ಜೆಡಿಎಸ್ ಡೋಂಗಿ ರಾಜಕಾರಣಕ್ಕೆ ಮರುಳಾಗದಿರಿ: ಸಿಎಂ ಸಿದ್ದರಾಮಯ್ಯ
ಕುಣಿಗಲ್: ಕೇವಲ ತಮ್ಮ ಕುಟುಂಬ ಸದಸ್ಯರಿಗೆ ಅಧಿಕಾರ ದೊರಕಿಸಿಕೊಡಲು ಅವಕಾಶವಾದಿ ರಾಜಕಾರಣದಲ್ಲೆ ಮುಳುಗೇಳುತ್ತಿರುವ, ಯಾವುದೇ ರಾಜಕೀಯ ತತ್ವ, ಸಿದ್ಧಾಂತಗಳಿಲ್ಲದ ಜೆಡಿಎಸ್ನ ಅವಕಾಶವಾದಿ ಮತ್ತು ಡೋಂಗಿ ರಾಜಕಾರಣಕ್ಕೆ ರಾಜ್ಯದ ಜನತೆ ಮರಳಾಗದಂತೆ ಎಚ್ಚರವಹಿಸಿ, ತಕ್ಕಪಾಠ ಕಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸೋಮವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಯಾವುದೇ ಜನಪರ ಅಭಿವೃದ್ಧಿ ಪರವಾಗಿ ಯಾವುದೇ ಕಾರ್ಯಕ್ರಮ ಇಲ್ಲ ಮತ್ತು ತತ್ವ ಸಿದ್ಧಾಂತಗಳಿಲ್ಲ, ಇನ್ನು ಕುಮಾರಸ್ವಾಮಿಯವರಾಗಲಿ, ದೇವೇಗೌಡರಾಗಲಿ ತಮ್ಮದು ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಾ ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಕಾರ್ಯಕ್ರಮಗಳಲ್ಲಿ ಬಿಜೆಪಿಯ ರಾಷ್ಟ್ರೀಯ, ರಾಜ್ಯ ನಾಯಕರನ್ನು ಖಂಡಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಅಧಿಕಾರ ದಾಹಕ್ಕಾಗಿ ಒಳಒಪ್ಪಂದ ಮಾಡಿಕೊಂಡು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಯಾವ ಮುಖ ಇಟ್ಟುಕೊಂಡು ತಾವು ಜಾತ್ಯತೀತರು ಎಂಬ ಹೇಳಿಕೆ ಕೊಡುತ್ತಾರೆಂದು ಪ್ರಶ್ನಿಸಿದರು. ಜೆಡಿಎಸ್ ಮುಖಂಡರು ಯಾವುದೇ ಅರ್ಥದಲ್ಲಿ ಜಾತ್ಯತೀತರೆಂದು ಹೇಳಿಕೊಳ್ಳುವ ನೈತಿಕ ಹಕ್ಕನ್ನು ಉಳಿಸಿಕೊಂಡಿಲ್ಲ ಎಂದು ಗುಡುಗಿದರು.
ನಿಜಬಣ್ಣ ತೋರಿದ ಬಿಜೆಪಿ: ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದ್ದು, 20-20 ತಿಂಗಳ ಅಧಿಕಾರ ಹಸ್ತಾಂತರಿಸದ ಜೆಡಿಎಸ್ ಪಕ್ಷ ವಚನಭ್ರಷ್ಟ ಪಕ್ಷವೆಂದು ರಾಜ್ಯದ ಉದ್ದಗಲಕ್ಕೂ ಹೇಳಿಕೊಂಡು ಬಂದ ಬಿಜೆಪಿಯವರು ಈಗ ನೋಡಿದರೆ, ಪರೊಕ್ಷವಾಗಿ ಜೆಡಿಎಸ್ ಬೆಂಬಲಿಸುತ್ತಾ ತಮ್ಮ ನಿಜಬಣ್ಣವನ್ನು ತೋರಿಸಿದ್ದಾರೆ. ಜೆಡಿಎಸ್ - ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ರಾಜ್ಯದ ಮತದಾರರು ತಕ್ಕ ಪಾಠ ಕಲಿಸಬೇಕೆಂದರು. ರಾಜ್ಯ ರಾಷ್ಟ್ರದ ಜನತೆಯ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕೆಂದರು.
ಸಿಎಂಗೆ ಅಭಿವೃದ್ಧಿ ಪರ ಚಿಂತೆ: ತಮ್ಮ ವಿನೂತನ ಶೈಲಿಯ ಮಾತುಗಳ ಮೂಲಕ ಜನತೆಯನ್ನು ರಂಜಿಸುವ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಕಮಲಕ್ಕೆ ಅರಳುವ ಚಿಂತೆಯಾದರೆ, ಧನದಾಹಿಗೆ ಹಣ ಉಳಿಸಿಕೊಳ್ಳುವ ಚಿಂತೆ, ದೇವೇಗೌಡರಿಗೆ ತಮ್ಮ ಮಕ್ಕಳ ಭವಿಷ್ಯ ಉಳಿಸಿಕೊಳ್ಳುವ ಚಿಂತೆಯಾದರೆ ಸಿದ್ದರಾಮಯ್ಯಗೆ ಸದಾ ಜನಪರ ಅಭಿವೃದ್ಧಿ ಚಿಂತೆ ಎಂದು ಹೇಳಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೊಸೆ ಗೆಲ್ಲಿಸಲು ಪಡುತ್ತಿರುವ ಪಾಡುಗಳ ಬಗ್ಗೆ ವ್ಯಂಗ್ಯ ಮಾತುಗಳಲ್ಲಿ ಹೇಳಿದ ಅವರು, ಮಾಡಬಾರದನ್ನು ಮಾಡಿದ ಬಿಜೆಪಿ ಸರ್ಕಾರದ ಕೆಲವರು ಜೈಲಿನಲ್ಲಿದ್ದರೆ, ಮತ್ತೆ ಕೆಲವರು ಬೇಲ್ ಮೇಲೆ ಹೊರಗಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಮೇಲೆ ಕನಿಷ್ಠ ಒಂದೇ ಒಂದು ಆರೋಪಗಳಿಲ್ಲ. ಇದಕ್ಕೆ ಅವರ ಸ್ವಚ್ಛ, ದಕ್ಷತೆ ಆಡಳಿತ ವೈಖರಿ ಸಾಕ್ಷಿ, ದೇವೇಗೌಡರು ವಿನಾಕಾರಣ ಸಿದ್ದರಾಮಯ್ಯನವರನ್ನು ಒಕ್ಕಲಿಗ ವಿರೋಧಿ ಎಂದು ಗೊಂದಲ ಹಬ್ಬಿಸುತ್ತಿದ್ದಾರೆ. ಆದರೆ ಬಹುತೇಕ ಒಕ್ಕಲಿಗ ಶಾಸಕ, ಮುಖಂಡರ ಬೆಳವಣಿಗೆ ಸಹಿಸದೆ ತಮ್ಮ ಸ್ವಾರ್ಥಕ್ಕಾಗಿ ಅವರನ್ನೆಲ್ಲ ಮೂಲೆಗುಂಪು ಮಾಡಿದ್ದು ಯಾರೆಂದು ಜನತೆಗೆ ಗೊತ್ತಿದೆ. ಈ ಚುನಾವಣೆಯಲ್ಲಿ ಜೆಡಿಎಸ್ಗೆ ಮತದಾರರು ತಕ್ಕಪಾಠ ಕಲಿಸಬೇಕೆಂದರು.
ಕೇಕ್ ಕತ್ತರಿಸುವ ಮೂಲಕ ಸಿಎಂ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಹುತೇಕ ಕಾರ್ಯಕರ್ತರು ಮುಖಂಡರು, ಜನ್ಮದಿನದ ಶುಭಾಶಯ ಕೊರಿದರು. ಸಚಿವರಾದ ಜಯಚಂದ್ರ, ಜಾರ್ಜ್, ಶಾಸಕರಾದ ಕೆ.ಎನ್.ರಾಜಣ್ಣ, ಷಡಕ್ಷರಿ, ರಫೀಕ್ ಅಹಮದ್, ಮಾಜಿ ಶಾಸಕರಾದ ಬಿ.ಬಿ. ರಾಮಸ್ವಾಮಿಗೌಡ, ಮುದ್ದಹನುಮೇಗೌಡ, ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫೀ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆ ರಾತ್ರಿ ಎಂಟು ಗಂಟೆಗೆ ಪ್ರಾರಂಭವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

