ತುಮಕೂರು

ಶ್ರೀಯೋಗಾಂಜನೇಯ ನೂತನ ವಿಗ್ರಹದ ಉತ್ಸವ

Published On :

ಚಿಕ್ಕನಾಯಕನಹಳ್ಳಿ:  ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಶ್ರೀಯೋಗಾಂಜನೇಯ ಸ್ವಾಮಿಯ ನೂತನ ವಿಗ್ರಹದ ಉತ್ಸವ  ರಾಜಬೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಭಕ್ತಮಂಡಳಿ ಇತ್ತೀಚೆಗೆ ದಾನಿಗಳ ನೆರವಿನಿಂದ ಮಾಡಿಸಿರುವ ಉತ್ಸವ ಮೂರ್ತಿಯನ್ನು ನಾಲ್ಕು ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ದೇವಾಲಯಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಜಯರಾಮಯ್ಯ, ಕೆ.ಜಿ. ಕೃಷ್ಣೇಗೌಡ, ಹೊನ್ನಪ್ಪ, ಪೌರೋಹಿತರಾದ ವೇ.ಕುಮಾರಶಾಸ್ತ್ರಿ ಮುಂತಾದವರು ಪಾಲ್ಗೊಂಡಿದ್ದರು.
ತಪ್ಪಿದ ಬಸ್ ದುರಂತ
ತಿಪಟೂರು: ತುರುವೇಕೆರೆಯಿಂದ ತಿಪಟೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ತಿಪಟೂರು ಅಮಾನಿಕೆರೆ ಏರಿ ಮೇಲೆ ಬಸ್‌ನ ಮುಂಭಾಗದ ಚಕ್ರದ ಆಕ್ಸಲ್ ತುಂಡಾದ ಪರಿಣಾಮ ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಬಲಭಾಗದಲ್ಲಿರುವ ನೀರಿನ ಭಾಗಕ್ಕೆ ನಿರ್ಮಿಸಿರುವ ತಂತಿಯ ತಡೆಗೋಡೆ ಮತ್ತು ನೆಟ್ಟಿದ್ದ ಕಲ್ಲುಗಳು ಬಸ್ ಕೆರೆಗೆ ಉರುಳದಂತೆ ತಡೆಯಿತು. ತಡೆಗೋಡೆ ಇಲ್ಲದಿದ್ದರೆ ತುಂಬಿರುವ ಕೆರೆಗೆ ಬಸ್ ಧುಮುಕಿ 40ಕ್ಕೂ ಹೆಚ್ಚು ಪ್ರಯಾಣಿಕರು ದೊಡ್ಡ ಅನಾಹತಕ್ಕೆ ಈಡಾಗಬೇಕಾಗಿತ್ತು. ಆದರೆ ಬಸ್ಸಿನಲ್ಲಿದ್ದ ಯಾರಿಗೂ ತೊಂದರೆಯಾಗದಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ತಕ್ಷಣವೇ ಬಸ್ ಅನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ರಜೆ ನಗದೀಕರಣಕ್ಕೆ ಮನವಿ
ಕುಣಿಗಲ್: ತಾಲೂಕಿನ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ 2013-14 ನೇ ಸಾಲಿನ 15 ದಿನ ಗಳಿಕೆ ರಜೆ ನಗದೀಕರಣ ಸೌಲಭ್ಯವಿದ್ದು, ಸೌಲಭ್ಯವನ್ನು ಅರ್ಹ ಶಿಕ್ಷಕರು ಬಿಇಒ ಕಚೇರಿಗೆ ಅರ್ಜಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ. ರವಿಕುಮಾರ್ ಮತ್ತು ರಾಜ್ಯ ಸಂಘದ ಪದಾಧಿಕಾರಿ ನಾಗರಾಜ್ (ಗುರು) ಮನವಿ ಮಾಡಿದ್ದಾರೆ.
ಹುಳಿಯಾರು ವಿವಿಧೆಡೆ ಹನುಮಜಯಂತಿ
ಹುಳಿಯಾರು: ಪಟ್ಟಣ ಸೇರಿದಂತೆ ವಿವಿಧಡೆಯಲ್ಲಿ ನಡೆದ ಹನುಮ ಜಯಂತಿ ಅದ್ಧೂರಿಯಿಂದ ನಡೆಯಿತು. ಪಟ್ಟಣದ ವಾಸವಿ ದೇವಾಲಯದಲ್ಲಿ  ಸೀತಾರಾಮಾಂಜನೇಯ ಮೂರ್ತಿ ಅಲಂಕಾರದಿಂದ ಕಂಗೊಳಿಸಿದ್ದವು. ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.  ಸಮೀಪದ ಹೊಸಹಳ್ಳಿ ಹಾಗೂ ಸೀಗೆಬಾಗಿಯ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಮುಖ್ಯಪ್ರಾಣ ನಿಗೆ ವಿಶೇಷ ಪೂಜೆ, ಅಲಂಕಾರ ನಡೆದಿದ್ದು ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಅದ್ಧೂರಿ ಹನುಮ ಜಯಂತಿ ಜಯಂತಿ
ಮಧುಗಿರಿ: ಹನುಮ ಜಯಂತಿ ಪ್ರಯುಕ್ತ  ಪಟ್ಟಣದ ಡೂಂ ಲೈಟ್ ಸರ್ಕಲ್‌ನಲ್ಲಿ  ನೆಲಸಿರುವ ಶ್ರೀಕಲ್ಯಾಣ ಆಂಜನೇಯಸ್ವಾಮಿ ಮತ್ತು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿ ನೆಲೆಗೊಂಡಿರುವ ಶ್ರೀವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ  ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತಾದಿಗಳು ಶ್ರದ್ಧೆ, ಭಕ್ತಿಯಂದ ಹನುಮ ಜಯಂತಿ ಅಂಗವಾಗಿ ಪೂಜೆ ಸಲ್ಲಿಸಿ ಪುನಿತರಾದರು.
ಬಸ್ ನಿಲ್ಲಿಸದ್ದರಿಂದ ಬೇಸತ್ತ ವಿದ್ಯಾರ್ಥಿ: ಕಲ್ಲು ತೂರಿ ಆಕ್ರೋಶ
ಕುಣಿಗಲ್: ಖಾಸಗಿ ಬಸ್ಸಿನವರು, ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಹೊಗುತ್ತಿದ್ದರಿಂದ ಬೇಸತ್ತ ವಿದ್ಯಾರ್ಥಿಯೋರ್ವ, ಸೋಮವಾರ ಬಸ್ಸಿಗೆ ಕಲ್ಲು ತೂರಿದ ಪರಿಣಾಮ ಬಸ್ಸಿನ ಮುಂಬದಿಯ ಗಾಜು ಪುಡಿಪುಡಿಯಾದ ಘಟನೆ ವರದಿಯಾಗಿದೆ. ಕುಣಿಗಲ್‌ನಿಂದ ತುಮಕೂರಿಗೆ ತೆರಳುವ ಕೆಲ ಖಾಸಗಿ ಬಸ್‌ನವರು, ದಿನವೂ ಸುಂದರಕುಪ್ಪೆ ಗೇಟ್  (ವಡ್ಡರಕುಪ್ಪೆಗೇಟ್) ನಿಲ್ದಾಣದ ಬಳಿ ಸಮೀಪದ ಹಲವು ಶಾಲಾ, ಕಾಲೇಜಿಗೆ ತೆರಳಲು ಸಾಕಷ್ಟು ವಿದ್ಯಾರ್ಥಿಗಳು ನಿಂತಿದ್ದರೂ, ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸಿಕೊಳ್ಳದೆ ಹಾಗೇ ತೆರಳುತ್ತಿದ್ದು, ಈ ಬಗ್ಗೆ ಹಲವು ಬಾರಿ ಬಸ್ಸಿನವರಿಗೆ ಹೇಳಿದರೂ, ಬಸ್ಸಿನವರು ತಲೆಕೆಡಿಸಿಕೊಳ್ಳದೆ ತೆರಳುತ್ತಿದ್ದರು. ಶಾಲಾ, ಕಾಲೇಜು ಪ್ರಾರಂಭದ ಸಮಯಕ್ಕೆ ಸರಿಯಾಗಿ ಈ ಖಾಸಗಿ ಬಸ್ಸು ಹಾದು ಹೋಗುತ್ತಿದ್ದು, ವಿದ್ಯಾರ್ಥಿಗಳ ಮನವಿಗೆ ಲೆಕ್ಕಿಸದೆ ತೆರಳುತ್ತಿದ್ದರಿಂದ, ಸೋಮವಾರ ಬೇಸತ್ತ ವಿದ್ಯಾರ್ಥಿ ವಡ್ಡರಕುಪ್ಪೆ ಗೇಟ್ ಬಳಿ ಬಸ್ ಬಂದಾಗ, ದಿಢೀರ್ ಕಲ್ಲು ತೂರಿದ್ದರಿಂದ ಬಸ್ಸಿನ ಮುಂಭಾಗದ ಗಾಜು ಪುಡಿ, ಪುಡಿಯಾಯಿತು. ಇದರಿಂದ ಯಾರಿಗೂ ಹೆಚ್ಚು ತೊಂದರೆ ಆಗಲಿಲ್ಲ ಎನ್ನಲಾಗಿದೆ. ನಂತರ ಬಸ್ಸಿನವರು ಕಲ್ಲು ತೂರಿದವರನ್ನು ಹುಡಕಲು ಮುಂದಾದರೂ, ಅವರ ಯತ್ನ ಫಲ ನೀಡಲಿಲ್ಲ.
ಕಾರು ಡಿಕ್ಕಿ: ಸ್ಥಳದಲ್ಲೇ ಎಂಜಿನಿಯರ್ ಸಾವು
ಕುಣಿಗಲ್: ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವಾಹನ ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದು, ರಸ್ತೆಬದಿಗೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ರಾಹೆ 48ರ ಬೈಪಾಸ್‌ನ ಹೇರೂರು ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಮೃತ ಮಹಿಳೆಯನ್ನು ಮೂಲತಃ ನೋಣವಿನಕೆರೆ ಸಮೀಪದ ಮಾದೀಹಳ್ಳಿಯ, ಹಾಲಿ ಬೆಂಗಳೂರು ಬಸವೇಶ್ವರ ನಗರವಾಸಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಮಹಾಲಕ್ಷ್ಮೀ (25) ಎಂದು ಗುರುತಿಸಲಾಗಿದ್ದು ಈಕೆ ನಾಲ್ಕುತಿಂಗಳ ಗರ್ಭಿಣಿ. ತನ್ನ ಪತಿ ಆನಂದಕುಮಾರ್‌ರೊಂದಿಗೆ ಶನಿವಾರ ಮಾದೀಹಳ್ಳಿ ಗ್ರಾಮಕ್ಕೆ ಬಂದು, ಸೋಮವಾರ ಬೆಳಗಿನ ಜಾವ ಪುನಃ ಬೆಂಗಳೂರಿಗೆ ಕಾರಿನಲ್ಲಿ ಹಿಂದಿರುಗುವಾಗ, ರಾಷ್ಟ್ರೀಯ ಹೆದ್ದಾರಿ 48ರ ಪಟ್ಟಣದ ಬೈಪಾಸ್ ರಸ್ತೆಯ ಹೇರೂರು ಗ್ರಾಮದ ಬಳಿ ರಸ್ತೆವಿಭಜಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಗೆ ಉರುಳಿತು. ಪರಿಣಾಮ ಮಹಾಲಕ್ಷ್ಮೀ ಸ್ಥಳದಲ್ಲೆ ಮೃತಪಟ್ಟಿದ್ದು,  ಆನಂದ ಕುಮಾರ್ ವಾಹನ ಚಾಲನೆ ಮಾಡುತ್ತಿದ್ದು ಅವರೊಂದಿಗೆ ಮಾವ ನಂಜಪ್ಪ ಇದ್ದರು. ಇಬ್ಬರು ತೀವ್ರ ಗಾಯಗೊಂಡಿದ್ದು, ಗ್ರಾಮಸ್ಥರು ವಿಷಯ ತಿಳಿಸಿದ ಮೇರೆಗೆ, ಕುಣಿಗಲ್ ಪೊಲೀಸರು, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರವು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘದ ಸಹಯೋಗದೊಂದಿಗೆ ಡಿ.30ರಿಂದ 4ರವರೆಗೆ ಕೇಂದ್ರದ ಆವರಣದಲ್ಲಿ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಕುಣಿಗಲ್ ತಾಲೂಕಿನ 35ವರ್ಷದೊಳಗಿನ 20 ಯುವ ರೈತ ಹಾಗೂ ರೈತ ಮಹಿಳೆಯರಿಗೆ ಹಮ್ಮಿಕೊಂಡಿದೆ.
ಪ್ರತಿದಿನ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದ್ದು ತರಬೇತಿ ಪಡೆದ ಯುವ ರೈತ ಹಾಗೂ ರೈತ ಮಹಿಳೆಯರಿಗೆ ಸುಧಾರಿತ ತಂತ್ರಜ್ಞಾನದ ತೆಂಗಿನ ಮರ ಹತ್ತುವ ಸಾಧನವನ್ನು ವಿತರಿಸಲಾಗುವುದು. ಆಸಕ್ತ ಯುವ ರೈತ ಹಾಗೂ ರೈತ ಮಹಿಳೆಯರು ಡಿ.19ರೊಳಗೆ ತಮ್ಮ ಹೆಸರನ್ನು ಕಾರ್ಯಕ್ರಮ ಸಂಯೋಜಕರು (ಮೊ.9449866936), ಕೃಷಿ ವಿಜ್ಞಾನ ಕೇಂದ್ರ, ಬಿದರೆಗುಡಿ ಕಾವಲ್, ತಿಪಟೂರು ಅಥವಾ ವಿಷಯ
ತಜ್ಞರು, ಕೃಷಿ ವಿಸ್ತರಣೆ (ಮೊ.9945194872) ಅಥವಾ ಆಯಾ ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಬಹುದು. ಮೊದಲು ತಮ್ಮ ಹೆಸರನ್ನು ನೋಂದಾಯಿಸಿದವರಿಗೆ ಪ್ರಥಮ ಆದ್ಯತೆಯನ್ನು ಕೊಡಲಾಗುವುದು. ಶಿಬಿರಾರ್ಥಿಗಳು ತಮ್ಮ ವಯಸ್ಸಿನ ಬಗ್ಗೆ ಆಧಾರ ಪತ್ರವನ್ನು ನೋಂದಣಿ ಮಾಡಿಸುವ ಸಮಯದಲ್ಲಿ ಸಲ್ಲಿಸಬೇಕು.  
ಸರಣಿ ಅಪಘಾತ: ಲಕ್ಷಾಂತರ ರು. ದಾಳಿಂಬೆ ನಾಶ
ತುಮಕೂರು: ತುಮಕೂರಿನ ಅಂತರಸನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಸರಣಿ ಅಪಘಾತವಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕ್ಯಾಂಟರಿಗೆ ಗುಜರಾತ್ ಮೂಲದ ಲಾರಿ ಡಿಕ್ಕಿ ಹೊಡೆದಿದೆ ಮತ್ತೆ ಇನ್ನೊಂದು  ಲಾರಿಗೆ ಗುದ್ದಿದೆ. ಪರಿಣಾಮವಾಗಿ ಕ್ಯಾಂಟರನಲ್ಲಿದ್ದ ಲಕ್ಷಾಂತರ ರು. ದಾಳಿಂಬೆ ನಾಶವಾಗಿದೆ.
ಅಪಘಾತದಿಂದಾಗಿ ಎರಡು ಲಾರಿಗಳು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ: ವೈದ್ಯ ವಿದ್ಯಾರ್ಥಿನಿ ಸಾವು
ತುಮಕೂರು: ಲಾರಿಯೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಸಮೀಪದ ಜೋಗಿಹಳ್ಳಿಯಲ್ಲಿ ನಡೆದಿದೆ. ಹೇಮಾವತಿ (24) ಸಾವನ್ನಪ್ಪಿದ ದುರ್ದೈವಿ. ಈಕೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಓದುತ್ತಿದ್ದಳು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಜೋಗಿಹಳ್ಳಿಯಲ್ಲಿ ಊಟಕ್ಕೆಂದು ಬಸ್ ಅನ್ನು ನಿಲ್ಲಿಸಿದ್ದರು. ಆಗ ಹಿಂಬದಿಯಿಂದ ಬಂದ ಖಾಸಗಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.