ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ
ತುಮಕೂರು: ನೇಕಾರರಿಂದ ಗ್ರಾಹಕರಿಗೆ ರಿಯಾಯತಿ ದರದಲ್ಲಿ ಉತ್ತಮ ಗುಣಮಟ್ಟದ ವಿವಿಧ ವಸ್ತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿರುವ ವಸ್ತುಪ್ರದರ್ಶನ ಮತ್ತು ಮಾರಾಟ ಕೇಂದ್ರದ ಉಪಯೋಗವನ್ನು ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.
ನಗರದ ಶಂಕರಮಠದ ಆವರಣದಲ್ಲಿ ಜವಳಿ ಮಂತ್ರಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ವಸ್ತ್ರಸಿರಿ ವಿಶೇಷ ಕೈಮಗ್ಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ಪಾದಕನಿಂದ ಗ್ರಾಹಕನಿಗೆ ನೇರವಾಗಿ ಉತ್ಪನ್ನಗಳು ಮಾರಾಟವಾಗುವುದರಿಂದ ಮಾರುಕಟ್ಟೆ ದರಕ್ಕಿಂತ ಅತಿಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟ ರೇಷ್ಮೆ, ಪಾಲಿಕಾಟನ್, ಕಂಬಳಿ ಸೇರಿದಂತೆ ಕೈಮಗ್ಗದಿಂದ ತಯಾರಿಸಿದ ಎಲ್ಲಾ ರೀತಿಯ ಉತ್ಪನ್ನಗಳು ದೊರೆಯುತ್ತಿದೆ. ಜಿಲ್ಲೆಯ ಜನರಿಗೆ ಇದೊಂದು ಸುವರ್ಣಾವಕಾಶ ಎಂದು ಶಾಸಕರು ನುಡಿದರು.
ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದರಾಜು ಮಾತನಾಡಿ, ರಾಜ್ಯದಲ್ಲಿ ನೇಕಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವಿಶೇಷ ಕೈಮಗ್ಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ನೇಕಾರರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶವೂ ಇದರ ಹಿಂದೆಇದ್ದು,ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ಜನ ವೀಕ್ಷಿಸಿ ಖರೀದಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಬೇರೆ ರಾಜ್ಯದವರು: ಸುಮಾರು 15 ದಿನಗಳ ಕಾಲ ನಡೆಯುವ ಈ ವಿಶೇಷ ಮೇಳದಲ್ಲಿ ರಾಜ್ಯದ ನೇಕಾರರೇ ಅಲ್ಲದೆ ಬೇರೆ ರಾಜ್ಯಗಳ ನೇಕಾರರು ತಮ್ಮ ಉತ್ಪನ್ನಗಳೊಂದಿಗೆ ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇಲ್ಲಿ ಮಾರಾಟವಾಗುವ ವಸ್ತುಗಳಿಗೆ ಶೇ 20 ರ ರಿಯಾಯಿತಿ ಘೋಷಿಸಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಗೋವಿಂದರಾಜು ನುಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸುರೇಶ್ಕುಮಾರ್ ಮಾತನಾಡಿ, ಈ ಮಾರಾಟ ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ನೇಕಾರರ ಜೊತೆಗೆ ಬೇರೆ ರಾಜ್ಯಗಳ ನೇಕಾರರು ಭಾಗವಹಿಸುವ ಮೂಲಕ ತಂತ್ರಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಮಾರಾಟಕ್ಕೆ: ಸರಕಾರಿ ಸಂಸ್ಥೆಗಳಾದ ಪ್ರಿಯದರ್ಶಿನಿಯೂ ಸಹ ತನ್ನ ಉತ್ಪನ್ನಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದೆ. ಪ್ರಮುಖವಾಗಿ ಇಳಕಲ್ ಸೀರೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಗುಳೇದ್ದಗುಡ್ಡ ಖಣ, ಕಾಟನ್ ಸೀರೆ,
ಬೆಡ್ಶಿಟ್, ಕಾರ್ಪೇಟ್, ಬೆಡ್ಸ್ಟ್ರೇಡ್, ಟವಲ್, ಕರವಸ್ತ್ರ, ಲುಂಗಿ, ಕಂಬಳಿ ಹಾಗೂ ಹಾಯ್ದ ಸಿದ್ಧ ಉಡುಪುಗಳು ಮಾರಾಟಕ್ಕೆ ಇಡಲಾಗಿದೆ. ತುಮಕೂರು ಜಿಲ್ಲೆಯ ವೈ.ಎನ್. ಹೊಸಕೊಟೆ ರೇಷ್ಮೆ ಕ್ಲಸ್ಟರ್, ಚಿಕ್ಕನಾಯಕನಹಳ್ಳಿ ಉಣ್ಣೇ ಕ್ಲಸ್ಟರ್ ಮತ್ತಿತರ ವಸ್ತುಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ದಾವಣಗೆರೆ, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ, ತುಮಕೂರು, ಉತ್ತರ ಪ್ರದೇಶ, ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಕೈಮಗ್ಗ ನೇಕಾರರ ಸಂಘಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ. 15 ದಿನದಲ್ಲಿ 50 ಸಾವಿರಕ್ಕೂ ಅಧಿಕ ಗ್ರಾಹಕರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಸುರೇಶ್ಕುಮಾರ್ ವಿವರ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಉಗ್ರಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

