ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ. ಮಾತ್ರವಲ್ಲ ಬಿಡಿಸಲು ಬಂದವರನ್ನೂ ಕಚ್ಚುತ್ತಾ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಲು ಮುಂದಾಗಿದೆ.
ಗಾಯಗೊಂಡವರನ್ನು ಸೈಯದ್ ಇಕ್ಬಾಲ್, ಸೈಯದ್ ನಯಾಜ್, ಮಹಮದ್ ಉನ್ನಾರ್, ಕೆಂಪಮ್ಮ, ಲಕ್ಕಮ್ಮ, ಸಿದ್ಧಗಂಗಮ್ಮ ಎಂದು ಗುರುತಿಸಲಾಗಿದ್ದು ಸುಮಾರು 10 ಕ್ಕೂ ಹೆಚ್ಚು ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ಬಾರಿ ನಗರಸಭೆಗೆ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಅಂತ ಆರೋಪಿಸಿದರು.
ಹೀಗೆ ಬೀದಿನಾಯಿಗಳ ಹಾವಳಿ ತುಮಕೂರು ನಗರದಲ್ಲಿ ಹೆಚ್ಚಾಗಿದ್ದು ಹಲವರು ಗಾಯಗೊಂಡಿದ್ದಾರೆ. ಮನಬಂದಂತೆ ಕಚ್ಚಿ ಗಾಯಗೊಳಿಸಿರುವ ಪರಿಣಾಮ ಗಾಯಗೊಂಡ ಬಾಲಕರ ಗೋಳು ಹೇಳತೀರದಾಗಿದೆ. ಇಷ್ಟಾದರೂ ನಗರಸಭೆಯ ಯಾವೊಬ್ಬ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ನಗರಸಭಾ ಸದಸ್ಯರಾಗಲಿ ಭೇಟಿ ನೀಡದಿರೋದು ಸ್ಥಳೀಯರನ್ನು ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

