ತುಮಕೂರು

ವರ್ಷದಲ್ಲಿ ಶತಮಾನೋತ್ಸವ ಭವನ: ರಫೀಕ್

Published On :

ಕ.ಪ್ರ.ವಾರ್ತೆ ,  ತುಮಕೂರು ,  ಆ. 23
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ನಗರ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಹಾಗೂ ಎನ್‌ಎಸ್‌ಎಸ್  ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೂರೆಂಟು ವರ್ಷಗಳನ್ನು ಪೂರೈಸಿರುವ ಕಾಲೇಜಿನಲ್ಲಿ ಶತಮಾನೋತ್ಸವ ಸವಿನೆನಪಿಗಾಗಿ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಸಂಸದರು, ಶಾಸಕರ ನಿಧಿಯಿಂದ ನೆರವು ಪಡೆದು ವರ್ಷದೊಳಗೆ ಭವನ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದರು.
ಕಾಲೇಜಿಗೆ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಷ್ಟ್ರದಲ್ಲೇ ಮಾದರಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿದ್ದು ಶೌಚಾಲಯ, ಪ್ರಯೋಗಾಲಯ ಸಮಸ್ಯೆ ಬಗೆಹರಿಸಲು ಒತ್ತು ಕೊಡುವುದಾಗಿ ಭರವಸೆಯಿತ್ತರು.
ಪಿಯುಸಿ ಪ್ರಮುಖ ಘಟ್ಟ: ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟ. ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಸಿಗಲಿದೆ ಎಂದು ರಫೀಕ್ ಹೇಳಿದರು.
ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ತಾವು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದು ಉತ್ತಮ ಸೌಲಭ್ಯವಿಲ್ಲದಿದ್ದರೂ ಒಳ್ಳೆಯ ಶಿಕ್ಷಣ ಸಿಕ್ಕಿದ್ದರಿಂದ ಐಐಟಿ ಪದವೀಧರನಾಗಲು ಸಾಧ್ಯವಾಯಿತು ಎಂದರು.
ಸರ್ಕಾರಿ ಮಹಿಳಾ ಕಾಲೇಜು: ರಾಜ್ಯ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ಜಿಲ್ಲಾಕೇಂದ್ರದಲ್ಲಿ ಮಹಿಳಾ ಪದವಿ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದ್ದು ಮುಂದಿನ ಶೈಕ್ಷಣಿಕ ವರ್ಷ ಮಹಿಳಾ ಕಾಲೇಜು ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಷಫಿ ಅಹ್ಮದ್ ಹೇಳಿದರು.
ಜಿಲ್ಲೆಯು ಶಿಕ್ಷಣ ಕೇಂದ್ರವೆನಿಸಿದೆ: ಗ್ರಾಮೀಣ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿ ತುಮಕೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ಮಂಜೂರು ಮಾಡಿದ್ದು ಶೀಘ್ರದಲ್ಲಿ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಸಚಿವರ ಜೊತೆ ಚರ್ಚಿಸಲಾಗುವುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ.ಎಸ್. ನಿರಂಜನ್, ಪ್ರಾಚಾರ್ಯ ರಾಜಣ್ಣ ಉಪಸ್ಥಿತರಿದ್ದರು.
ದ್ವಿತೀಯ ಪಿಯುನಲ್ಲಿ ಉತ್ತಮ ಅಂಕಗಳಿಸಿದ ಕಲಾವಿಭಾಗದ ಅಶ್ವತ್ಥನಾರಾಯಣ್, ಜಯಂತ್, ಹರೀಶ್, ವಾಣಿಜ್ಯ ವಿಭಾಗದ ಪವಿತ್ರಾ, ತೀರ್ಥೇಶ, ವಿಜ್ಞಾನ ವಿಭಾಗದ ಗೋಕುಲ್ ವಸಂತ್ ರಾಥೋಡ್ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳಾದ ಭೀಮರಾವ್, ನಾಗೇಂದ್ರರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.