ನಾವು ಯಾರಿಗೇನು ಕಡಿಮೆ ಇಲ್ಲಾರೀ...
ತುರುವೇಕೆರೆ: ನಾವು ಯಾರಿಗೇನು ಕಡಿಮೆ ಇಲ್ಲಾ ರೀ ಎಂಬಂತೆಯೇ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕಲಾ ಪ್ರೌಢಿಮೆಯನ್ನು ನೆರೆದಿದ್ದವರ ಮುಂದೆ ಪ್ರದರ್ಶಿಸಿ ಸೈ ಎನ್ನಿಸಿಕೊಂಡರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಕಂಡವರು ಮೂಗಿನ ಮೇಲೆ ಕೈ ಇಟ್ಟುಕೊಂಡು ಶಹಭಾಷ್ ಎನ್ನುತ್ತಿದ್ದರು. ಜೇಡಿ ಮಣ್ಣಿನ ರೀತಿ ಇರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಎಂತಹವರನ್ನೂ ಮೀರಿಸಬಲ್ಲರು ಎಂಬುದಕ್ಕೆ ಈ ವೇದಿಕೆ ಸಾಕ್ಷಿಯಾಗಿತ್ತು. ಮಕ್ಕಳು ತಮ್ಮಲ್ಲಿದ್ದ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ತನ್ನಂತೆಯೇ ಬಂದಿರುವ ಇತರರಲ್ಲಿ ಅಡಗಿರುವ ಕಲಾ ಪ್ರೌಢಿಮೆಯನ್ನು ನೋಡಿ ಸಂತಸ ಪಟ್ಟರು.
ಇವಿಷ್ಟೂ ಆಗಿದ್ದು ಪಟ್ಟಣದ ಗುರುಭವನದ ಮುಂಭಾಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ. ತಾಲೂಕಿನ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮಲ್ಲಿರುವ ಕಲೆಯನ್ನು ಹೊರಹಾಕಲು ತವಕ ಪಡುತ್ತಿದ್ದರು. ಅಲ್ಲಿ ಜಾನಪದ ನೃತ್ಯ, ಸೋಮನ ಕುಣಿತ, ಹುಲಿವೇಷ, ಪಾಳೇಗಾರನ ವೇಷ, ಕೋಲಾಟ, ಲಿಂಗದೇವರ ಕುಣಿತ, ಪೇಪರ್ ಮಾಡಲ್, ಜೇಡಿಮಣ್ಣಿನಲ್ಲಿ ಮೂಡಿಸಿದ ಕಲಾ ಕುಸರಿಗಳು, ದೇವತಾ ಸ್ತೋತ್ರ, ಭಾವಗೀತೆ, ದೇಶಪ್ರೇಮ ಗೀತೆ, ಛದ್ಮವೇಷ, ಗೀಗೀ ಪದಗಳು, ಪೌರಾಣಿಕ, ಸಾಮಾಜಿಕ ಹಾಗೂ ಹಾಸ್ಯ ನಾಟಕಗಳು ಹೀಗೆ ಒಂದೇ ಎರಡೇ... ನೂರೆಂಟು ಕಲೆಗಳು ಮಕ್ಕಳ ಮೂಲಕ ಅರಳಿ ನಿಂತವು. ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಂತೂ ಜಾನಪದ ಸೊಗಡಿನ ಹಲವಾರು ಕಲೆಗಳನ್ನು ಪ್ರದರ್ಶಿಸಿ ನೋಡುಗರ ಮನಸೂರೆಗೊಂಡರು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸೂಕ್ತವಾದ ತಿಳುವಳಿಕೆ, ಜ್ಞಾನ ನೀಡಿದರೆ ನಾವು ಯಾರಿಗೇನೂ ಕಡಿಮೆ ಇಲ್ಲಾರೀ ಎಂದು ಹೇಳುತ್ತಾ ತಮ್ಮ ಇಚ್ಛೆ ಇರುವ ಕ್ಷೇತ್ರಗಳಲ್ಲಿ ಬೆಳೆಯಲು ಸೂಕ್ತ ವೇದಿಕೆಯಾಗಲಿದೆ ಎಂಬುದನ್ನು ಮಕ್ಕಳು ತೋರ್ಪಡಿಸಿದರು.
ಬಿಇಓ ರಂಗಧಾಮಯ್ಯ, ಬಿ. ಆರ್. ಸಿ. ಚಂದ್ರಯ್ಯನವರ ಮಾರ್ಗದರ್ಶನದಲ್ಲಿ ನೂರಾರು ಶಿಕ್ಷಕರೂ ಸಹ ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರತರಲು ಶ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

