ತುಮಕೂರು

ಮಂಡೇಲಾರಿಗೆ ಸ್ಫೂರ್ತಿಯಾಗಿದ್ದು ಭಾರತ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಡಿ. 9
ಜಾತಿಗೆ ಸೀಮಿತವಾದ ಸಭೆ, ಪ್ರತಿಭಾ ಪುರಸ್ಕಾರ ಸಮಾರಂಭಗಳು ಆಯಾ ಜಾತಿ ಮುಖಂಡರನ್ನು, ಸುಧಾರಕರನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದ ಎಂಬಂತೆ ಜಿಲ್ಲಾ ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ಧಿ ನೌಕರರ ಬಳಗದ ವತಿಯಿಂದ ಏರ್ಪಾಟಾಗಿದ್ದ ಮಹರ್ಷಿ ವಾಲ್ಮೀಕಿ  ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಜಾತ್ಯತೀತ ಸ್ಪರೂಪ ಪಡೆದುಕೊಂಡ ಘಟನೆ ತುಮಕೂರಿನಲ್ಲಿ ನಡೆಯಿತು.
ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದ್ದ ನಾಯಕ ಜಾತಿಗೆ ಸೀಮಿತವಾಗಿದ್ದ ಸಮಾರಂಭಕ್ಕೆ ಜಾತ್ಯತೀತ ಮೆರುಗು ಬಂದಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ವಾಲ್ಮೀಕಿ ಭಾವಚಿತ್ರ ಅನಾವರಣ ಮಾಡಿದ ಜನಾಂಗದ ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ, ಜನಾಂಗಕ್ಕೆ ಸೀಮಿತವಾಗಿದ್ದ ಸಭೆಯಲ್ಲಿ ಗಾಂಧಿ, ಅಂಬೇಡ್ಕರ್, ಮಂಡೇಲಾ ಹೋರಾಟ, ಸಾಧನೆ ಕುರಿತಂತೆ ವಾಗ್ಜರಿ ಹರಿಸಿ, ಸುದೀರ್ಘ ಉಪನ್ಯಾಸವನ್ನೇ ನೀಡಿದರು. ಈ ಮಹಾತ್ಮರ ಸಾಧನೆ, ಹೋರಾಟಗಳಿಂದ ನಾಯಕ ಜನಾಂಗ ಸೇರಿದಂತೆ ಎಲ್ಲ ಹಿಂದುಳಿದ, ದಲಿತರಿಗೆ ಸಾಮಾಜಿಕ ನ್ಯಾಯ ಸಿಗುವಂತಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಧನಿ ಎತ್ತುವಂತಾಗಿದೆ. ಅಧಿಕಾರ ಸಿಗುವಂತಾಗಿದೆ. ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಜಾತಿ, ಮತಗಳಾಚೆಗೆ ಚಿಂತಿಸಿದ ಮಹಾತ್ಮರು. ಅವರ ಹೋರಾಟದ ಫಲವನ್ನೇ ನಾವೆಲ್ಲಾ ಉಣ್ಣುತ್ತಿರುವುದು ಎಂದು ಕೆ.ಎನ್. ರಾಜಣ್ಣ ವಿಶ್ಲೇಷಿಸಿದರು. ಮಂಡೇಲಾ ಹುಟ್ಟೂರು ಆಪ್ರಿಕಾ ದೇಶಕ್ಕೆ ಭೇಟಿ ನೀಡಿದ್ದ ಪ್ರಸಂಗವನ್ನು ಕೆಎನ್‌ಆರ್ ಬಿಡಿಸಿಟ್ಟರು. ಒಂದೆರಡು ದಿನ ಏಕಾಂಗಿಯಾಗಿರುವುದೇ ಕಷ್ಟ. ಅಂತದ್ದರಲ್ಲಿ ಸತತವಾಗಿ 27 ವರ್ಷ ಜೈಲು ವಾಸ ಅನುಭವಿಸುವುದು ಎಂದರೆ ಸುಮ್ಮನೆ ಅಲ್ಲ. ಮಂಡೇಲಾರಿಗೆ ಸ್ಪೂರ್ತಿಯಾಗಿದ್ದು ಭಾರತದ ರಾಷ್ಟ್ರಪಿತ ಗಾಂಧಿ ಎಂಬುದು ಗಮನಾರ್ಹ. ಇವರೆಲ್ಲರ ಚಿಂತನೆ ಸದಾ ಆದರ್ಶ. ಅನುಕರಣೀಯ ಎಂದು ಕೆ.ಎನ್. ರಾಜಣ್ಣ ಪ್ರತಿಪಾದಿಸಿದರು.
ಅಸಹಾಯಕರ ಧನಿಯಾಗಲಿ: ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರ ಮುಖ್ಯ. ಈ ರಾಜಕೀಯ ಅಧಿಕಾರವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಈ ರಾಜಕೀಯ ಅಧಿಕಾರಕ್ಕೆ ಹೋರಾಟ ಅನಿವಾರ್ಯ. ಪ್ರಬಲ ಜಾತಿಯಲ್ಲಿ ಜನಿಸದೇ ಹೋದರೂ ಹೋರಾಟ ಮನೋಭಾವದ ಮೂಲಕ ಅಧಿಕಾರ ಹಿಡಿದಿರುವುದಕ್ಕೆ ನಾನೇ ಸಾಕ್ಷಿ. ಅದೂ ಇಂದಿನ ಜಾತಿ ವ್ಯವಸ್ಥೆ ವಿಪರೀತವಾಗಿರುವ ಸಂದರ್ಭದಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ, ಜಯಶಾಲಿಯಾಗಿರುವುದು, ಡಿಸಿಸಿ ಬ್ಯಾಂಕ್ ಅಧ್ಯಕ್ಷನೂ ಆಗಿರುವುದು ಸಾಮಾನ್ಯವೇನಲ್ಲ. ಆದರೆ ಈ ಅಧಿಕಾರ ಹಿಡಿಯುವಲ್ಲಿ, ಶಾಸಕನಾಗುವ ಹಂತದಲ್ಲಿ ತಮ್ಮದೇ ಜಾತಿ ಮತದಾರರ ಸಂಖ್ಯೆ ವಿರಳ. ಜಾತಿಯೇತರ ಮತದಾರರ ಸಂಖ್ಯೆ ಅಧಿಕ ಎಂಬುದನ್ನು ನೆನಪಿನಲ್ಲಿಡಬೇಕು. ತಮ್ಮದೇನಿದ್ದರೂ ಎಲ್ಲ ಅಸಹಾಯಕರ ಪರ ಹೋರಾಟ ಮಾಡುವ ಗುರಿ. ನಾಯಕ ಜನಾಂಗ ಎಲ್ಲ ಹಿಂದುಳಿದ, ಅಸಹಾಯಕರ ಪರ ಧ್ವನಿಯಾಗಲಿ ಎಂಬುದು ತಮ್ಮ ಅಭಿಲಾಷೆ. ಹೀಗಾದಾಗ ಗಾಂಧಿ, ಅಂಬೇಡ್ಕರ್ ಅವರ ಆಶಯಗಳಿಗೆ ಬೆಲೆ ಸಿಕ್ಕಂತಾಗುತ್ತದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೆ.ಎನ್. ರಾಜಣ್ಣ ಮಾರ್ಮಿಕವಾಗಿ ನುಡಿದರು.
ತಾವು ಡಿಸಿಸಿ ಬ್ಯಾಂಕ್‌ಗೆ ಪ್ರಥಮ ಬಾರಿಗೆ ನಿರ್ದೇಶಕರಾಗಲು 10 ವರ್ಷ ಕಾಯಬೇಕಾಯಿತು. ಆಗ ಬ್ಯಾಂಕಿನಲ್ಲಿ ಬಹುತೇಕ ಎರಡೇ ಜಾತಿಗೆ ಸೇರಿದ ನಿರ್ದೇಶಕರಿದ್ದರು. ಆದರೆ ಇಂದು ತಮ್ಮ ಅಧ್ಯಕ್ಷಗಿರಿಯಲ್ಲಿ ಎಲ್ಲ ಜಾತಿಗೆ ಸೇರಿದ ನಿರ್ದೇಶಕರಿರುವುದು ಗಮನಾರ್ಹ. ತಮಗೆ ನೀಡಿರುವ ಸಹಕಾರ ರತ್ನ ಪ್ರಶಸ್ತಿ  ಎಲ್ಲ ಸಮುದಾಯದವರಿಗೆ ಕಿರೀಟವಿದ್ದಂತೆ. ಈ ಪ್ರಶಸ್ತಿ ಜಾತಿಗೆ ಸೀಮಿತವಲ್ಲ. ಕೆಟ್ಟ ಹೆಸರು ಪಡೆಯುವುದು ಬಹಳ ಸುಲಭ. ತಾವು ಜಾತಿಗೆ, ಸಮಾಜಕ್ಕೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ. ಎಲ್ಲ ಅಧಿಕಾರಸ್ತರು ಕೆಳವರ್ಗದವರನ್ನು ಮೇಲೆತ್ತುವಂತಾಗಲಿ. ಸಮಸ್ಯೆಗಳ ನಿವಾರಣೆಗೆ ಶ್ರಮಿಸುವಂತಾಗಲಿ ಎಂದು ರಾಜಣ್ಣ ಆಶಿಸಿದರು.
ಸಾಧಕರ ಸ್ವತ್ತು: ವಿದ್ಯೆ ಸಾಧಕರ ಸ್ವತ್ತು. ಅದಕ್ಕೆ ಉದಾಹರಣೆ ಕಡುಬಡತನದ, ದಲಿತ ಹಿನ್ನೆಲೆಯಿಂದ ಬಂದ ಡಾ. ಬಿ.ಆರ್. ಅಂಬೇಡ್ಕರ್ ಅತ್ಯುತ್ತಮ ಉದಾಹರಣೆ. ಘಟಾನುಘಟಿಗಳ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಿ, ಸಂವಿಧಾನ ರಚಿಸಿದ್ದು ಅವರ ಹೆಗ್ಗಳಿಕೆ. ಅಂಬೇಡ್ಕರ್ ಅವರಂತಹ ನಾಯಕರ ಸೃಷ್ಟಿಯಾಗಬೇಕು. ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒಗ್ಗಟ್ಟು ಬಹಳ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಮತ ಆಯುಧವಾಗಲಿ. ಈ ನಿಟ್ಟಿನಲ್ಲಿ ಜನಾಂಗಕ್ಕೆ ವಾಲ್ಮೀಕಿ ಮಹಾಕಾವ್ಯ ಪ್ರೇರಣೆಯಾಗಲಿ ಎಂದು ಕೆ.ಎನ್.ಆರ್. ಕರೆ ನೀಡಿದರು.
ಹೋರಾಟ ಮಾಡೋಣ: ರಾಜ್ಯದಲ್ಲಿ ಸುಮಾರು 60 ರಿಂದ 70 ಲಕ್ಷ ನಾಯಕ ಜನಾಂಗದವರಿದ್ದರೂ ಶೇ. 3 ರಷ್ಟು ಮಾತ್ರ ಮೀಸಲು ದೊರೆಯುತ್ತಿದೆ. ಕೇಂದ್ರದಲ್ಲಿ ಶೇ.7.5 ರಷ್ಟು ಮೀಸಲು ದೊರೆಯುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಮೀಸಲು ದೊರೆಯಲು ಹೋರಾಟ ಮಾಡೋಣ ಎಂದರು. ಇದಕ್ಕೆ ಒಗ್ಗಟ್ಟಾಗಿ ಮತ ಚಲಾಯಿಸುವುದೊಂದೇ ಇರುವ ಮಾರ್ಗ ಎಂದರು. ಮೇಲ್ಜಾತಿ, ಕೆಳಜಾತಿ ಎಂದು ವರ್ಗೀಕರಿಸುವದಕ್ಕಿಂತ, ಮುಂದುವರೆದವರು, ಹಿಂದುಳಿದವರು ಎಂದು ವಿಂಗಡಿಸುವುದು, ಕರೆದುಕೊಳ್ಳುವುದು ಸೂಕ್ತ ಎಂದರು. ರಾಜ್ಯದ ಎಲ್ಲ ಸಮುದಾಯಗಳಿಗೂ ಮೂಲ ವೃತ್ತಿಯೆಂಬುದು ಇದೆ. ಆದರೆ ನಾಡಿನ ರಕ್ಷಣೆ ಕಾರ್ಯ ಮಾಡುತ್ತಲೇ ಬಂದ ನಾಯಕ ಜನಾಂಗಕ್ಕೆ ಮೂಲ ವೃತ್ತಿ ಎಂಬುದೇ ಇಲ್ಲದಂತಾಗಿದೆ. ಹೀಗಾಗಿ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ತುಳಸಿರಾಮಯ್ಯ, ಶಾಂತಲ ರಾಜಣ್ಣ, ಸಿ.ಬಿ. ರಂಗಯ್ಯ, ಡಾ. ಶ್ರೀಕಾಂತ್ ಬಾಸೂರ್,ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ರವಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.