2006ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಬೇಡ
ಕ.ಪ್ರ.ವಾರ್ತೆ , ತುಮಕೂರು , ಡಿ. 20
2006ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಖಂಡಿಸಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಶಿವಕುಮಾರಸ್ವಾಮಿ ವೃತ್ತದ ಬಳಿ ನೂರಾರು ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಸಮಾವೇಶಗೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ತೊಂದರೆ: 2006ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಮಾಡುವ ಸರ್ಕಾರದ ತೀರ್ಮಾನದಿಂದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಭಾರಿ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸರ್ಕಾರದ ವಿರುದ್ಧ ಆಕ್ರೋಶ: ಬಡ, ಮದ್ಯಮ ವರ್ಗದ ಅಷ್ಟೇಕೆ ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಮಕ್ಕಳಿಗೂ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ ಭರಿಸಿ ಶಿಕ್ಷಣ ಪಡೆಯಲು ಸಾಧ್ಯವೇ ಇಲ್ಲದ ಮಾತಾಗಿದೆ. ಈ ಹಿನ್ನಲೆಯಲ್ಲಿಯೇ ರಾಜ್ಯ ಸರ್ಕಾರ ಅಂದು 2006ರ ಕಾಯ್ದೆ ಜಾರಿಗೊಳಿಸದೇ ಕೈ ಬಿಟ್ಟಿತ್ತು. ಈಗ ಅದೇ ಕಾಯ್ದೆಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿಗೆ ಲಾಭ: ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಹೊರಟಿರುವ ಈಗಿನ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈಬಿಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ದುಬಾರಿ ಶುಲ್ಕ: ರಾಜ್ಯದ ಯಾವುದೇ ವೃತ್ತಿ ಶಿಕ್ಷಣ ಖಾಸಗಿ ಕಾಲೇಜಿನಲ್ಲಿ ಇನ್ನು ಮುಂದೆ ಸರ್ಕಾರಿ ಸೀಟುಗಳಿರುವುದಿಲ್ಲ. ಹಿಂದೆ ಸರ್ಕಾರಿ ಶುಲ್ಕಕ್ಕೆ ಲಭ್ಯವಾಗುತ್ತಿದ್ದ ಕಡಿಮೆ ಶುಲ್ಕದ ಸೀಟುಗಳು ಇರುವುದಿಲ್ಲ. ರಾಜ್ಯದ ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಸರ್ಕಾರ ನೇಮಿಸಲಾದ ಶುಲ್ಕ ಸಂರಚನಾ ಸಮಿತಿ ಅಥವಾ ಶುಲ್ಕ ಮೇಲುಸ್ತುವಾರಿ ಸಮಿತಿ ಶುಲ್ಕ ನಿರ್ಧರಿಸುತ್ತದೆ. ಅಂದರೆ ಈ ಹಿಂದೆ ಇದ್ದ ರು.38 ಸಾವಿರ ಗಳಿಗೆ ಸಿಗುತ್ತಿದ್ದ ಸೀಟು ಇನ್ನು ಮುಂದೆ ಪ್ರಾಯಶಃ ಯಾವ ಕಾಲೇಜಿನಲ್ಲಿಯೂ ಲಭ್ಯವಿರುವುದಿಲ್ಲ ಎಂದರು. ಹೆಚ್ಚೆಚ್ಚು ಗುಣಮಟ್ಟವಿರುವ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಪ್ರವೇಶ ಪಡೆಯ ಬಯಸಿದರೆ ಲಕ್ಷಾಂತರ ರುಪಾಯಿ ಶುಲ್ಕ ಭರಿಸಬೇಕಾಗುತ್ತದೆ. ಈ ಶುಲ್ಕವನ್ನು ಭರಿಸಲು ಸಾಮಾನ್ಯ ಬಡ, ಮದ್ಯಮದ ವಿದ್ಯಾರ್ಥಿಗಳಿಗೆ ಸಾಧ್ಯವೇ ಇಲ್ಲ.
ವೈದ್ಯಕೀಯ, ದಂತ ವೈದ್ಯಕೀಯದ ಶಿಕ್ಷಣವಂತೂ ಬಡ, ಮದ್ಯಮ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕನಸಿನ ಮಾತಾಗುತ್ತದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ತೊಂದರೆ: 2006ರ ಕಾಯ್ದೆಯ ಪ್ರಕಾರ ಇನ್ನು ಮುಂದೆ ಸರ್ಕಾರಿ ಮತ್ತು ಅನುಧಾನಿತ ಕಾಲೇಜುಗಳಿಗೆ ಮಾತ್ರ ಸರ್ಕಾರದಿಂದ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಅನ್ವಯಿಸುತ್ತದೆ. ಉಳಿದ ಖಾಸಗಿ ಕಾಲೇಜುಗಳಿಗೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಇದರಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸೀಟುಗಳ ಕೊರತೆ ಮತ್ತು ಶುಲ್ಕ ಹೆಚ್ಚಳವಾಗುತ್ತದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ 2006 ರ ಕಾಯ್ದೆ ಪ್ರಕಾರ ಪ್ರತಿಯೊಂದು ಕಾಲೇಜಿನ ಮೂಲಸೌಕರ್ಯ ಮತ್ತು ಗುಣಮಟ್ಟ ಆಧರಿಸಿ ಏಕರೂಪದ ಶುಲ್ಕ ಇರುತ್ತದೆ. ಅಂದರೆ ಪ್ರತಿಯೊಂದು ಕಾಲೇಜಿಗೂ ಒಂದೊಂದು ರೀತಿಯ ಸಾಮಾನ್ಯ ಶುಲ್ಕವಿರುತ್ತದೆ. ಆ ಶುಲ್ಕ ಈಗ ಜಾರಿಯಲ್ಲಿರುವ ಸರ್ಕಾರಿ ಸೀಟುಗಳಿಗೆ ಇರುವ ಶುಲ್ಕಕ್ಕಿಂತ 3-4 ಪಟ್ಟು ಜಾಸ್ತಿ ಇರುತ್ತದೆ. ವೈದ್ಯಕೀಯ-ದಂತವೈದ್ಯಕೀಯ ಸೀಟಿಗಂತೂ 8 ರಿಂದ 10 ಪಟ್ಟು ಜಾಸ್ತಿ ಶುಲ್ಕ ಇರುತ್ತದೆ. ಈ ಶುಲ್ಕವನ್ನು ಭರಿಸಿ ವೃತ್ತಿ ಶಿಕ್ಷಣ ಪಡೆಯುವುದಂತೂ ಬಡ, ಮದ್ಯಮ, ಮೇಲ್ಮಧ್ಯಮ, ಹಾಗೂ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಮಕ್ಕಳಿಗೂ ಈ ಪ್ರಮಾಣದ ಶುಲ್ಕ ಭರಿಸಿ ವೃತ್ತಿಶಿಕ್ಷಣ ಪಡೆಯುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ಕೇಂದ್ರೀಕೃತ ಕೌನ್ಸಲಿಂಗ್ ನಡೆಯಲಿ: ಖಾಸಗಿ ಕಾಲೇಜುಗಳು ತಮ್ಮ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ಕಾಮೆಡ್-ಕೆ ಮೂಲಕ ಕೇಂದ್ರೀಕೃತ ಕೌನ್ಸಲಿಂಗ್ನಡಿ ಸೀಟುಗಳಿಗೆ ಪ್ರವೇಶ ಕಲ್ಪಿಸಬೇಕಿದೆ ಎಂದಿದ್ದಾರೆ.
ಕಾಮೆಡ್-ಕೆ ರಾಜ್ಯದ ವೃತ್ತಿಶಿಕ್ಷಣ ಸಂಸ್ಥೆಗಳ ಒಕ್ಕೂಟವಾಗಿದ್ದು ಇದು ಭಾರಿ ಲಕ್ಷಾಂತರ ರೂ ಗಳಿಂದ ಹಿಡಿದು ಕೋಟ್ಯಾಂತರ ರೂ.ಗಳ ವರೆಗೆ ವಿದ್ಯಾರ್ಥಿ ಪೋಷಕರಿಂದ ಹಣವನ್ನು ಬಾಚಿಕೊಳ್ಳುವ ಒಕ್ಕೂಟ ಎಂದು ಎಬಿವಿಪಿ ಜರಿದಿದೆ. ಇಲ್ಲಿ ಸರ್ಕಾರದ ಯಾವುದೇ ಕಾಯಿದೆ-ಕಾನೂನುಗಳು, ನೀತಿ-ನಿಯಮಗಳು ಪಾರದರ್ಶಕವಾಗಿ ಜಾರಿಯಾಗುವುದಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡುವ ಒಕ್ಕೂಟ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕಾಮೆಡ್-ಕೆ ಒಕ್ಕೂಟದ ಬಗ್ಗೆ ಪ್ರವೇಶ ಮೇಲುಸ್ತುವಾರಿ ಮತ್ತು ಶುಲ್ಕ ಮೇಲುಸ್ತುವಾರಿ ಸಮಿತಿಗಳು ನೀಡಿರುವ ದೂರುಗಳ ಬಗ್ಗೆ ಇದುವರೆಗೆ ಯಾವುದೇ ಸರ್ಕಾರ ಕ್ರಮ ಕೈಗೊಳ್ಳದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮೆಡ್-ಕೆ ಕುರಿತಂತೆ ಹಿಂದಿನ ಮೇಲುಸ್ತುವಾರಿ ಸಮಿತಿಗಳ ಬಳಿಯಿರುವ ದೂರುಗಳನ್ನು ಬಹಿರಂಗಗೊಳಿಸಬೇಕಾಗಿ ಎಬಿವಿಪಿ ಆಗ್ರಹಿಸಿದೆ. ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು. ಶೇ.50 ಸೀಟುಗಳಿಗೆ ಈಗಿರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು. ಉಳಿದ ಶೇ.50 ಸೀಟುಗಳಿಗೆ ಮ್ಯಾನೇಜ್ಮೆಂಟ್ಗಳೊಂದಿಗೆ ಕುಳಿತು ಶುಲ್ಕ ನಿರ್ಧರಿಸಬೇಕು.
2006 ರ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ವೃತ್ತಿ ಶಿಕ್ಷಣದ ತೀರ್ಪನ್ನು ಜಾರಿಗೊಳಿಸಬಾರದು. ಏಕೆಂದರೆ ಅದು ವಿದ್ಯಾರ್ಥಿಗಳ ಹಿತಕ್ಕೆ ವಿರುದ್ಧವಾಗಿದೆ ಎಂದು ಎಬಿವಿಪಿಯ ಅಮರೇಶ್, ಸುಬ್ರಮಣಿ, ವೆಂಕಟೇಶ್ ಸೇರಿದಂತೆ ಮತ್ತಿತರೆ ಕಾರ್ಯಕರ್ತರು ಕಿಡಿಕಾರಿದ್ದಾರೆ.
ತಿಪಟೂರಿನಲ್ಲೂ ಎಬಿವಿಪಿ ಪ್ರತಿಭಟನೆ
ತಿಪಟೂರು: ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರವು ಸಿಇಟಿ 2006ರ ಕಾಯ್ದೆ ಬದಲಾಯಿಸುವ ಮೂಲಕ ಅಕ್ಷರ ಭಾಗ್ಯಕ್ಕೆ ಕನ್ನ ಹಾಕುತ್ತಿದೆ ಎಂದು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಶಾಖೆ ವತಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಂಜುನಾಥ್ ರಾಜ್ಯ ಸರ್ಕಾರದ ಈ ತಪ್ಪು ನಿರ್ಧಾರದಿಂದಾಗಿ ರಾಜ್ಯದ ಯಾವುದ ಖಾಸಗಿ ಅನುಧಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಯಾವುದೇ ಸೀಟುಗಳು ಇರುವುದಿಲ್ಲ. ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಮೆಡ್-ಕೆ ನಡೆಸುವ ಪರೀಕ್ಷೆ ಬರೆಯಬೇಕಾಗುತ್ತದೆ ಸರ್ಕಾರಿ ಮತ್ತು ಅನುಧಾನಿತ ಕಾಲೇಜುಗಳು ಅಂದರೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ ಅನ್ವಯವಾಗುತ್ತದೆ ಎಂದು ಕಿಡಿಕಾರಿದರು. ಎಬಿವಿಪಿ ಮುಖಂಡರಾದ ಹರಿಪ್ರಸಾದ್, ನವೀನ್, ಪ್ರಶಾಂತ್,ಅಜಿತ್ ಕಷ್ಯಪ್, ಉದಯ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

