ಸೇನೆ, ಪೊಲೀಸ್ ದೇಶದ ಆಧಾರ ಸ್ತಂಭ
ಜಿಲ್ಲಾಧಿಕಾರಿ ಪ್ರತಿಪಾದನೆ ್ಣ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ್ಣ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ ತುಮಕೂರು ಡಿ.19
ಸೇನೆ ಹಾಗೂ ಪೊಲೀಸ್ ದೇಶದ ಆಧಾರಸ್ತಂಭಗಳಿದ್ದಂತೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಪ್ರತಿಪಾದಿಸಿದರು.
ಅವರು ತುಮಕೂರಿನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸರ ವಾರ್ಷಿಕ ಕ್ರೀಡಾಕೂಟ- 2013 ಉದ್ಘಾಟಿಸಿ, ಗೌರವವಂದನೆ ಸ್ವೀಕರಿಸಿ ಮಾತನಾಡಿದರು.
ದೇಶದ ಗಡಿ ಕಾಯುವ ಯೋಧ ಮತ್ತು ಅಂತರಿಕ ಭದ್ರತೆಯನ್ನು ನಿರ್ವಹಿಸುವ ಪೊಲೀಸರು ಇಬ್ಬರೂ ಮುಖ್ಯ. ನಾಗರಿಕರು ಇಂದು ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ಪೊಲೀಸರ ಕರ್ತವ್ಯ ಪಾಲನೆಯೇ ಕಾರಣ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸಣ್ಣ ಘಟನೆಯಿಂದ ದೊಡ್ಡಘಟನೆಯವರೆಗೆ ಅಲ್ಲಿ ಪೊಲೀಸರ ಉಪಸ್ಥಿತಿ ಕಂಡು ಬರುತ್ತದೆ. ಇದರ ಜೊತೆಗೆ ಕೋರ್ಟು, ಕಾನೂನು ಎಂದು ತಿರುಗಾಡುವ ಪೊಲೀಸರು ತಮ್ಮ ಆರೋಗ್ಯದ ಜೊತೆಗೆ ಸ್ವ ಸಾಮರ್ಥ್ಯ ಕುಂದದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕೆ.ಎಸ್. ಸತ್ಯಮೂರ್ತಿ ತಿಳಿಸಿದರು.
ಸದಾಕಾಲ ಇನ್ನೊಬ್ಬರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರಿಗೆ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದು ಕೆ.ಎಸ್.ಸತ್ಯಮೂರ್ತಿ ಕಿವಿ ಮಾತು ಹೇಳಿದರು.
ಒತ್ತಡ ಮತ್ತು ಸಮಯದ ಅಭಾವದಿಂದ ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸುವುದು ಕಡಿಮೆ. ಕಚೇರಿಯ ಹೊರಗೆ ಬಿಸಿಲು, ಮಳೆ, ಚಳಿ ಎನ್ನದೆ ಕೆಲಸ ಮಾಡುವ ಪೊಲೀಸರ ಬದುಕು ನಿಜಕ್ಕೂ ತ್ರಾಸದಾಯಕ. ಇದರಿಂದ ಹೊರಬರಲು ಕ್ರೀಡೆಗಳತ್ತ ಗಮನಹರಿಸುವುದು ಉಚಿತ ಎಂದು ಸಲಹೆ ನೀಡಿದರು.
ಪ್ರೋತ್ಸಾಹಿಸುವ ದೃಷ್ಟಿಯಿಂದ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ಗುಪ್ತ ಮಾತನಾಡಿ, ಹಗಲು ರಾತ್ರಿ ಎನ್ನದೆ ಇಡೀ ವರ್ಷ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೆ ಪೊಲೀಸ್ ಕುಟುಂಬದಲ್ಲಿ ಹುಟ್ಟಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳನ್ನು ಗುರುತಿಸಿ ಸನ್ಮಾನಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಪೊಲೀಸರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಮುಖ್ಯವಾಗಿರುವುದರಿಂದ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ ಎಂದರು.
108 ವಸತಿ ಗೃಹ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತನ್ನದೇ ಆದ ವಸತಿ ಗೃಹ ಇರಲಿಲ್ಲ. ಇಂದು ಸರಕಾರ ಜಿಲ್ಲಾಧಿಕಾರಿಗಳ ಬಂಗಲೆ ಇರುವ ಜಾಗದಲ್ಲಿಯೇ ಎರಡು ಎಕರೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಸತಿ ಗೃಹಕ್ಕೆ ಮೀಸಲಿರಿಸಿ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮಂಡಳಿ ಸದ್ಯದಲ್ಲಿಯೇ ವಸತಿ ಗೃಹ ನಿರ್ಮಾಣ ಕಾರ್ಯ ಕೈಗೊಳ್ಳಲಿದೆ. ಇದರ ಜೊತೆಗೆ ಹೊಸದಾಗಿ ಬಾರ್ಲೈನ್ ರಸ್ತೆಯಲ್ಲಿರುವ ಪೊಲೀಸ್ ವಸತಿ ಸಮುಚ್ಚಯದ ಜಾಗದಲ್ಲಿಯೇ 255 ಹೊಸ ವಸತಿ ಗೃಹಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಮೊದಲ ಹಂತದಲ್ಲಿ 108 ಮನೆಗಳ ನಿರ್ಮಾಣ ಆರಂಭವಾಗಲಿದೆ. ಇದಕ್ಕೂ ಮೊದಲು ಹಾಲಿ ಶಿಥಿಲಗೊಂಡಿರುವ ಮನೆಗಳ ನೆಲ ಸಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅಲ್ಲಿಂದ ಅನುಮತಿ ದೊರೆತ ಕೂಡಲೇ ನೆಲಸಮಗೊಳಿಸಿ ಹೊಸ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಮಣ್ ಗುಪ್ತ ತಿಳಿಸಿದರು.
ಕಳೆದ ವರ್ಷದ ಚಾಂಪಿಯನ್ ಕ್ರೀಡಾಪಟು ಡಿಎಆರ್ನ ಚಂದ್ರಶೇಖರ್ ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ತಿಪಟೂರು, ಮಧುಗಿರಿ, ಕುಣಿಗಲ್, ತುಮಕೂರು ನಗರ, ಗ್ರಾಮಾಂತರ, ಡಿಎಆರ್ ಮತ್ತು ಮಹಿಳಾ ಪೊಲೀಸ್ ವಿಭಾಗಗಳ ಒಟ್ಟು 7 ತಂಡಗಳಿಂದ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಎ.ಎಸ್.ಪಿ ಆರ್.ಲಕ್ಷ್ಮಣ್, ಐದು ಉಪವಿಭಾಗಗಳ ಡಿವೈಎಸ್ಪಿಗಳು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಡ್ಡಿ ಗುಡ್ಡವಾಗುವ ಸಂಭವ
ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಡ್ಡಿ ಗುಡ್ಡವಾಗುವ ಸಂಭವವಿರುತ್ತದೆ. ಆದ್ದರಿಂದ ಪೊಲೀಸರು ಪ್ರತಿಯೊಂದು ವಿಷಯದ ಬಗ್ಗೆಯೂ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಧಾರ್ಮಿಕವಾಗಿ, ರಾಜಕೀಯವಾಗಿ ತುಮಕೂರು ಅತ್ಯಂತ ಸೂಕ್ಷ್ಮ ಜಿಲ್ಲೆ. ಕಳೆದ ನವೆಂಬರ್ನಲ್ಲಿ ನಡೆದ ಗೊರವನಹಳ್ಳಿ ಘಟನೆಯಲ್ಲಿ ಪೊಲೀಸರು ಪ್ರವೇಶ ಕೊಂಚ ತಡವಾಗಿದ್ದರೂ ಜಿಲ್ಲಾಡಳಿತದ ಮೇಲೆ ಕಪ್ಪುಚುಕ್ಕೆ ಉಂಟು ಮಾಡುತ್ತಿತ್ತು. ಯಾರೋ ಮಾಡುವ ಹಬ್ಬ, ಧಾರ್ಮಿಕ ಸಭೆಗಳಲ್ಲಿ ಆಗುವ ಸಣ್ಣ ತಪ್ಪಿನಿಂದ ಆಗುವ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 2013 ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಲು ತುಂಬಾ ಸಂತೋಷವಾಗುತ್ತಿದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ, ಜೊತೆಗೆ ತಮ್ಮ ಕುಟುಂಬದ ಯೋಗಕ್ಷೇವುದ ಕಡೆಗೂ ಗಮನಹರಿಸಿ ಎಂದು ಕೆ.ಎಸ್.ಸತ್ಯಮೂರ್ತಿ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

