ತುಮಕೂರು

ಬೆಂಕಿ ಅವಘಡ, ಲಾರಿ ಪಲ್ಟಿ, ಆತ್ಮಹತ್ಯೆ

Published On :

ತುರುವೇಕೆರೆ: ತಾಲೂಕಿನ ವಿವಿಧ ಕಡೆ ಅಪರಾಧ ಪ್ರಕರಣಗಳು ನಡೆದಿವೆ.
ತಾಲೂಕಿನ ದಬ್ಬೇಘಟ್ಟದಲ್ಲಿ ಬೆಂಕಿ ಆಕಸ್ಮಿಕದಿಂದ ಓರ್ವ ಮಹಿಳೆ ಮೃತ ಹೊಂದಿದ್ದಾರೆ.  ಹೆಡ್ಡನಕಟ್ಟೆ ಸೇತುವೆ ಬಳಿ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಬಿ ಕ್ರಾಸ್ ಬಳಿಯ ಯಗಚೀಕಟ್ಟೆಯ ವ್ಯಕ್ತಿಯೋರ್ವ ಪಟ್ಟಣದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ತಿಪಟೂರು ರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡಲಾಗಿದೆ.
ಬೆಂಕಿ ದುರಂತ, ಮಹಿಳೆ ಸಾವು: ತಾಲೂಕಿನ ದಬ್ಬೇಘಟ್ಚದ ಮಂಜೇಗೌಡ ಎನ್ನುವವರ ಮನೆಗೆ ಬೆಂಕಿ ಬಿದ್ದಿದೆ. ಸೀಮೆಎಣ್ಣೆ ಹಾಗೂ ಪೆಟ್ರೋಲ್ ಅನ್ನು ಮಾರಾಟ ಮಾಡುವ ಸಲುವಾಗಿ ಮಂಜೇಗೌಡ ಮನೆಯಲ್ಲಿ ದಾಸ್ತಾನು ಮಾಡಿದ್ದರು ಎಂದು ಹೇಳಲಾಗಿದೆ. ಪೆಟ್ರೋಲ್ ಹಾಗೂ ಸೀಮೆಎಣ್ಣೆ ಇದ್ದ ಬಳಿಯೇ ಬೆಂಕಿ ಕಾಣಿಸಿಕೊಂಡು ದಿಢಿಡೀರನೇ ಮನೆಯನ್ನೆಲ್ಲಾ ಆವರಿಸಿದೆ. ಮನೆಯೊಳಗೆ ಮಂಜೇಗೌಡರ ಮಗ ಗಿರೀಶ್ (24) ಹಾಗೂ ಮಂಜೇಗೌಡರ ಪತ್ನಿ ಲಲಿತಮ್ಮ (44) ಇದ್ದರು. ಬೆಂಕಿಯ ಕೆನ್ನಾಲಿಗೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಸುಟ್ಟು ಹಾಕಿದೆ. ಮನೆಯಿಂದ ಹೊರಬಾರಲಾಗದ ಲಲಿತಮ್ಮ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳು ಆದವು. ಮಗ ಗಿರೀಶ್ಗೂ ಗಾಯವಾಗಿದೆ. ಮಂಜೇಗೌಡ ಮನೆಯೊಳಗಿದ್ದ ಮಗ ಹಾಗೂ ಪತ್ನಿಯನ್ನು ಉಳಿಸಲು ಹೋದಾಗ ಅವರಿಗೂ ಸ್ವಲ್ಪ ಪ್ರಮಾಣದ ಸುಟ್ಟ ಗಾಯಗಳು ಆಗಿವೆ. ಪತ್ನಿ ಲಲಿತಮ್ಮಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗಿನ ಜಾವ ಲಲಿತಮ್ಮ ಮೃತಪಟ್ಟಿದ್ದಾರೆ. ಮಗ ಗಿರೀಶ್ನನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮಂಜೇಗೌಡರನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈರ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಪಲ್ಟಿ: ತಾಲೂಕಿನ ಹೆಡ್ಡನಕಟ್ಟೆ ಸೇತುವೆ ಬಳಿ ರಾಜಸ್ಥಾನದಿಂದ ಮಂಡ್ಯಕ್ಕೆ ಟೈಲ್ಸ್ಗಳನ್ನು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ. ಲಾರಿ ಸೇತುವೆಯ ಕೆಳಕ್ಕೆ ಬಿದ್ದ ರಸಕ್ಕೆ ಲಾರಿಯ ಮುಂಭಾಗ ನುಜ್ಜುನುಜ್ಜಾಗಿದೆ. ಚಾಲನೆ ಮಾಡುತ್ತಿದ್ದ ಚಾಲಕ ಲೂನಾರಾಮ್ (40) ಅವರ ಕಾಲು ಲಾರಿಯೊಳಗೇ ಸಿಕ್ಕಿಹಾಕಿಕೊಂಡಿತ್ತು. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಸ್ಥಳೀಯ ಗ್ಯಾಸ್ ವೆಲ್ಡರ್ ಗಳು ಹರಸಾಹಸ ಪಟ್ಟು ಲಾರಿಯ ರಾಡುಗಳನ್ನು ತುಂಡಿ ಮಾಡಿ ಚಾಲಕನ ಕಾಲನ್ನು ಹೊರಗೆ ತೆಗೆದು ಪ್ರಾಣಾಪಾಯದಿಂದ ಕಾಪಾಡಿದರು. ಕ್ಲೀನರ್ ತೂರಾ ರಾಮ್ಗೂ ಕಾಲಿಗೆ ಪೆಟ್ಟು ಬಿದ್ದಿದೆ. ಈರ್ವರನ್ನೂ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹೆಡ್ಡನಕಟ್ಟೆಯ ಸೇತುವೆ ತೀರಾ ಚಿಕ್ಕದಾಗಿದ್ದು ಎದುರುಗಡೆ ಬಂದ ವಾಹನಕ್ಕೆ ದಾರಿ ಕೊಡಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  
ಕಳ್ಳತನ:  ಪಟ್ಟಣದ ತಿಪಟೂರು ರಸ್ತೆಯ ಎಂಎಸ್ಐಎಲ್ ಮಾರಾಟ ಮಳಿಗೆಯ ಬಳಿ ವಾಸವಿದ್ದ ಮೇಲನವರಗೇನಹಳ್ಳಿಯ ನಿವಾಸಿ ದೇವರಾಜು ಎಂಬುವವರ ಮನೆಯ ಬೀಗ ಒಡೆದು ಮನೆಯೊಳಗೆ ಪ್ರವೇಶ ಮಾಡಿರುವ ಕಳ್ಳರು ಬೀರುವಿನಲ್ಲಿದ್ದ 15 ಸಾವಿರ ರು. ನಗದು, ಎರಡು ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಹೊತ್ತೊಯ್ದಿದ್ದಾರೆ. ದೇವರಾಜು ಅವರು ತಮ್ಮ ಕುಟುಂಬದ ಸಹಿತ ತಮ್ಮ ಸ್ವಗ್ರಾಮ ಮೇಲವರಗೇನಹಳ್ಳಿಗೆ ಹೋಗಿದ್ದರು ಎನ್ನಲಾಗಿದೆ.
ಮುಖ್ಯಪೇದೆ ಸಾವು  ಪಟ್ಟಣದ ಪೋಲಿಸ್ ಇಲಾಖೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಚಂದ್ರಪ್ಪ (50) ನಿಧನರಾದರು. ಕಳೆದ ಕೆಲ ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ದಂಡಿನಶಿವರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.


ಆತ್ಮಹತ್ಯೆ
ತಿಪಟೂರು ತಾಲೂಕು ಯಗಚೀಕಟ್ಟೆಯಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಪ್ರಕಾಶ್ (40) ಎನ್ನುವವರು ಸ್ಥಳೀಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯದಲ್ಲಿ ಏರುಪೇರಿತ್ತು ಎನ್ನಲಾಗಿದೆ. ಇದರಿಂದ ಖಿನ್ನರಾಗಿದ್ದ ಅವರು ಭಾನುವಾರ ಅಂಗಡಿಯಿಂದ ಬಂದವರೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಯುವ ಮುನ್ನ ತನ್ನ ಸಾವಿಗೇ ತಾನೇ ಕಾರಣ ಎಂದು ಪತ್ರ ಸಹ ಬರೆದಿದ್ದರು ಎನ್ನಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.