ಸಚಿವ ಜಯಚಂದ್ರ ಪತ್ನಿಗೂ ಆಧಾರ್ ಅದ್ವಾನದ ಬಿಸಿ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರಿಗೂ ಆಧಾರ್ ಅದ್ವಾನದ ಬಿಸಿ ಈಗಾಗಲೇ ತಟ್ಟಿದೆ. ಈ ಕುರಿತು ಸ್ವತಃ ಸಚಿವರೇ ಪತ್ರಕರ್ತರ ಎದುರು ತಮ್ಮ ಅನುಭವ ಹಂಚಿಕೊಂಡರು.
ಅವರು ತುಮಕೂರಿನಲ್ಲಿ 67 ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ತಾವು ಹಾಗೂ ತಮ್ಮ ಪತ್ನಿ ಏಕ ಕಾಲದಲ್ಲಿ ಆಧಾರ್ ಪಡೆಯುವ ಹಿನ್ನೆಲೆಯಲ್ಲಿ ಫೋಟೋ ಸೇರಿದಂತೆ ಇತರೆ ಮಾಹಿತಿ ನೀಡಿದೆವು. ಆದರೆ ತಮಗೆ ಆಧಾರ್ ನಂಬರ್ ಬಂದ 6 ತಿಂಗಳ ನಂತರ ತಮ್ಮ ಪತ್ನಿಗೆ ಆಧಾರ್ ನಂಬರ್ ಬಂತು. ಆಧಾರ್ ಅದ್ವಾನದ ಅನುಭವ, ಬಿಸಿ ತಮಗೂ ಹಾಗೂ ತಮ್ಮ ಪತ್ನಿಗೂ ತಟ್ಟಿದೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಆಧಾರ್ ಅದ್ವಾನ ಕುರಿತಂತೆ ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು ಎಂದು ಸಚಿವ ಟಿ.ಬಿ. ಜಯಚಂದ್ರ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತುಮಕೂರು ವಿವಿ ಕುಲಪತಿ ಡಾ. ರಾಜಾಸಾಬ್ ಅವರಿಗೂ ಆಧಾರ್ ಅದ್ವಾನದ ಬಿಸಿ ತಟ್ಟಿರುವುದು ಸಚಿವರ ಗಮನಕ್ಕೆ ಬಂತು.
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಆ.31 ಕಡೆ ದಿನ. ಆದರೆ ಎಲ್ಲರಿಗೂ ಆಧಾರ್ ನಂಬರ್ ಸಿಕ್ಕಿಲ್ಲ. ಜನತೆ ಕ್ಯೂ ಆಧಾರ್ಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಆದರೆ ಒಮ್ಮೆ ಸರತಿಯ ಸಾಲಿನಲ್ಲಿ ನಿಂತ ವ್ಯಕ್ತಿಯ ಸರತಿ ಬರುವುದು 3 ದಿನಗಳ ನಂತರ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಇತರರು ಉಪಸ್ಥಿತರಿದ್ದರು.
ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಸನ್ಮಾನ: ಆಕ್ಷೇಪ
ಕುಣಿಗಲ್: ಅತ್ಯಾಚಾರಿಗೆ ತಾಲೂಕು ಆಡಳಿತ ಸನ್ಮಾನಿಸಲು ಮುಂದಾದಾಗ, ಭಗತ್ ಕ್ರಾಂತಿ ಸೇನೆಯ ಪದಾಧಿಕಾರಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಹಸೀಲ್ದಾರ್ ಮತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿದ ಘಟನೆ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ನಡೆಯಿತು. ಗುರುವಾರ, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನ ನೆರವೇರಿಸಲಾಗುತಿತ್ತು, ಈ ಸಂಧರ್ಭದಲ್ಲಿ ವೇದಿಕೆಯ ಮೇಲಿದ್ದ ನಿವೃತ್ತ ನೌಕರರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ನಿವೃತ್ತ ಸೈನಿಕ ಕರೀಗೌಡ ಎಂಬಾತನನ್ನು ಸಾಮಾಜಿಕ ಸೇವೆಗೆ ಎಂದು ಗುರುತಿಸಿ ಸನ್ಮಾನಿಸಲು ವೇದಿಕೆ ಆಹ್ವಾನಿಸಿದರು. ಸ್ಥಳದಲ್ಲಿದ್ದ ಭಗತ್ ಕ್ರಾಂತಿ ಸೇನೆಯ ಮಂಜುನಾಥ್, ವೇದಿಕೆ ಏರಿ ಸದರಿ ಸನ್ಮಾನಿತರು, ಈಗಾಗಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸಮಗ್ರ ವಿಚಾರಣೆ ನಡೆದು ಆರೋಪ ಸಾಬೀತಾದ ಕಾರಣ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಇಂತಹವರಿಗೆ ಪೂರ್ವಾಪರ ವಿಚಾರಿಸದೆ ಏಕಾಏಕಿ ಸನ್ಮಾನಕ್ಕೆ ಪರಿಗಣಿಸಿರುವುದು ಸರಿಯಲ್ಲ, ಅಲ್ಲದೆ ಇದು ಇಡೀ ತಾಲೂಕು ಆಡಳಿತದ ಗೌರವದ ಪ್ರಶ್ನೆಯಾಗಿದೆ. ಕೂಡಲೆ ಸನ್ಮಾನದಿಂದ ಕೈಬಿಟ್ಟು ತಾಲೂಕು ಆಡಳಿತ ಸನ್ಮಾನದ ಘನತೆ, ಗೌರವ ಕಾಪಾಡುವಂತೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

