ನೊಣವಿನಕೆರೆ ಕೆರೆಗೆ ತಡೆಗೋಡೆ ನಿರ್ಮಿಸಿ
ನೊಳಂಬ ಅರಸರ ಕಾಲದಲ್ಲಿ ನಿರ್ಮಿತವಾದ ನೊಣವಿನಕೆರೆಯು ಐತಿಹಾಸಿಕ ಕೆರೆಯಾಗಿದ್ದು, ಈ ಕೆರೆ ನೂರಾರು ಎಕರೆ ವಿಸ್ತಾರವಾಗಿದೆ. ತಾಲೂಕಿನಲ್ಲಿಯೇ ಇದು ಅತಿ ದೊಡ್ಡಕೆರೆಯಾಗಿರುವುದಲ್ಲದೆ, ಪ್ರಮುಖ ಪ್ರವಾಸಿ ತಾಣವಾಗಿದೆ.
ಇದರ ಏರಿ ಅತ್ಯಂತ ಕಿರಿದ್ದಾಗಿದ್ದು ಕೇವಲ 15 ಅಡಿ ಅಗಲವಾಗಿದ್ದು 2 ಕಿ.ಮೀ. ಉದ್ದದ ಈ ಏರಿಯ ಮೇಲೆ ದಿನನಿತ್ಯ ಸಾವಿರಾರು ದ್ವಿಚಕ್ರ, ಲಘು ಮತ್ತು ಬಾರಿ ವಾಹನಗಳು ಓಡಾಡುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶೀಘ್ರ ತಡೆಗೋಡಿ ನಿರ್ಮಿಸಬೇಕಿದೆ.
ಮೈಸೂರು, ಮಂಡ್ಯ, ಕುಣಿಗಲ್, ಬೆಂಗಳೂರು ಹಾಗೂ ತುರುವೇಕೆರೆ ಮಾರ್ಗದಲ್ಲಿ ದ್ವಿಮುಖವಾಗಿ ದಿನನಿತ್ಯ 100ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಬಸ್ಗಳು ಹಾಗೂ ಇಷ್ಟೇ ಸಂಖ್ಯೆಯ ಖಾಸಗಿ ಬಸ್ಗಳು, ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಕೊಬ್ಬರಿ ತರುವ ಲಾರಿ, ಟ್ರ್ಯಾಕ್ಟರ್ಗಳು ಇದೇ ಏರಿಯ ಮೇಲೆ ಚಲಿಸುತ್ತವೆ. ಹೇಮಾವತಿ ನಾಲೆ ನೀರು ಈ ಕೆರೆಗೆ ಹರಿಯುವುದರಿಂದ ವರ್ಷವಿಡೀ ಕೆರೆ ತುಂಬಿರುತ್ತದೆ. ಕಳೆದ 50 ವರ್ಷಗಳಿಂದಲೂ ಕೆರೆ ಏರಿಯ ದುರಸ್ಥಿಯಾಗದೆ ಬಿದ್ದ ಮಳೆಯಿಂದ ಏರಿಯ ಮಣ್ಣು ಅಲ್ಲಲ್ಲಿ ಕೊಚ್ಚಿ ಹೋಗಿ ಏರಿಯ ಮೇಲ್ತುದಿ ಕೇವಲ 15 ಅಡಿ ಅಗಲಕ್ಕೆ ನಿಂತಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಕಿರಿದಾಗುವ ಸಂಭವ ಇದೆ. ಏರಿಯ ಮಧ್ಯಭಾಗದಲ್ಲಿರುವ ಗೊಲ್ಲಮ್ಮದೇವಿ ದೇವಾಲಯಕ್ಕೆ ಭಕ್ತರು ಸದಾ ಬರುತ್ತಿರುವುದರಿಂದ ಇದೊಂದು ಜನ ಹಾಗೂ ವಾಹನ ಜಂಗುಳಿಯ ರಸ್ತೆಯಾಗಿದೆ. ಏರಿಯ ಹಿಂಭಾಗ ಸುಮಾರು 70 ಅಡಿ ಆಳದಲ್ಲಿದ್ದು ಕೆರೆಯ ಭಾಗದಲ್ಲಿ ಸುಮಾರು 20-30 ಅಡಿ ಆಳವುಳ್ಳ ನೀರು ತುಂಬಿದೆ. ಇದರ ಮೇಲೆ ವಾಹನಗಳು ಚಲಿಸುವಾಗ ಚಾಲಕರಷ್ಟೇ ಅಲ್ಲ ಪ್ರಯಾಣಿಕರು ಜೀವ ಭಯದಿಂದ ಪ್ರಯಾಣಿಸುವಂತಾಗಿದೆ. ನೊಣವಿನಕೆರೆ ಏರಿಯ ಮೇಲೆ ವಾಹನ ಸವಾರರು ಸುಗಮವಾಗಿ ಹಾಗೂ ನಿರ್ಭಯವಾಗಿ ಸಂಚಾರ ಮಾಡಲು ಸುಮಾರು 2 ಕಿ.ಮೀ ಉದ್ದ ಈ ಏರಿಯನ್ನು ಕನಿಷ್ಠ 70 ಅಡಿಗಾದರೂ ವಿಸ್ತಾರಗೊಳಿಸಿ ಉದ್ದಕ್ಕೂ ತಡೆಗೋಡೆ ನಿರ್ಮಿಸುವುದರ ಜೊತೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ವಿವಿಧ ರೀತಿಯ ಸೈನ್ ಬೋರ್ಡ್ಗಳನ್ನು ಹಾಕಬೇಕು.
ಲೋಕೋಪಯೋಗಿ ಇಲಾಖೆ ಸಚಿವ ಮಹದೇವಪ್ಪ ಹಾಗೂ ಶಾಸಕ ಕೆ.ಷಡಕ್ಷರಿ ಗಮನಹರಿಸಿ ಸಾರ್ವಜನಿಕರ ಹಾಗೂ ವಾಹನ ಸವಾರರುಗಳ ಸುಗಮ ಸಂಚಾರಕ್ಕೆ ವಿಶಾಲ ರಸ್ತೆ ವ್ಯವಸ್ಥೆ ಮಾಡಬೇಕಿದೆ.
ಟಿ ಕೆ.ಎಸ್.ಸದಾಶಿವಯ್ಯ,
ಅಧ್ಯಕ್ಷ ತಾಲೂಕು ನವ ನಿರ್ಮಾಣ ಸಮಿತಿ
ಕಳಪೆ ಕಾಮಗಾರಿ, ಹನಿ ನೀರೂ ನಿಲ್ಲದ ಸಿಸ್ಟನ್
ತುರುವೇಕೆರೆ ಬಾಣಸಂದ್ರದ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ತಾಲೂಕು ಪಂಚಾಯ್ತಿಯಿಂದ ಸುಮಾರು 80 ಸಾವಿರ ರು.ಗಳ ವೆಚ್ಚದಲ್ಲಿ 2 ನೀರಿನ ಸಿಸ್ಟನ್ ನಿರ್ಮಾಣ ಮಾಡಲು ಹಣ ಮಂಜೂರಾಯಿತು. 2 ಕಾಮಗಾರಿಗಳನ್ನು ಮಾಡಿ ಕೇವಲ ಎರಡು ಮೂರು ತಿಂಗಳಾಗಿದೆ ಅಷ್ಟೇ. ಇವತ್ತಿಗೂ ಒಂದು ಹನಿ ನೀರೂ ಸಹ ನಿಂತಿಲ್ಲ. ಅತ್ಯಂತ ಕಳಪೆ ಕಾಮಗಾರಿ ಮಾಡಿದ ಫಲವಾಗಿ ಹಣ ವ್ಯರ್ಥವಾಯಿತೇ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಎಸ್ಟಿ ಕಾಲೋನಿಯ ಸಿಸ್ಟನ್ ಅಳವಡಿಕೆಗೆ ಸಂಬಂಧಿಸಿದಂತೆ ಸುಮಾರು 45 ಸಾವಿರ ರು.ಗಳ ವೆಚ್ಚದಲ್ಲಿ ಪೈಪ್ ಲೈನ್ ಮಾಡಬೇಕಿದೆ. ಆದರೆ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ. ನೀರಿನ ಸಿಸ್ಟನ್ ಅಳವಡಿಸುವ ವೇಳೆ ಸೂಕ್ತವಾಗಿ ಬೆಡ್ಡಿಂಗ್ ಹಾಕದ ಪರಿಣಾಮ ಸಿಸ್ಟನ್ಗೆ ನೀರು ಬಿಟ್ಟ ಕೆಲ ಕ್ಷಣಗಳಲ್ಲೇ ನೀರು ಕೆಳಗಿನಿಂದಲೇ ಸೋರಿ ಹೋಗುತ್ತಿದೆ. ಕಾಮಗಾರಿ ಮಾಡಿರುವ ಗುತ್ತಿಗೆದಾರರು ತನಗೆ ಹಣ ಕಡಿಮೆ ಸಂದಾಯವಾಗಿದೆ ಎಂದು ಹೇಳಿ ಕಳಪೆ ಕಾಮಗಾರಿ ಮುಗಿಸಿ ತನ್ನ ಕರ್ತವ್ಯ ಮುಗಿಯಿತು ಎಂದು ಕೈತೊಳೆದುಕೊಂಡಿದ್ದಾರೆ. ಸಿಸ್ಟನ್ಗೆ ಅಳವಡಿಸಿರುವ ನೀರಿನ ಪೈಪ್ಗೆ ನಲ್ಲಿಯನ್ನೂ ಅಳವಡಿಸಿಲ್ಲ. ನೀರು ಬರುವ ಪೈಪ್ಗೆ ಅಳವಡಿಸಿರುವ ಗೇಟ್ ವಾಲ್ ಹಾಕಿದ ದಿನದಿಂದಲೇ ಹಾಳಾಗಿದೆ. ಸಿಸ್ಟನ್ಗೆಂದು ನೀರು ಬಿಟ್ಟರೆ ನೀರು ಆಚೆಯೇ ಹೋಗುತ್ತದೆ. ಬೆಡ್ಡಿಂಗ್ ಸರಿಯಾಗಿ ಹಾಕದಿರುವುದರಿಂದ ಎಲ್ಲಿ ಸಿಸ್ಟನ್ನೇ ಕೆಳಗೇ ಬಿದ್ದು ಹೋಗುವುದೋ ಎಂಬ ಭಯದಿಂದ ಜನರು ಸಿಸ್ಟನ್ ಬಳಿಯೂ ಹೋಗುತ್ತಿಲ್ಲ. ಈ ಸಿಸ್ಟನ್ ಸಮೀಪವೇ ಮತ್ತೊಂದು ಸಿಸ್ಟನ್ ಸಹ ಸುಮಾರು 35 ಸಾವಿರ ರು.ಗಳಿಂದ ನಿರ್ಮಾಣ ಮಾಡಲಾಗಿದೆ. ಅದೂ ಸಹ ಕಳಪೆ ಕಾಮಗಾರಿಯಿಂದಾಗಿ ನೀರು ಸಂಗ್ರಹ ಮಾಡಲು ಸಾಧ್ಯವಾಗದೇ ಜನರ ಉಪಯೋಗದಿಂದ ದೂರವಾಗಿದೆ. ಸದ್ಯ ಬಾಣಸಂದ್ರದಲ್ಲಿ ಜನರಿಗೆ ನೀರಿನ ಕೊರತೆ ಇಲ್ಲ. ಆದರೆ ಕಳಪೆ ಕಾಮಗಾರಿ ಮಾಡಿರುವ ಕಾರಣ ಜನರು ನೀರಿಲ್ಲದೇ ಪರದಾಡುವಂತಾಗಿದೆ. ಕೂಡಲೇ ತಾಲೂಕು ಪಂಚಾಯತಿ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಹಾಗೂ ಕರ್ತವ್ಯ ಲೋಪ ಮಾಡಿರುವ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

