ಮಕ್ಕಳು ಬಾಲ್ಯಾವಸ್ಥೆ ಕಳೆಯಲು ಬಿಡಿ
ತುಮಕೂರು: ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳುವ ಪ್ರಯತ್ನ ಎಂಬಂತೆ ತಮ್ಮ ಮಕ್ಕಳ ವಿವಾಹವನ್ನು ಆತುರಾತುರವಾಗಿ ಮಾಡುವ ಮನೋಭಾವ ದೂರ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎನ್. ಸುಜಾತ ಕಿವಿಮಾತು ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತಂತೆ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಬಾಲ್ಯಾವಸ್ಥೆಯನ್ನು ಕಳೆಯಬೇಕು. ಬೆಳೆಯುವ ಕುಡಿಗಳಿಗೆ ಬಂಧನದ ಗಂಟು ತಗುಲಿಸಿ, ವೈವಾಹಿಕ ಬಂಧನಕ್ಕೆ ಒಳಪಡಿಸುವುದು ಸರಿಯಲ್ಲ. ತಮ್ಮ ಜವಾಬ್ದಾರಿಗಳನ್ನು ಕಳೆದು ಕೊಳ್ಳಲು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರಿ ಅಧಿಕಾರಿಗಳ ಜತೆ ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ಸುಜಾತ ಪ್ರತಿಪಾದಿಸಿದರು.
ಅಧಿಕಾರಿಗಳಿಗೆ ಮಾಹಿತಿ ನೀಡಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ಬಾಲ ನ್ಯಾಯ ಕಾಯ್ದೆ 2000 ಅನ್ವಯ 18 ವರ್ಷದೊಳಗಿನ ಎಲ್ಲರೂ ಮಕ್ಕಳು ಎಂದು ಕರೆಯಲಾಗುತ್ತದೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಕಂಡು ಬಂದಲ್ಲಿ ಅವರನ್ನು ಈ ಕಾಯ್ದೆಯ ಜತೆಯಲ್ಲಿ ಕೇಸು ದಾಖಲಿಸುವ ಜತೆಯಲ್ಲೇ ವಿವಾಹಕ್ಕೆ ಒಳಪಟ್ಟಿರುವ ಅಪ್ರಾಪ್ತರನ್ನು ಪೋಷಣೆ ಮತ್ತು ರಕ್ಷಣೆ ದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮುಂದಿನ ಪುನರ್ ವಸತಿ ಕಲ್ಪಿಸಲು ನೆರವಾಗಬೇಕಾಗುತ್ತದೆ. ಜಿಲ್ಲೆಯಲ್ಲಿ ಎಲ್ಲಿಯೇ ಆಗಲಿ ಬಾಲ್ಯ ವಿವಾಹಗಳು ಕಂಡು ಬಂದರೆ ಕೂಡಲೇ ಅಂತಹ ವರದಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಲ್ಲದೆ ಪೊಲೀಸರ ಜತೆಗೂಡಿ ಮುಂದಿನ ಪ್ರಕ್ರಿಯೆ ಪಾಲಿಸಲು ಮುಂದಾಗಬೇಕು. ಶಾಲಾ ಮುಖ್ಯೋಪಾಧ್ಯಾಯರು, ಪಿಡಿಒಗಳು, ಗ್ರಾಪಂ, ಗ್ರಾಪಂ ಲೆಕ್ಕಿಗರು, ಸಬ್ಇನ್ಸ್ಪೆಕ್ಟರ್ ಇತರೆ ಅಧಿಕಾರಿಗಳು ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಕರೆ ನೀಡಿದರು.
2 ವರ್ಷಗಳ ಕಠಿಣ ಶಿಕ್ಷೆ: ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಮಕ್ಕಳ ಸಮಿತಿ ಸದಸ್ಯ ಸಾ.ಚಿ. ರಾಜಕುಮಾರ್ ಮಾತನಾಡಿ, 1929ರಲ್ಲಿ ಮೊದಲ ಬಾರಿಗೆ ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಲವು ತಿದ್ದುಪಡಿಗಳೊಂದಿಗೆ 2006 ರಲ್ಲಿ ಪರಿಷ್ಕೃತಗೊಂಡಿದೆ. ಕಾಯ್ದೆ ಪ್ರಕಾರ 18 ವರ್ಷದೊಳಗಿನ ಹುಡುಗಿ, 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅಪರಾಧವಾಗುತ್ತದೆ. ಇದಕ್ಕೆ ಪ್ರೋತ್ಸಾಹಿಸಿದವರೂ, ಪಾಲ್ಗೊಂಡವರೂ, ವಿವಾಹ ಮಾಡಿಕೊಂಡ ಹುಡುಗ ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಕಾನೂನು ಪ್ರಕಾರ ಶಿಕ್ಷಾರ್ಹರು. ಇವರಿಗೆ 2 ವರ್ಷಗಳ ಕಾಲ ಕಠಿಣ ಶಿಕ್ಷೆ, ಜೈಲುವಾಸ ಹಾಗೂ ಒಂದು ಲಕ್ಷ ರು. ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳು ಬದ್ಧರಾಗಬೇಕು: ಬಾಲ್ಯ ವಿವಾಹ ತಡೆಯುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಕಾಯ್ದೆ ಉಲ್ಲಂಘಿಸಿದವರಿಗೆ ಜೈಲು ವಾಸ ಕಡ್ಡಾಯ. ಕಾಯ್ದೆ ಕಲಂ 16 ರಲ್ಲಿ ಇದನ್ನು ತಡೆಯಲು ವಿವಿಧ ಹಂತದ ಅಧಿಕಾರಿಗಳನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳೆಂದು ಘೋಷಣೆ ಮಾಡಲಾಗಿದ್ದು, ಇವರೆಲ್ಲರೂ ಬಾಲ್ಯ ವಿವಾಹ ತಡೆಗಟ್ಟಲು ಕಟಿಬದ್ಧರಾಗಿರಬೇಕಾಗುತ್ತದೆ ಎಂದರು. ಇದೇ ವೇಳೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಸ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿದರು.
ಮಕ್ಕಳು ಸಮಾಜದ ಪ್ರಮುಖ ಭಾಗ: ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಏಕೇಶ್ಬಾಬು ಮಾತನಾಡಿ, ಹಲವು ಸಮಸ್ಯೆ ಹಾಗೂ ಸಂಪ್ರದಾಯಗಳಿಗೆ ಕಟ್ಟು ಬಿದ್ದು, ಬಾಲ್ಯ ವಿವಾಹ ನೆರವೇರಿಸುವ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಈ ಪಿಡುಗು ಹೆಚ್ಚಾಗಿದೆ. ತುಮಕೂರು ಜಿಲ್ಲೆಯಲ್ಲಿಯೂ ಈ ಬಾಲ್ಯವಿವಾಹ ಪಿಡುಗು ಆಗಾಗ್ಗೆ ಕಾಣಿಸಿಕೊಂಡು, ಮರೆಯಾಗುತ್ತಿರುವುದು ವಿಷಾದಕರ ಎಂದರು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳು ಸಹ ಸಮಾಜದ ಒಂದು ಪ್ರಮುಖ ಭಾಗವಾಗಬೇಕು. ಆತುರಾತುರವಾಗಿ ವಿವಾಹ ಮಾಡುವುದರ ಮೂಲಕ ಅವರ ಭವಿಷ್ಯ ಹಾಳು ಮಾಡಬಾರದು ಎಂದು ಅವರು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ, ತಾಲೂಕು ಪಂಚಾಯ್ತಿ ಇಒ ವಿಜಯ್ಕುಮಾರ್, ಸಮಾಜ ಕಲ್ಯಾಣಾಧಿಕಾರಿ ರಾಜು, ಬಿಸಿಎಂ ಅಧಿಕಾರಿ ರಂಗಸ್ವಾಮಯ್ಯ, ಕಾರ್ಮಿಕ ಅಧಿಕಾರಿ ಸಿದ್ದಪ್ಪ ಇತರರು ಉಪಸ್ಥಿತರಿದ್ದರು. ಮಮತಾ ಪ್ರಾರ್ಥಿಸಿ, ಸಿಡಿಪಿಒ ಮಲ್ಲಯ್ಯ ಸ್ವಾಗತಿಸಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಂಜನಪ್ಪ ಕಾರ್ಯಕ್ರಮ ನಿರೂಪಿಸಿ, ಶೋಭಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

