ತುಮಕೂರು

ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ

Published On :

ತುಮಕೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿಕೊಡುವುದು ಜನಪ್ರತಿನಿಧಿಗಳ ಹಾಗೂ ಉಪನ್ಯಾಸಕರ ಕರ್ತವ್ಯ ಎಂದು ಶಾಸಕ ಪಿ.ಆರ್. ಸುಧಾಕರ್‌ಲಾಲ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2013-14ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮತ್ತು ಎನ್‌ಸಿಸಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಕಾಲೇಜು ಪೂರಕವಾದ ವಾತಾವರಣವನ್ನು ಒದಗಿಸಬೇಕು ಮತ್ತು ಪಠ್ಯ ಕಲಿಕೆಯೊಂದಿಗೆ ಸಾಮಾನ್ಯ ಜ್ಞಾನದ ತರಬೇತಿಯನ್ನು ಕಲಿಸಿದಲ್ಲಿ ಬಡ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಿಗೆ ಹೋಗಬಹುದು ಎಂದರು.
ಮುಂದಿನ ಶೈಕ್ಷಣಿಕ ದಿನಗಳಲ್ಲಿ ಶಾಸಕರು ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಭೆ ನಡೆಸಲಾಗುವುದು. ಸಭೆಯಲ್ಲಿ ಕಾಲೇಜಿನಲ್ಲಿನ ಕುಂದು-ಕೊರತೆ ಆಗಬೇಕಾದ ಕೆಲಸಗಳು ಅವಶ್ಯಕವಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿ ಅಭಿವೃದ್ಧಿಗೆ ಚಿಂತಿಸಲಾಗುವುದು ಎಂದ ಅವರು ಕಾಲೇಜಿನಲ್ಲಿ ಈಗಿರುವ ಪ್ರಯೋಗಾಲಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಶಾಸಕರ ನಿಧಿಯಿಂದ 5 ಕಂಪ್ಯೂಟರ್‌ಗಳನ್ನು ನೀಡಿ ಕಾಲೇಜಿನ ಉನ್ನತಿಗೆ ಸರ್ಕಾರದಿಂದ 30 ಲಕ್ಷ ರು.ಗಳನ್ನು ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಉತ್ತಮ ಹೆಸರು: ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನದ ಹನುಮಂತನಾಥ ಸ್ವಾಮೀಜಿ ಮಾತನಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಕೊರಟಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬೋಧನೆ, ಶಿಸ್ತು, ಫಲಿತಾಂಶದಲ್ಲಿ ಉತ್ತಮ ಹೆಸರು ಗಳಿಸಿದ್ದು, 80 ಕೋಟಿ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದೆ, ಆದ್ದರಿಂದ ಮಕ್ಕಳಿಗೆ ವಿದ್ಯಾ ದಾನ ಮಾಡುವುದು  ಪವಿತ್ರವಾದ ದಾನ ಎಂದರು.
ಅರಿವು ಮೂಡಿಸುವುದು ಕರ್ತವ್ಯ: ತುಮಕೂರು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮ ಕಷ್ಟವಾಗಬಹುದು. ಆದ್ದರಿಂದ ಶಿಕ್ಷಕರು ಶ್ರಮ ವಹಿಸಿ ಮಕ್ಕಳಿಗೆ ಪಠ್ಯದ ಬೋಧನೆ ಮಾಡಬೇಕು. ಸರ್ಕಾರಿ ಸೇವೆಯಲ್ಲಿ  ಉನ್ನತ ಸ್ಥಾನಗಳನ್ನು ಹೆಚ್ಚು ಅಲಂಕರಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳೇ ಎಂದ ಅವರು ಎನ್.ಸಿ.ಸಿ ಘಟಕ ಕಾಲೇಜಿನಲ್ಲಿ ಪ್ರಾರಂಭವಾಗಿರುವುದು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಹಾಗೂ ದೇಶದ ರಕ್ಷಣೆ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದರು.
ಬಿ.ಇ.ಓ ಮಹೇಶ್, ತುಮಕೂರು ಎನ್.ಸಿ.ಸಿ ಘಟಕದ ಕಾಮ್ಯಾಂಡರ್ ಅನುಪಮ್ ವರ್ಮ, ರಾಷ್ಟ್ರೀಯ ಸೇವಾ ಯೋಜನೆಯ ಕೃಷ್ಣಪರಮಾತ್ಮಾ, ಲೋಕೋಪಯೋಗಿ ಇಲಾಖೆಯ ಜಗದೀಶ್, ಜಿ.ಪಂ ಸದಸ್ಯರಾದ ದಾಕ್ಷಾಯಿಣಿ ರಾಜಣ್ಣ, ನಾರಾಯಣ ಮೂರ್ತಿ, ಪ.ಪಂ ಅಧ್ಯಕ್ಷ ಅಶ್ವತ್ಥ್, ಉಪಾಧ್ಯಕ್ಷ ನಯಾಜ್ ಅಹಮದ್, ಸದಸ್ಯ ಕೆ.ಎಲ್. ಆನಂದ್, ಪ್ರಾಚಾರ್ಯರಾದ ಮುದ್ದಪ್ಪ, ಮೀರ್ ಅಲೀಂ ಹುಸೇನ್, ಉಪನ್ಯಾಸಕರಾದ ಕೆ.ಎಸ್. ಈರಣ್ಣ, ಜಯರಾಂ, ಸುಗ್ಗಯ್ಯ, ಜಗದೀಶ್, ಧನಂಜಯ, ನಂಜುಂಡಯ್ಯ, ಜೆ.ಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ನರಸಿಂಹರಾಜು ಮುಖಂಡರರಾದ ಈಶ್ವರಪ್ಪ, ಅಶ್ವಥ್, ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.