ಪೋಷಕರು ಮಕ್ಕಳಿಗೆ ಮೌಲ್ಯ ಕಲಿಸಲಿ: ಸೂಲಿಬೆಲೆ ಚಕ್ರವರ್ತಿ
ಕನ್ನಡಪ್ರಭ ವಾರ್ತೆ ಗುಬ್ಬಿ ಆ.31
ಭವಿಷ್ಯದಲ್ಲಿ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ ಕೆಲಸ ತಂದೆ- ತಾಯಿಗಳಿಂದಾಗಬೇಕು. ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ ಬೇರೆಯವರಿಗಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಸಿ ಎಂದು ಸಂಸ್ಕಾರ ಭಾರತಿ ಪ್ರಾಂತ ಉಪಾಧ್ಯಕ್ಷ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಸಿ.ಎಸ್. ಪುರ ಗ್ರಾಮದಲ್ಲಿ ಶುಕ್ರವಾರ ಸಂಸ್ಕಾರ ಭಾರತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೂಡಿಟ್ಟ ಹಣ ಮೌಲ್ಯ ಕಳೆದುಕೊಳ್ಳುತ್ತಿದೆ. ಆದರೆ, ಸಾಧಕರ ಬದುಕು- ಬರಹ ಮೌಲ್ಯವನ್ನು ಇಂದಿಗೂ ಹಿಡಿದಿಟ್ಟುಕೊಂಡಿವೆ. ಆದ್ದರಿಂದ ಸಾಧಕರನ್ನು ಆದರ್ಶವಾಗಿಟ್ಟುಕೊಳ್ಳುವಂತೆ ಮಕ್ಕಳಿಗೆ ತಿಳಿಸಬೇಕು. ಭಾರತ ದೇಶದ ಸಂಸ್ಕೃತಿ, ಮಾಲ್ಯಗಳು ಆಧುನಿಕ ಜೀವನಶೈಲಿಯ ನಡುವೆ ಮರೆಯಾಗುತ್ತಿವೆ. ಸಾಮಾನ್ಯರಿಗಾಗಿ ಬಾಳಿದ ವ್ಯಕ್ತಿಗಳ ವ್ಯಕ್ತಿತ್ವವನ್ನು ಯುವಕರು ಅನುಸರಿಸಬೇಕು ಎಂದರು.
ದೇಶದ ಸಂಸ್ಕೃತಿಯನ್ನು ತಿಳಿಹೇಳುವ ಮೂಲಕ ದಾರಿ ತಪ್ಪುವವರಿಗೆ ಮಾರ್ಗದರ್ಶನ ನೀಡಬೇಕು. ದೇಶದ ಮಣ್ಣಿಗಾಗಿ ದುಡಿಯುವ ತರುಣರನ್ನು ತಯಾರು ಮಾಡಬೇಕಿದೆ. ಭ್ರಷ್ಟಾಚಾರ, ಭಯೋತ್ಪಾದನೆಯನ್ನು ಇಂದು ದೇಶವನ್ನು ಆಳುತ್ತಿದೆ. ರಾಷ್ಟ್ರಭಕ್ತಿ, ಸ್ವಾಭಿಮಾನವಿಲ್ಲದಿದ್ದರೆ ಭಾರತದೊಳಗೆ ನುಸುಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದರು.
ದೇಶವೇ ಇಲ್ಲದ ಮೇಲೆ ಸಂಪ್ರದಾಯ, ಸಂಸ್ಕೃತಿ, ಧರ್ಮದ ಬಗ್ಗೆ ಚಿಂತಿಸಿ ಫಲವೇನಿದೆ, ಮೊದಲು ದೇಶವನ್ನು ಉಳಿಸಿಕೊಳ್ಳಿ. ಅಲ್ಲದೆ, ಜನರನ್ನು ಪ್ರತಿನಿಧಿಸುವವರು ದೇಶದ ನಾಯಕತ್ವ ಎತ್ತ ಕೊಂಡೊಯ್ಯುತ್ತಿದ್ದಾರೆ, ಅದರಿಂದ ದೇಶದ ನಾಯಕತ್ವ ಎತ್ತ ಸಾಗಿದೆ ಎಂಬುದನ್ನು ಯೋಚಿಸಿ. ತರುಣರು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಭಾನುಪ್ರಕಾಶ್, ಸಂಸ್ಕಾರ ಭಾರತಿ ಪದಾಧಿಕಾರಿ ಚಕ್ರವರ್ತಿ ಮುರುಗನ್, ಸಂಸ್ಕಾರ ಭಾರತಿ ಸಿ.ಎಸ್. ಪುರ ಶಾಖೆಯ ಅಧ್ಯಕ್ಷ ಸಿ.ಕೆ.ಪವನ್, ಸಂಸ್ಥೆಯ ಕಾರ್ಯದರ್ಶಿ ರಾಜಗೋಪಾಲ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

