ತುಮಕೂರು

ಸಂತಾನಶಕ್ತಿ ಹರಣ ಬದಲು ಜೀವ ಮರಣ

Published On :

ಕ.ಪ್ರ.ವಾರ್ತೆ ತುಮಕೂರು ಆ. 22
ಸಂತಾನ ಶಕ್ತಿ ಹರಣಕ್ಕಾಗಿ ಬಂದಿದ್ದ ಮಹಿಳೆಯ ಜೀವ ಹರಣ ಮಾಡುವ ಮೂಲಕ ತುಮಕೂರಿನ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಮಹಿಳೆಯ ಕುಟುಂಬವನ್ನೇ ಆಪೋಷನ ತೆಗೆದುಕೊಂಡಿದ್ದಾರೆ.
ಮೂಲತ: ದಾವಣಗೆರೆಯವರಾದ ಜ್ಯೋತಿಬಾಯಿ ತುಮಕೂರಿನ ಪ್ರಕಾಶ್ ನಾಯ್ಕ ಎಂಬಾತನನ್ನು ಮದುವೆಯಾಗಿ ತುಮಕೂರಿನ ಬಟವಾಡಿಯಲ್ಲೇ ನೆಲೆಸಿದ್ದರು. ಗಂಡನ ವ್ಯಾಪಾರಕ್ಕೆ ಈಕೆ ಸಾಥ್ ನೀಡುತ್ತಿದ್ದರು. ಇಬ್ಬರು ಪುಟ್ಟ ಮಕ್ಕಳಿಗೆ ಜನ್ಮ ನೀಡಿದ್ದ ಜ್ಯೋತಿಬಾಯಿ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಿಕೊಳ್ಳಲು ನಿರ್ಧರಿಸಿದ್ದರು.
ಜೀವಂತವಾಗಿ ಬರಲೇ ಇಲ್ಲ: ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕುಟುಂಬ ಯೋಜನೆಯಡಿ ನಡೆಸಲಾಗುತ್ತಿದ್ದ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಪತಿ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ ಬಂದಿದ್ದಳು. ಆದರೆ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಹೋಗಿದ್ದ ಮಹಿಳೆ ಹೊರಗೆ ಬರಲೇ ಇಲ್ಲ. ಇನ್ನೇನು ಅಮ್ಮ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಆ ಪುಟಾಣಿ ಮಕ್ಕಳು ಅಮ್ಮನ ಶವ ಕಂಡ ಕಣ್ಣೀರಿಟ್ಟರು.
ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಸುಮಾರು 15 ಮಹಿಳೆಯರು ಬಂದಿದ್ದರು. ಅದರಲ್ಲಿ ಬಟವಾಡಿಯ ಜ್ಯೋತಿ ಬಾಯಿ ಕೂಡ ಒಬ್ಬರು. ಇವರಿಗೆ ಆಸ್ಪತ್ರೆಯಲ್ಲಿ ಸಂತಾನ ಹರಣ ಚಿಕಿತ್ಸೆಯನ್ನು ವೈದ್ಯರು ಆರಂಭಿಸಿದ್ದಾರೆ.
ಪ್ರಜ್ಞೆ ಕಳೆದುಕೊಂಡರು: ವೈದ್ಯರು ಟೆಸ್ಟ್ ಡೋಸ್ ಕೊಟ್ಟ ಸ್ವಲ್ಪ ಹೊತ್ತಿಗೆ ಜ್ಯೋತಿ ಬಾಯಿ ಪ್ರಜ್ಞೆ ಕಳೆದುಕೊಂಡರು. ಕೂಡಲೇ ತುರ್ತು ಚಿಕಿತ್ಸಾ ಘಟಕಕ್ಕೆ ಶಿಫ್ಟ್ ಮಾಡಿದರೂ ಉಪಯೋಗವಾಗಲಿಲ್ಲ. ಅಷ್ಟೊತ್ತಿಗಾಗಲೇ ಜ್ಯೋತಿ ಪ್ರಾಣ ಕಳೆದುಕೊಂಡಿದ್ದರು.
ಕೆಲ ಕಾಲ ವಿಷಯ ಮುಚ್ಚಿಟ್ಟ ವೈದ್ಯರು: ಜ್ಯೋತಿ ಪ್ರಾಣ ಕಳೆದುಕೊಂಡಿದ್ದನ್ನು ಕೆಲ ಕಾಲ ವೈದ್ಯರು ಮುಚ್ಚಿಟ್ಟರು. ಆದರೆ ಎಷ್ಟು ಹೊತ್ತಾದರೂ ಮಹಿಳೆ ವಾಪಾಸ್ ಬಾರದೇ ಇದ್ದುದ್ದರಿಂದ ಅನುಮಾನಗೊಂಡ ಆಕೆಯ ಪತಿ ಹಾಗೂ ಸಂಬಂಧಿಕರು ವಿಚಾರಿಸಿದಾಗ ಆಕೆ ಸಾವನ್ನಪ್ಪಿದ್ದು ದೃಢವಾಯಿತು. ವೈದ್ಯೆ ನಿರ್ಲಕ್ಷ್ಯವೇ ಕಾರಣ: ಬೆಳಗ್ಗೆ ಅತ್ಯಂತ ಆರೋಗ್ಯವಾಗಿಯೇ ಮನೆಯಿಂದ ಆಸ್ಪತ್ರೆಗೆ ಬಂದಿದ್ದ ತನ್ನ ಪತ್ನಿಯ ಸಾವಿಗೆ ಸರ್ಕಾರಿ ಆಸ್ಪತ್ರೆ ವೈದ್ಯೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪತಿ ಪ್ರಕಾಶ್ ನಾಯ್ಕ.
ಒಂದಷ್ಟು ಹಣ ನೀಡಿ ತಪ್ಪಿಸಿಕೊಳ್ಳಲು ಯತ್ನ: ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯರು ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ನೇತೃತ್ವದಲ್ಲಿ ರು.50 ಸಾವಿರ ಪರಿಹಾರ ನೀಡಿ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಆದರೆ ತುಂಬು ಜೀವ ಮತ್ತೆ ಬರುವುದೇ ಎಂಬುದು ಜನರ ಪ್ರಶ್ನೆಯಾಗಿದೆ.
ಮೃತ ಸಂಬಂಧಿಕರ ಆಕ್ರಂದನದಿಂದ ಬೆಚ್ಚಿರುವ ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಪರಿಹಾರದ ಹಣವನ್ನು ಹೆಚ್ಚಿಗೆ ಕೊಡುವ ಮಾತನ್ನು ಆಡಿದ್ದಾರೆ. ಆದರೆ ತಾಯಿಯನ್ನು ಕಳೆದುಕೊಂಡು ಬೋರಿಡುತ್ತಿರುವ ಆ ಮಕ್ಕಳ ಕಣ್ಣೀರನ್ನು ಒರೆಸುವವರು ಯಾರು ಎಂಬ ಪ್ರಶ್ನೆಯನ್ನು ಜನತೆ ಕೇಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.