ತುಮಕೂರು

ಆಧಾರ್, ಗ್ಯಾಸ್ ಸಬ್ಸಿಡಿ ಕೇಂದ್ರದ ದ್ವಂದ್ವ ನಿಲುವು

Published On :

ಕ.ಪ್ರ.ವಾರ್ತೆ ,  ತುಮಕೂರು ,  ಆ. 25
ಎಲ್‌ಪಿಜಿ ಸಬ್ಸಿಡಿ ಕುರಿತಂತೆ ಕೇಂದ್ರ ಯುಪಿಎ ಸರ್ಕಾರ ದ್ವಂದ್ವ ನಿಲುವಿನ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ.
ಒಂದೆಡೆ ಕೇಂದ್ರ ಯುಪಿಎ ಸರ್ಕಾರ ಆ. 31 ರೊಳಗೆ ಎಲ್‌ಪಿಜಿ ಸಬ್ಸಿಡಿ ಪಡೆಯ ಬೇಕಿದ್ದರೆ ಆಧಾರ್ ನಂಬರ್ ಪಡೆಯಬೇಕಿರುವುದು ಕಡ್ಡಾಯ ಎಂಬ ಹೇಳಿಕೆ ನೀಡಿದೆ. ಆದರೆ ಅದೇ ಕೇಂದ್ರ  ಯುಪಿಎ ಸರ್ಕಾರದ ಸಂಸದೀಯ ವ್ಯಹಹಾರಗಳ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲಾ ಎಲ್‌ಪಿಜಿ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಪಡೆಯಲು  ಆಧಾರ್ ಕಡ್ಡಾಯವಲ್ಲ. ಯಾವುದಾದರೂ ಸರ್ಕಾರಿ ಸಂಸ್ಥೆಗಳು ಆಧಾರ್ ಅಥವಾ ಆಧಾರ್ ಲಿಂಕ್ ಬ್ಯಾಂಕ್ ಖಾತೆ  ಕೇಳುತ್ತಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ ಎಂದು ಎಂದು ರಾಜ್ಯಸಭೆಯಲ್ಲಿ ಕೇರಳ ಸಿಪಿಎಂ ಸಂಸದ ಅಚ್ಯುತನ್ ಅವರ ಪ್ರಶ್ನೆಗೆ ಉತ್ತರಿಸಿರುವುದು ಆ.24 ರ ಕನ್ನಡಪ್ರಭದಲ್ಲಿ ವರದಿಯಾಗಿದೆ.
ಇದೊಂದು ಕೇಂದ್ರ ಯುಪಿಎ ಸರ್ಕಾರದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರ ಗಮನಕ್ಕೆ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಗಮನಕ್ಕೆ ತಂದ ವೇಳೆ ಸಚಿವರು ಕೂಡಲೇ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ಭಾನುವಾರ ನೀಡಿದ್ದಾರೆ.
ಶೀಘ್ರ ಪತ್ರ: ಅಲ್ಲದೆ ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಆಧಾರ್ ಆದ್ವಾನ ಕುರಿತಂತೆ ಶೀಘ್ರದಲ್ಲೇ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.                                                                    ಆ.24 ರಂದು ಜಿಲ್ಲಾಧಿಕಾರಿಗಳ ಕ:ಕೇರಿಯಲ್ಲಿ ಆಧಾರ್ ಕುರಿತಂತೆ ನಡೆದ ಸಭೆಯ ವಿವರ ಕನ್ನಡಪ್ರಭದಲ್ಲಿ ವರದಿಯಾಗಿದ್ದನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಯಿತು. ಆ.24 ಹಾಗೂ ಆ.25 ರ ಕನ್ನಡಪ್ರಭ ಪತ್ರಿಕೆಗಳನ್ನು ಕಾನೂನು ಸಚಿವರು ಜತೆಯಲ್ಲೇ ಕೊಂಡೊಯ್ದರು. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆಧಾರ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಂದ ವಿವರ ಪಡೆದರು.
ಆತಂಕ ಬೇಡ: ತುಮಕೂರು ಜಿಲ್ಲೆಯ ಜನತೆ ಆಧಾರ್, ಗ್ಯಾಸ್ ಸಬ್ಸಿಡಿ ಹಿನ್ನೆಲೆಯಲ್ಲಿ ಆ. 31 ರ ಆತಂಕದಲ್ಲಿರುವುದು ಬೇಡ.  ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವುದು, ಪತ್ರಿಕೆಯಲ್ಲಿ ಬಂದಿರುವುದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆಧಾರ್ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ವಿವರ ಕೂಡ  ಈಗ ಪತ್ರಿಕೆ ಮೂಲಕ ತಮ್ಮ ಗಮನಕ್ಕೆ ಬಂದಿದೆ.
ಆಧಾರ್ ಪೈಲಟ್ ಪ್ರಾಜೆಕ್ಟ್ ಯೋಜನೆಯಡಿ ಆಯ್ಕೆಯಾಗಿರುವ ತುಮಕೂರು ಜಿಲ್ಲೆಯ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರದ ಗನಮಕ್ಕೆ ತರುವುದಾಗಿಯೂ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿಯೂ ಜಯಚಂದ್ರ ಸ್ಪಷ್ಟಪಡಿಸಿದರು.
ಸಚಿವ, ಸಂಸದರಿಂದ ನೇತ್ರದಾನ ಭರವಸೆ
ತುಮಕೂರು: ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ನೇತ್ರದಾನ ಮಾಡುವ ಲಿಖಿತ ಭರವಸೆ ನೀಡಿದ್ದಾರೆ. ಅವರು ತುಮಕೂರಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ನೇತ್ರದಾನ ಅರಿವು ದಿನಾಚರಣೆ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡುವ ಭರವಸೆ ಪತ್ರವನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.