ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿ
ಕ.ಪ್ರ.ವಾರ್ತೆ ತುಮಕೂರು ಡಿ. 7
ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ನಾಣ್ಣುಡಿಗೆ ಅರ್ಥ ಬರಬೇಕಾದರೆ ಸಮಾಜದಲ್ಲಿರುವ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ಇದಕ್ಕೆ ಅರ್ಥ ಬರುತ್ತದೆ. ಈ ಹಿನ್ನಲೆಯಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ಅವರು ತಾಲೂಕಿನ ಸಿರಿವರ ಸಮುದಾಯಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮೀಣ ಶೈಕ್ಷಣಾಭಿವೃದ್ಧಿ ಜಾಗೃತಿ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೊಂದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಅವರು ತಮ್ಮದೇ ಆದ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ಅವರ ಹೋರಾಟದ ಫಲವಾಗಿ ಸಂವಿಧಾನದಲ್ಲಿ ದಲಿತರ, ಪರಿಶಿಷ್ಟ ಜಾತಿ ವರ್ಗಗಳ ಅಭ್ಯುದಯಕ್ಕೆ ಅನುಕೂಲವಾಗುವಂತಹ ರೀತಿಯಲ್ಲಿ ಕಾನೂನುಗಳನ್ನು ರಚನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ದಲಿತರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು.
2ನೇ ಸ್ಥಾನದಲ್ಲಿ: ರಾಜ್ಯ ಸರ್ಕಾರ ಈಗ ನಡೆದ ಬೆಳಗಾವಿ ಅಧಿವೇಶನದಲ್ಲಿ ಕ್ರಾಂತಿಕಾರಿ ಕಾನೂನನ್ನು ಜಾರಿಗೊಳಿಸಿದೆ. ಇಂತಹ ಕಾನೂನು ಆಂಧ್ರ ಪ್ರದೇಶ ಬಿಟ್ಟರೆ ರಾಜ್ಯ ಎರಡನೇ ಸ್ಥಾನದಲ್ಲಿದೆ. ಈ ರಾಜ್ಯದ ಯೋಜನಾ
ಗಾತ್ರದ ಶೇ.24 ರಷ್ಟು ಹಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಕಾರ್ಯ ಶ್ಲಾಘನೀಯ ಎಂದರು.
ದಲಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರಬೇಕಾಗಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಮಾನವತಾವಾದಿ: ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಜಿ.ಪಂ. ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಅಂಬೇಡ್ಕರ್ ಅವರು ಈ ದೇಶ ಕಂಡ ಮಹಾನ್ ಮಾನವತಾವಾದಿಯಾಗಿದ್ದಾರೆ. ಮಹಾತ್ಮರು ನಮ್ಮಿಂದ ದೂರವಾಗಿದ್ದರೂ, ಅವರ ಆದರ್ಶ ಗುಣಗಳಿಂದ ನಮ್ಮ ಹತ್ತಿರದಲ್ಲಿರುತ್ತಾರೆ. ಅಂಬೇಡ್ಕರ್ ಈ ದೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸಿದವರು. ಇಂದಿಗೂ ಅವರ ನೆನಪು ನಮ್ಮಲ್ಲಿ ಇರಲು ಅವರ ಹೋರಾಟವೇ ಕಾರಣ ಎಂದರು.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಗಮನಿಸಿದರೆ ಇಂದು ಪ್ರಜಾಪ್ರಭುತ್ವ ಅಧಃಪತನದತ್ತ ಹೋಗುತ್ತಿರುವುದು ಕಂಡು ಬರುತ್ತಿದೆ. ಪ್ರಜೆಗಳೇಪ್ರಭುಗಳು ಎನ್ನುವ ವಾಕ್ಯ ಇಂದು ಇಲ್ಲವಾಗಿದೆ. ಸಂವಿಧಾನದತ್ತವಾದ ಪ್ರಜಾಪ್ರಭುತ್ವ ದೂರವಾಗಿ ಹಣವಿದ್ದವರು ಚುನಾವಣೆಯಲ್ಲಿ ಹಣ ಚೆಲ್ಲಿ ಗೆಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ, ರಾಜಕಾರಣಗಳು ಹೆಚ್ಚುತ್ತಿದ್ದು, ಜನಸಾಮಾನ್ಯರು ಹಣಕ್ಕಾಗಿ ತಮ್ಮ ಮತವನ್ನು ಮಾರಾಟ ಮಾಡಿಕೊಳ್ಳುತ್ತಿರುವುದರಿಂದ ಜನಪ್ರತಿನಿಧಿಗಳಾಗುವವರು ರಾಜಕಾರಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಬಂಡವಾಳ ಹೂಡಿ ನಂತರ ಬಂಡವಾಳ ತೆಗೆಯುವ ಪ್ರವೃತ್ತಿ ಹೆಚ್ಚಿದ್ದು, ಇದು ನಿಲ್ಲಬೇಕಾದರೆ ಜನ ಜಾಗೃತರಾಗಬೇಕು ಎಂದರು.
ಜಾತಿ ವ್ಯವಸ್ಥೆ ದೂರ: ಪತ್ರಕರ್ತ ಚಿ.ನಿ. ಪುರುಷೋತ್ತಮ್ ಮಾತನಾಡಿ 12 ನೇ ಶತಮಾನದ ಬಸವಣ್ಣನವರಿಂದ ಹಿಡಿದು ಡಾ. ಅಂಬೇಡ್ಕರ್ವರೆಗೆ ಎಲ್ಲ ಮಹನೀಯರು ಸಮಾಜದಲ್ಲಿ ಬೇರು ಮಟ್ಟದಿಂದ ಬಿಟ್ಟಿರುವ ಈ ಜಾತಿವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನ ನಡೆಸಿದ್ದಾರೆ. ಅದರ ಫಲವಾಗಿ ಇಂದು ಹಂತಹಂತವಾಗಿ ಜಾತಿ ವ್ಯವಸ್ಥೆ ದೂರವಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಎಲ್.ಬಿ. ನಾರಾಯಣಮೂರ್ತಿ, ಸಿರಿವರ ಗ್ರಾ.ಪಂ. ಅಧ್ಯಕ್ಷೆ ಚಿಕ್ಕಮ್ಮ, ಅಂಬೇಡ್ಕರ್ ಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಆರ್. ಶಿವಮೂರ್ತಿ, ಸಮಾಜ ಸೇವಕ ರಾಘವೇಂದ್ರ, ಚೌಡಪ್ಪ, ಸೀತಾರಾಮಯ್ಯ, ವೆಂಕಟೇಶ್, ಗಂಗಾಧರಪ್ಪ, ಮನೋಹರ್, ಹುಚಪ್ಪ, ಮಹಮದ್ ಅಯೂಬ್, ಲಕ್ಷ್ಮೀನರಸೇಗೌಡ, ರತ್ನಮ್ಮ, ಬೇಬಿಜಾನ್, ದೊಡ್ಡನರಸಪ್ಪ, ರುದ್ರಯ್ಯ, ಶಿವರಾಜ್, ಅನಸೂಯ, ಸಿರಿವರ ಶಿವರಾಂ, ಸಿದ್ಧಾರ್ಥ ಕಾಲೇಜಿನ ಪ್ರಾಧ್ಯಾಪಕ ಶಶಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

