ಜೆಡಿಎಸ್‌ನಿಂದಾಗಿ ಬೇಡದ ಉಪ ಚುನಾವಣೆ
ಕುಣಿಗಲ್: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಸ್ಥಾಪಿತವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಪ್ರಸ್ತುತ ಉತ್ತರ ಭಾರತದ ಪ್ರಮುಖ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯುತ್ತಿದೆ. ಪಕ್ಷವು ಮತ್ತೊಮ್ಮೆ ಗತ ವೈಭವವನ್ನು ಪಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ತಿಳಿಸಿದರು.
ಭಾನುವಾರ, ಬೆಂಗಳೂರು ಗ್ರಾಮಾಂತರ ಲೋಕಸಭೆಯ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ, ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಜೆಡಿಎಸ್ ವರಿಷ್ಠರ ಕುಟುಂಬ ಸದಸ್ಯರಿಗೆ ಅಧಿಕಾರ ದಕ್ಕಿಸುವ ಉದ್ದೇಶದಿಂದ, ಯಾರಿಗೂ ಬೇಡವಾದ ಚುನಾವಣೆಯನ್ನು ಅನಿವಾರ್ಯವಾಗಿ ಎದುರಿಸಬೇಕಾದ ಸ್ಥಿತಿ ಬಂದೊದಗಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಪ್ರಮುಖ ರಾಷ್ಟ್ರೀಯ ಪಕ್ಷವೆಂದು ಫೋಸು ಕೊಡುವ ಬಿಜೆಪಿ, ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ತನ್ನ ಸ್ಥಾನ ಮಾನ ಏನೆಂದು ತೋರಿಸಿದೆ ಎಂದರು.
ಶೋಭೆ ತರುವುದಿಲ್ಲ: ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಅಭ್ಯರ್ಥಿಗಳು ಸಿಗದೆ, ನಟರನ್ನು ಕರೆತಂದು ಕಣಕ್ಕಿಳಿಸುವ ಕೆಳಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಶೋಭೆ ತರವುದಿಲ್ಲ ಎಂದರು, ಪ್ರಸ್ತುತ ದಿನಗಳಲ್ಲಿ ಸಂವಿಧಾನ ತತ್ವ ಸಿದ್ಧಾಂತಗಳನ್ನು ಬಹುತೇಕ ರಾಷ್ಚ್ರೀಯ ಪಕ್ಷಗಳು ಗಾಳಿಗೆ
ತೂರುತ್ತಾ, ಸ್ವೇಚ್ಛಾಚಾರದ ರಾಜಕಾರಣ ಮಾಡುತ್ತಾ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುತ್ತಿದ್ದಾರೆ. ಆದರೆ ಆರ್‌ಪಿಐ ಪಕ್ಷ ಸಂವಿಧಾನ ತತ್ವ ಸಿದ್ಧಾಂತಗಳನ್ನು ಸಂರಕ್ಷಿಸಿ, ಸಾಮಾಜಿಕ ನ್ಯಾಯ ಸರ್ವರಿಗೂ ದೊರಕುವಂತೆ ಶ್ರಮಿಸುತ್ತಿದೆ. ಈಗಾಗಲೆ ರಾಜ್ಯದ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಬಹುತೇಕ ಕಡೆ ಕಣಕ್ಕಿಳಿದಿದ್ದು, ಪ್ರಸಕ್ತ ಲೋಕಸಭೆ ಉಪಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ತತ್ವಹೀನ ಆಡಳಿತದಂದ ರೋಸಿಹೋಗಿ ಜನ ಆರ್‌ಪಿಐ ಬೆಂಬಲಿಸಲಿದ್ದಾರೆಂದರು. ಗ್ರಾಮಾಂತರ ಲೋಕಸಭೆ ಉಪಚುನಾವಣೆ ಅಭ್ಯರ್ಥಿ ಕುಣಿಗಲ್ ಶಿವಣ್ಣ, ಆರ್‌ಪಿಐ ಎರಡೂ ಕ್ಷೇತ್ರದಲ್ಲೂ ಜಾತಿ ಪದ್ಧತಿ ಚುನಾವಣೆಗೆ ಬೆಲೆ ಕೊಡದೆ ಅಹಿಂದ ವರ್ಗದವರನ್ನು ಚುನಾವಣೆ ಕಣಕ್ಕಿಳಿಸಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜಾತಿ ಆಧರಿತ ಚುನಾವಣೆಗೆ ಕುಮ್ಮಕ್ಕು ನೀಡಿ ಪ್ರಭಾವಿ ವರ್ಗದ ಜನಾಂಗದವರನ್ನೆ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಇವರು, ಕೇವಲ ಆ ವರ್ಗವನ್ನು ಮತಬ್ಯಾಂಕನ್ನಾಗಿ ಮಾಡಿಕೊಳ್ಳುತ್ತೇವೆ ಹೊರತು ರಾಜಕಾರಣದಲ್ಲಿ ಅಧಿಕಾರ ನೀಡಲು ಅಲ್ಲ ಎಂದ ಅವರು ಈ ಬಾರಿ ಅಹಿಂದ ವರ್ಗದ ಮತದಾರರು ಆರ್‌ಪಿಐ ಪಕ್ಷವನ್ನು ಬೆಂಬಲಿಸುವುದರಲ್ಲಿ ಯಾವುದೇ ಅನುಮಾನಬೇಡ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಈಗಾಗಲೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆಂದರು.
ರಾಜ್ಯ ಪ್ರದಾನ ಕಾರ್ಯದರ್ಶಿ ನರಸಿಂಗ ಪಟೇಲ್, ಜಿಲ್ಲಾಧ್ಯಕ್ಷ ಹೇರೂರು ಧನರಾಜ್ ಮಾತನಾಡಿದರು. ಪ್ರಮುಖರಾದ ವೆಂಕಟೇಶ್, ಸುರೇಶ್, ಪ್ರಕಾಶ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

