ನಫೆಡ್, ದಿನಾಂಕಕ್ಕೆ ರೈತರ ಹರಸಾಹಸ
ರಾತ್ರಿಯಿಂದಲೇ ಸರತಿಸಾಲಿನಲ್ಲಿ ನಿಂತ ಸಾವಿರಾರು ರೈತರು, ಗೊಂದಲ ನಿವಾರಿಸಲು ಮುಂದಾದ ಪೊಲೀಸರು
ತುರುವೇಕೆರೆ: ಇದು ರೈತರ ಪ್ರತಿಭಟನೆಯಲ್ಲ. ಬದಲಾಗಿ ತಾವು ಬೆಳೆದಿರುವ ಕೊಬರಿಯನ್ನು ನಫೆಡ್ಗೆ ಬಿಡಲು ದಿನಾಂಕ ಗೊತ್ತುವಳಿ ಮಾಡಿಕೊಳ್ಳಲು ಬಂದಿರುವ ರೈತರು. ನಫೆಡ್ ಕೇಂದ್ರದವರು ತಾವು ಮುಂಗಡವಾಗಿ ನೀಡುವ ದಿನಾಂಕದಂದು ಮಾತ್ರ ಕೊಬರಿಯನ್ನು ತೆಗೆದುಕೊಳ್ಳುತ್ತಾರೆ. ಅವರು ನೀಡುವ ದಿನಾಂಕವನ್ನು ಪಡೆಯಲು ನಿನ್ನೆ ರಾತ್ರಿಯಿಂದಲೇ ತಾಲೂಕಿನ ಸಾವಿರಾರು ರೈತರು ಸರತಿ ಸಾಲಿನಲ್ಲಿ ಕಾದು ಕುಳಿತಿದ್ದಾರೆ.
ಸ್ಥಾಪನೆ ಮಾಡಲಾಗಿರುವ 2 ಕೇಂದ್ರಗಳಿಂದ ಪ್ರತಿ ದಿನ ಕೇವಲ 40 ರೈತರಿಂದ ಮಾತ್ರ ಕೊಬ್ಬರಿ ಪಡೆಯಲು ಸಾಧ್ಯ ಎಂಬುದು ಅಧಿಕಾರಿಗಳ ಹೇಳಿಕೆ. ಇದರ ಹಿನ್ನೆಲೆಯಲ್ಲಿ ತಾವು ಮೊದಲು ನಫೆಡ್ಗೆ ಕೊಬ್ಬರಿ ಬಿಡಬೇಕು ಎಂಬ ಆಸೆಯಿಂದ ಸಾವಿರಾರು ರೈತರು ಕೃಷಿ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕುಳಿತಿದ್ದರು.
ಕೊಬ್ಬರಿ ಬೆಲೆ ಕುಸಿತಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗಲೆಂದು ನಫೆಡ್ ಕೇಂದ್ರವನ್ನು ತೆರೆದು ಕೊಬರಿಯನ್ನು ಕೊಳ್ಳಲು ಮುಂದಾಯಿತು. ಕಳೆದ ಒಂದೆರಡು ತಿಂಗಳಿನಿಂದ ತೆರಿದಿರುವ ನಫೆಡ್ ಕೇಂದ್ರದಲ್ಲಿ ತಾಲೂಕಿನ ಸಾವಿರಾರು ರೈತರು ಕೊಬ್ಬರಿಯನ್ನು ಬಿಟ್ಟಿದ್ದಾರೆ. ನಫೆಡ್ ಕೇಂದ್ರವನ್ನು ಮುಂದುವರೆಸಲು ನಿರ್ಧರಿಸಿರುವುದರಿಂದ ರೈತರು ತಮ್ಮಲ್ಲಿರುವ ಕೊಬ್ಬರಿಯನ್ನು ಬಿಡಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ಬೆಳಗ್ಗೆ 10 ಗಂಟೆಯ ವೇಳೆಗೆ ಸಾವಿರಾರು ರೈತರು ಮಾರುಕಟ್ಟೆ ಆವರಣಕ್ಕೆ ಜಮಾವಣೆಯಾಗುತ್ತಿದ್ದಂತೆ ನಿಯಂತ್ರಣ ಮಾಡುವುದು ಅಸಾಧ್ಯದ ಮಾತಾಗಿತ್ತು. ರೈತರಿಗೆ ದಿನಾಂಕ ನಿಗದಿಪಡಿಸುವ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಇದನ್ನು ಸರಿದಾರಿಗೆ ತರಲು ಪೊಲೀಸರು ತಮ್ಮ ಕೈಲಿದ್ದ ಲಾಠಿಯನ್ನು ಮೇಲೆತ್ತುವುದು ಅನಿವಾರ್ಯವಾಯಿತು. ಆಗ ಪರಿಸ್ಥಿತಿ ತಹ ಬಂದಿಗೆ ಬಂದಿತು.
ವ್ಯಾಪಾರಿಗಳ ಒಳ ವ್ಯಾಪಾರ: ವ್ಯಾಪಾರಿಗಳು ರೈತರ ಹೆಸರಿನಲ್ಲಿ ಪಹಣಿ ಪಡೆದು ನಫೆಡ್ಗೆ ಕೊಬ್ಬರಿ ಬಿಡುವ ಕಾಯಕವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಕೊಬ್ಬರಿ ಇಲ್ಲದ ರೈತರ ಬಳಿ ಅವರ ಪಹಣಿ ಹಾಗೂ ಇತರೆ ದಾಖಲಾತಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ವರ್ತಕರು ರೈತರಿಗೆ 2 ಸಾವಿರ ರು.ಗಳ ತನಕ ಆಮಿಶ ನೀಡಿ ಅವರಿಂದಲೇ ಕೊಬ್ಬರಿಯನ್ನು ನಫೆಡ್ ಕೇಂದ್ರಕ್ಕೆ ಬಿಡುವ ಒಳ ವ್ಯಾಪಾರ ಮಾಡುತ್ತಿದ್ದಾರೆ ಎಂಬುದಾಗಿ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ. ರೈತರು ಇಂತಹ ಕೃತ್ಯಕ್ಕೆ ಕೈಹಾಕದೇ ಇರಲು ವಿನಂತಿಸಿಕೊಂಡಿದ್ದಾರೆ. ಇದರಿಂದಾಗಿ ರೈತರ ಜಮಾವಣೆ ಜಾಸ್ತಿಯಾಗಿದೆ ಎಂದೂ ಕೊಂಡಜ್ಜಿ ವಿಶ್ವನಾಥ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

